

ಮಂಡ್ಯ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಶತಾಬ್ಧಿಯನ್ನು ಡಿಸೆಂಬರ್‌ವರೆಗೂ ಆಚರಣೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಹಲವು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬಿಜೆಪಿ ಮೈಸೂರು ವಿಭಾಗಿಯ ಸಂಚಾಲಕ ಎನ್.ವಿ.ಫಣೀಶ್ ತಿಳಿಸಿದರು.
ಕಳೆದ ಡಿ.25ರಂದು ವಾಜಪೇಯಿ ಜನ್ಮದಿನವನ್ನು ಸುಶಾಸನ ದಿನವಾಗಿ ಆಚರಿಸಲಾಗಿದೆ. ಮುಂದಿನ ಬಾರಿ ದೇಶದ ಎಲ್ಲ ಬೂತ್‌ಗಳಲ್ಲಿಯೂ ಆಚರಣೆ ಮಾಡಲಾಗುವುದು. ಅಂತೆಯೇ ಫೆ.14ವರೆಗೆ ಅಟಲ್ ಸ್ಮೃತಿ ಸಂಕಲನ ಮತ್ತು ಪ್ರಚಾರ ಅಭಿಯಾನ, ಫೆ.15ರಿಂದ ಮಾ.15ರವರೆಗೆ ಅಟಲ್ ವಿರಾಸತ್ ಸಮ್ಮೇಳನ ಆಯೋಜಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಮ್ಮೇಳನವನ್ನು ಪ್ರತಿ ಜಿಲ್ಲೆಯಲ್ಲಿ ಆಯೋಜಿಸಲಿದ್ದು, ವಿಚಾರವಾದಿಗಳು ಮತ್ತು ಗಣ್ಯರನ್ನು ಆಹ್ವಾನಿಸಿ ವಾಜಪೇಯಿ ಅವರೊಂದಿಗೆ ಕೆಲಸ ಮಾಡಿದ ಹಿರಿಯ ಕಾರ್ಯಕರ್ತರು, ಅಟಲ್ ಜಿ ಅವರ ವ್ಯಕ್ತಿತ್ವ ಮತ್ತು ಕೃತಿಗಳ ಮೇಲೆ ಅನೇಕ ಪುಸ್ತಕ ಬರೆದ ಲೇಖಕರನ್ನು ಸನ್ಮಾನಿಸಲಾಗುವುದು. ಅಟಲ್ ಜನ್ಮಶತಮಾನೋತ್ಸವ ಆಚರಣಾ ಸಮಿತಿ ರಚನೆ ಮಾಡಲಾಗಿದೆ ಎಂದರು.
ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ನಗರಾಧ್ಯಕ್ಷ ವಸಂತ್‌ಕುಮಾರ್, ಜಿಲ್ಲಾ ಮಾಧ್ಯಮ ಸಂಚಾಲಕ ನಾಗಾನಂದ್, ಸಿದ್ದರಾಜುಗೌಡ ಇದ್ದರು.