ಕಾಂಗ್ರೆಸ್ ಆಪಾದಿಸುವ ನೈತಿಕತೆ ಬಿಜೆಪಿಗಿಲ್ಲ

BHIMANNA NAIK
Published on

ಶಿರಸಿ: ಬಿಜೆಪಿ ಸರ್ಕಾರದ ಅವಧಿಯಲ್ಲಾದ ಹಗರಣಗಳನ್ನು ನೋಡಿಯೇ ಜನ ಬೇಸತ್ತು ನಮಗೆ ಅಧಿಕಾರ ನೀಡಿದ್ದಾರೆ. ನಮ್ಮ ಬಗ್ಗೆ ಆಪಾದನೆ ಮಾಡುವ ನೈತಿಕತೆ ಬಿಜೆಪಿಗೆ ಇಲ್ಲ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದ್ದನ್ನು ಬಿಜೆಪಿಯವರು ಮರೆತಿದ್ದಾರೆಯೇ ? ತಪ್ಪು ಮತ್ತು ಭ್ರಷ್ಟಾಚಾರ ಯಾರು ಮಾಡಿದರೂ ಸಹಿಸಲು ಸಾಧ್ಯವಿಲ್ಲ. ಭ್ರಷ್ಟಾಚಾರ ಮಾಡಿದವರಿಗೆ ಕಾನೂನು ವ್ಯಾಪ್ತಿಯಲ್ಲಿ ಕ್ರಮ ಆಗಲೇಬೇಕು. ಆದರೆ, ಮುಖ್ಯಮಂತ್ರಿ ಮೇಲೆ ಕೇವಲ ಆಪಾದನೆ ಮಾತ್ರವಿದೆ. ಪ್ರಕರಣ ಇನ್ನೂ ತನಿಖಾ ಹಂತದಲ್ಲಿದ್ದು, ಸತ್ಯಾಸತ್ಯತೆಗಳು ಹೊರಬರಬೇಕಿದೆ. ಈ ಹಂತದಲ್ಲಿ ಬಿಜೆಪಿಗರು ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕಿಳಿದಿರುವುದು ಸರಿಯಲ್ಲ ಎಂದರು.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ 30 ವರ್ಷಗಳ ಕಾಲ ಶಾಸಕರಾಗಿ ಅನುಭವ ಹೊಂದಿದವರು. ಶಿರಸಿ-ಸಿದ್ದಾಪುರ ಕ್ಷೇತ್ರದಲ್ಲಿ ಅಭಿವೃದ್ಧಿ ಆಗುತ್ತಿಲ್ಲ ಎಂದು ಆರೋಪ ಮಾಡಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ ಕ್ಷೇತ್ರಕ್ಕಾಗಿ ಏನು ಮಾಡಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ. ಕ್ಷೇತ್ರದ ಅನೇಕ ಶಾಲೆಗಳು ಮುರಿದು ಬೀಳುವ ಹಂತದಲ್ಲಿದ್ದು, ನಾನು ಈಗ ಅನುದಾನ ತಂದು ಸರಿ ಮಾಡಿಸುತ್ತಿದ್ದೇನೆ. ನನೆಗುದಿಗೆ ಬಿದ್ದಿದ್ದ ಬಸ್ ನಿಲ್ದಾಣ ಕಾಮಗಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೆ ಮಾತನಾಡಿ, ಹಣ ಬಿಡುಗಡೆಗೊಳಿಸಿದ್ದು, ಕಾಮಗಾರಿ ಈಗ ಮುಕ್ತಾಯದ ಹಂತದಲ್ಲಿದೆ. ಒಳಾಂಗಣ ಕ್ರೀಡಾಂಗಣಕ್ಕೆ 5 ಕೋಟಿ ರೂ. ಮಂಜೂರು ಮಾಡಿಸಿ ಕಾಮಗಾರಿ ಮುಂದುವರಿಸಿದ್ದೇನೆ. ನಗರದ ರಸ್ತೆ ವಿಸ್ತರಣೆಗೆ ಜಾಗ ಬಿಟ್ಟುಕೊಟ್ಟವರಿಗೆ ವಿಶ್ವೇಶ್ವರ ಹೆಗಡೆ ಕಾಗೇರಿ ಪರಿಹಾರ ಒದಗಿಸಿಲ್ಲ. ಇಂದಿರಾ ಕ್ಯಾಂಟೀನ್ ನಿರ್ಮಾಣ ಈಗ ನಡೆಸುತ್ತಿದ್ದೇವೆ, ಸಿದ್ದಾಪುರದಲ್ಲಿಯೂ ಜಾಗ ಗುರುತಿಸಿದ್ದೇವೆ. ಕುಮಟಾ-ಹಾವೇರಿ ರಾಷ್ಟ್ರೀಯ ಹೆದ್ದಾರಿ ನಿರ್ವಣಕ್ಕೆ ಹಿಂದಿನ ಸಂಸದರು ಕಾಳಜಿ ವಹಿಸಿದ್ದರು. ಸಂಸದ ವಿಶ್ವೇಶ್ವರ ಹೆಗಡೆ ಈ ಬಗ್ಗೆ ತಲೆ ಕೆಡಿಸಿಕೊಳ್ಳದ ಕಾರಣ ಯಾರ ವ್ಯಾಪ್ತಿಯಲ್ಲಿ ಈ ರಸ್ತೆ ಸೇರಿದೆ ಎಂದು ಅರಿಯದ ಸಾರ್ವಜನಿಕರು ಶಾಸಕನಾದ ನನ್ನನ್ನು ಬೈಯುವಂತಾಗಿದೆ ಎಂದರು.

ಜಿಲ್ಲೆಯ ಅತಿಕ್ರಮಣ ಸಮಸ್ಯೆ ಬಗ್ಗೆ ಕಾಗೇರಿಯವರು ಪಾರ್ಲಿಮೆಂಟಲ್ಲಿ ಮಾತನಾಡಬಹುದಿತ್ತು. ಜಿಪಿಎಸ್ ಆದವರ ಪರವಾಗಿ ಧ್ವನಿ ಎತ್ತಿ ಮನೆ ಇರದ ಬಡವರಿಗೆ ಒಂದು ಎರಡು ಗುಂಟೆ ಜಾಗ ಮಂಜೂರು ಮಾಡಬಹುದಿತ್ತು. ಇದರ ಬದಲು ಅನಗತ್ಯ ಹೇಳಿಕೆ ನೀಡುವುದರಲ್ಲಿ ಅವರು ಮಗ್ನರಾಗಿದ್ದಾರೆ. ಕ್ಷೇತ್ರದಲ್ಲಿ ಅಧಿಕಾರಿಗಳು ಕಾಂಗ್ರೆಸ್ ಪುಡಾರಿಗಳ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎನ್ನುತ್ತಿದ್ದಾರೆ. ಇದು ಸರ್ಕಾರಿ ನೌಕರರಿಗೆ ಕಾಗೇರಿ ಮಾಡಿದ ಅವಮಾನವಾಗಿದೆ ಎಂದ ಭೀಮಣ್ಣ, ಯಾವುದೇ ಪಕ್ಷದ ಅಧಿಕಾರದಲ್ಲಿದ್ದರೂ ಅಧಿಕಾರಿಗಳು ಸಹಕಾರ ನೀಡುತ್ತಾರೆ. ರಾಷ್ಟ್ರೀಯ ಪಕ್ಷದ ನಾಯಕರಾಗಿ ಅವರಿಗೂ ಗೊತ್ತಿದೆ. ನಾನು ಯಾವುದೇ ಅಧಿಕಾರಿಯನ್ನು ಇದುವರೆಗೂ ಕೈಗೊಂಬೆಯಾಗಿಸಿಲ್ಲ. ಆ ಭಾವನೆಯಲ್ಲಿ ನಾನು ಎಂದೂ ನೋಡಿಲ್ಲ ಎಂದರು.

ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಜಗದೀಶ ಗೌಡ, ಪ್ರಮುಖರಾದ ಜ್ಯೋತಿ ಪಾಟೀಲ, ಎಸ್.ಕೆ. ಭಾಗ್ವತ್, ಪ್ರದೀಪ ಶೆಟ್ಟಿ, ಅಬ್ಬಾಸ್ ತೋನ್ಸೆ, ದೀಪಕ ದೊಡ್ಡೂರು ಇತರರಿದ್ದರು.

ಕೇಂದ್ರದಲ್ಲಿ 400 ಸ್ಥಾನ ಪಡೆಯುತ್ತೇವೆ ಎಂದಿದ್ದ ಬಿಜೆಪಿ ಈಗ ಕಿಚಡಿ ಸರ್ಕಾರದ ಸ್ಥಿತಿ ಅನುಭವಿಸುತ್ತಿದೆ. ಚಂದ್ರಬಾಬು ನಾಯ್ಡು, ನಿತೀಶಕುಮಾರ ಯಾವಾಗ ತಿಕ್ಕಾಟ ಆರಂಭಿಸಲಿದ್ದಾರೆ ಎಂಬುದು ಗೊತ್ತಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸಂಸದರ ಸಂಖ್ಯೆ 1ರಿಂದ 9 ಸ್ಥಾನಕ್ಕೆ ಏರಿರುವುದು ಪಕ್ಷ ಬಲಗೊಳ್ಳುತ್ತಿರುವ ಸೂಚನೆಯಾಗಿದೆ.

| ಭೀಮಣ್ಣ ನಾಯ್ಕ ಶಾಸಕ

------------------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net