ದುಡಿಯುವ ವರ್ಗಕ್ಕೆ ಗ್ಯಾರಂಟಿ ನೀಡದ ಬಿಜೆಪಿ

Santosh laad
Published on

ಕೋಲಾರ: ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಉದ್ಯಮಿಗಳ ಸಾಲ ಮನ್ನಾ ಮಾಡಿದರೇ ಹೊರತು ದುಡಿಯುವ ವರ್ಗದವರಿಗೆ ಗ್ಯಾರಂಟಿ ಕೊಡುವ ಪ್ರಯತ್ನ ಮಾಡಲಿಲ್ಲ. ಬದಲಿಗೆ ಈಗ ಐದು ಯೋಜನೆಗಳನ್ನು ನೋಡಿ ಹೊಟ್ಟೆ ಉರಿ ಬೀಳುತ್ತಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ್​ ಲಾಡ್​ ವಾಗ್ದಾಳಿ ನಡೆಸಿದರು.

ನಗರದ ಖಾಸಗಿ ಕನ್ವೆನ್ಷನ್​ ಹಾಲ್​ನಲ್ಲಿ ಕಾರ್ಮಿಕ ಇಲಾಖೆಯಿಂದ ಬುಧವಾರ ಹಮ್ಮಿಕೊಂಡಿದ್ದ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್​ ಕಾರ್ಡ್​ ವಿತರಣೆ ಹಾಗೂ ಸರ್ಕಾರಿ ಯೋಜನೆಗಳ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದಲ್ಲಿ ಬಿಜೆಪಿಯವರು ಸಂಘರ್ಷ ತಂದಿಡುವ ಮೂಲಕ ಬೇರೆ ವಾತಾವರಣ ಉಂಟು ಮಾಡಲು ಪ್ರಯತ್ನಿಸುತ್ತಿದ್ದು, ಇದಕ್ಕೆ ಜನ ಕಿವಿಗೋಡಬಾರದು ಎಂದರು.

ಕಾರ್ಮಿಕರಿಗಾಗಿ ರಾಜ್ಯದಲ್ಲಿ ಮಾತ್ರ ಸಮರ್ಪಕ ಗಿಗ್​ ಯೋಜನೆ ಜಾರಿಗೆ ತಂದಿದ್ದೇವೆ. ಆನ್​ಲೈನ್​ ಮೂಲಕ ಆಹಾರ ಸಾಗಿಸುವ ಕಾರ್ಮಿಕರು ಗಿಗ್​ ಅಡಿ ಬರುತ್ತಾರೆ. ಸಿನಿ ಮಸೂದೆಯಡಿ ಸಿನಿಮಾ ಕಾರ್ಮಿಕರು, ಕಲಾವಿದರು ಬರುತ್ತಾರೆ. ಸಾರಿಗೆ ಮಸೂದೆಯಡಿ ಸಾವಿರಾರು ಚಾಲಕರು ಬರುತ್ತಾರೆ. ಹಲವು ಯೋಜನೆಗಳನ್ನು ಜಾರಿಗೆ ತಂದು ಕಾರ್ಮಿಕರ ಕಲ್ಯಾಣಕ್ಕಾಗಿ ಒತ್ತು ನೀಡಲಾಗಿದೆ ಎಂದು ತಿಳಿಸಿದರು.

ರಾಜ್ಯದ ವಿವಿಧ ಇಲಾಖೆಗಳಲ್ಲಿ 3 ಲಕ್ಷಕ್ಕೂ ಅಧಿಕ ಹೊರಗುತ್ತಿಗೆ ನೌಕರರು ಇದ್ದಾರೆ. ಅವರಿಗೆ ಸೊಸೈಟಿ ಮಾಡಲಿದ್ದು, ನೇಮಕ ನಡೆಸುವ, ಸೌಲಭ್ಯ ಕಲ್ಪಿಸುವ ಪ್ರಕ್ರಿಯೆ ನಡೆಸಲಾಗುವುದು. ಈ ವಿಷಯ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ಬರಲಿದೆ ಎಂದು ತಿಳಿಸಿದರು.

ಭಾರತವು ಜಿಡಿಪಿಯಲ್ಲಿ ಜಪಾನ್​ಅನ್ನು ಹಿಂದಿಕ್ಕಿದೆ ಎಂದು ಬಿಜೆಪಿಗರು ಹೇಳುತ್ತಿದ್ದಾರೆ. ನಮ್ಮದು 150 ಕೋಟಿ ಜನಸಂಖ್ಯೆ ಇರುವ ದೇಶ. ಅವರೆಲ್ಲಾ ವಹಿವಾಟು ಮಾಡಿದರೆ ಅದು ಆಗಿಯೇ ಆಗುತ್ತದೆ. ಜಪಾನ್​ನಲ್ಲಿ ಕೇವಲ 12 ಕೋಟಿ ಜನರಿದ್ದಾರೆ. ಬಿಜೆಪಿಯವರು ಮಾತೆತ್ತಿದರೆ ಸುಳ್ಳು ಹೇಳುತ್ತಾರೆ ಎಂದು ಕುಟುಕಿದರು.

ಶಾಸಕ ಕೆ.ವೈ.ನಂಜೇಗೌಡ, ವಿಧಾನ ಪರಿಷತ್​ ಸದಸ್ಯ ಎಂ.ಎಲ್​.ಅನಿಲ್​ ಕುಮಾರ್​, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ವೈ.ಶಿವಕುಮಾರ್​, ಕುಡಾ ಅಧ್ಯಕ್ಷ ಮೊಹಮ್ಮದ್​ ಹನೀಫ್​, ನಗರಸಭೆ ಅಧ್ಯಕ್ಷೆ ಲಕ್ಷ್ಮಿದೇವಮ್ಮ, ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವಿಣ್​ ಪಿ.ಬಾಗೇವಾಡಿ, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಬಿ.ನಿಖಿಲ್​, ಕಾರ್ಮಿಕ ಇಲಾಖೆಯ ಆಯುಕ್ತ ಗೋಪಾಲ್​, ಜಂಟಿ ಆಯುಕ್ತ ರವಿಕುಮಾರ್​, ಜಿಲ್ಲಾ ಕಾರ್ಮಿಕ ಅಧಿಕಾರಿ ವರಲಕ್ಷ್ಮೀ ಇದ್ದರು.

ಕೋಮುಲ್​ ಕಾರ್ಮಿಕರ ಹಿತ ಕಾಪಾಡಿ: ಕೆಜಿಎಫ್​, ಬಂಗಾರಪೇಟೆಯಿಂದ ನಿತ್ಯ 25 ಸಾವಿರ ಕಾರ್ಮಿಕರು ಬೆಂಗಳೂರಿಗೆ ಪ್ರಯಾಣಿಸುತ್ತಾರೆ. ನಮ್ಮ ಕ್ಷೇತ್ರಕ್ಕೆ ಶ್ರಮಿಕ ವಸತಿ ನಿಲಯ ಸ್ಥಾಪಿಸಲಿದ್ದು, ಅದಕ್ಕೆ 10 ಎಕರೆ ಜಾಗ ಸಹ ನೀಡಲಾಗಿದೆ. ಕೋಮುಲ್​ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು, ಕ್ಷೇತ್ರದ ಕಾರ್ಮಿಕರ ಹಿತ ಕಾಪಾಡಬೇಕು ಎಂದು ಶಾಸಕ ಎಸ್​.ಎನ್​  . ನಾರಾಯಣಸ್ವಾಮಿ ಮನವಿ ಮಾಡಿದರು.

ತಹಸೀಲ್ದಾರ್​ ಕಚೇರಿಯೇ ಗೊತ್ತಿಲ್ಲ: ಭಿಕ್ಷಕರು, ಗಿಣಿ ಶಾಸ್ತ್ರ್ರಗಾರರು, ಹಾವಾಡಿಗರು, ಬುಡುಬುಡುಕೆಯಂಥ ಸಣ್ಣಸಣ್ಣ ಜಾತಿಯವರುನ್ನು ತುಳಿದು ತುಳಿದು ಓಡಿಸಿದ್ದಾರೆ. ಅವರ ಮೇಲೆ ದಬ್ಬಾಳಿಕೆಯ ನಡೆದಿದೆ. ಇಂಥವರನ್ನು ಗುರುತಿಸಿರುವುದಕ್ಕೆ ತಮ್ಮ ಕಾಲಿಗೆ ಬೀಳುತ್ತೇನೆ. ಎಲ್ಲರಿಗೂ ಮೀಸಲಾತಿ ಸಿಕ್ಕಿದೆ. ಆದರೆ, ಇವರಿಗೆ ಯಾವುದೇ ಸೌಲಭ್ಯ ಇಲ್ಲ. ತಹಸೀಲ್ದಾರರ ಕಚೇರಿ ಎಲ್ಲಿದೆ ಎಂಬುದು ಗೊತ್ತಿಲ್ಲ ಎಂದು ಶಾಸಕ ಕೊತ್ತೂರು ಮಂಜುನಾಥ್​ ವ್ಯಂಗ್ಯವಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net