ರೈತರ ಜಮೀನು ಕಬಳಿಸುವ ಹುನ್ನಾರ: ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಟೀಕೆ

BJP complains to Child Commission against Rahul Gandhi mandya
Published on

ಮಂಡ್ಯ: ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ವಕ್ಫ್ ಬೋರ್ಡ್‌ನಿಂದ ಬಡ ರೈತರ ಜಮೀನನ್ನು ಕಬಳಿಸುವ ಹುನ್ನಾರ ನಡೆಯುತ್ತಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಟೀಕಿಸಿದ್ದಾರೆ.

ರಾಜ್ಯದಲ್ಲಿ ಸರ್ಕಾರ ಬಂದ ನಂತರ ಇಡೀ ಜಿಲ್ಲೆ ಒಂದೇ ಸಮುದಾಯಕ್ಕೆ ಸೇರಿದ್ದು ಎಂಬಂತೆ ಆಡುತ್ತಿದೆ. ಕಾಂಗ್ರೆಸ್‌ನ ತುಷ್ಟೀಕರಣದಿಂದಾಗಿ ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ತೆರವುಗೊಳಿಸಲಾಯಿತು. ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ಗಲಾಟೆಯಾಯಿತು. ಹಿಂದುಗಳು ಜೈ ಶ್ರೀರಾಮ್ ಎನ್ನುವಂತಿಲ್ಲ ಹಾಗೂ ಭದ್ರತೆ ಇಲ್ಲ. ಸರ್ಕಾರದಿಂದಲೇ ಅಧಿಕೃತವಾಗಿ ಒತ್ತುವರಿ ನಡೆಯುತ್ತಿದೆ. ಈ ಹಿಂದೆ ಟಿಪ್ಪು ಸುಲ್ತಾನ್, ಔರಂಗಜೇಬನಂತಹ ಕೋಮು ಮತಾಂಧರು ಹಿಂದುಗಳ ಭೂಮಿ, ಉದ್ಯೋಗ, ಬದುಕು ಕಿತ್ತುಕೊಂಡು ಮತಾಂತರ ಮಾಡಿದ್ದರು. ಈಗ ರೈತರ ಭೂಮಿ ಕಸಿದುಕೊಳ್ಳಲಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಶ್ರೀರಂಗಪಟ್ಟಣ ಕಾಂಗ್ರೆಸ್ ಶಾಸಕರು ತಾಲೂಕಿನ ಮಹದೇವಪುರ ಗ್ರಾಮದಲ್ಲಿ ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದಾರೆಂದು ದೂರಿದ್ದಾರೆ.

ಜಿಲ್ಲೆಯ ವಿವಿಧೆಡೆ ರೈತರು ಸರ್ಕಾರಿ ಭೂಮಿಯನ್ನು ಉಳುಮೆ ಮಾಡುತ್ತಿದ್ದಾರೆ. ಬಗರ್ ಹುಕುಂ( ದರಖಾಸ್ತು )ಯೋಜನೆಯಲ್ಲಿ ಅರ್ಜಿ ಹಾಕಿಕೊಂಡಿದ್ದಾರೆ. ಆದರೆ, ಕಂದಾಯ ಅಧಿಕಾರಿಗಳು ಭೂಮಿಯನ್ನು ಮುಸಲ್ಮಾನರಿಗೆ ಖಾತೆ ಮಾಡಿಕೊಡುತ್ತಿದ್ದಾರೆ ಎಂದಿದ್ದಾರೆ ಎಂಬ ದೂರುಗಳನ್ನು ಸಾಗುವಳಿ ಮಾಡುತ್ತಿರುವ ರೈತರು ಮಾಡಿದ್ದಾರೆಂಬ ಹೇಳಿಕೆ ನೀಡಿದ್ದು, ಇದು ಸಾಕ್ಷಿಯಲ್ಲವೇ ಎಂದು ಪ್ರಶ್ನಿಸಿದ್ದಾರೆ. ಮಳವಳ್ಳಿ ತಾಲೂಕು ಧನಗೂರು ಗ್ರಾಮದ ಗಂಗರ ಕಾಲದ ವೀರಭದ್ರೇಶ್ವರ ದೇವಾಲಯಕ್ಕೆ ಸೇರಿದ ಸರ್ವೇ ನಂಬರ್ 119 ಮತ್ತು 121 ಮುಸಲ್ಮಾನ ವ್ಯಕ್ತಿಯ ಹೆಸರಿಗೆ ಆರ್‌ಟಿಸಿ ಬರುತ್ತಿದೆ. ಜಿಲ್ಲೆಯ ಅನೇಕ ಸರ್ಕಾರಿ ಜಮೀನನ್ನು ಕಬಳಿಸುವ ಲ್ಯಾಂಡ್ ಜಿಹಾದ್ ಅನ್ನು ಸರ್ಕಾರವೇ ನೇರವಾಗಿ ಮಾಡುತ್ತಿದೆ. ಇದು ರಾಜ್ಯ ಕಾಂಗ್ರೆಸ್ ಸರ್ಕಾರದ ಓಲೈಕೆ ರಾಜಕಾರಣಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಆರೋಪಿಸಿದ್ದಾರೆ.

ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸಾಗುವಳಿ ರೈತರ ಜಮೀನನ್ನು ಕಬಳಿಸುವ ಕೆಲಸ ಬಿಡಬೇಕು. ಅಂತೆಯೇ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಜಿಲ್ಲಾಡಳಿತ ಕುರಿತು ಸ್ಪಷ್ಟನೆ ನೀಡಬೇಕು ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net