

ಮಂಡ್ಯ: ಅಮಾಯಕ ಹಿಂದುಗಳ ಮೇಲೆ ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತ ಆಪರೇಪನ್ ಸಿಂಧೂರ ಕಾರ್ಯಾಚರಣೆ ನಡೆಸಿ ಉಗ್ರರ ನೆಲೆಗಳನ್ನು ಧ್ವಂಸ ಮಾಡಿದ ವೀರ ಸೈನಿಕರಿಗೆ ಕಾಂಗ್ರೆಸ್ ಅಪಮಾನ ಮಾಡುತ್ತಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ. ಮಂಜುನಾಥ್ ಆರೋಪಿಸಿದರು.
ಸಚಿವ ಸಂತೋಷ್ ಲಾಡ್, ಶಾಸಕ ಕೊತ್ತನೂರು ಮಂಜುನಾಥ್ ದೇಶದ ವೀರ ಸೈನಿಕರಿಗೆ ಅಪಮಾನ ಮಾಡಿದ್ದಾರೆ. ಒಂದು ಕಡೆ ಕಾಂಗ್ರೆಸ್ ಶಾಂತಿ ಮಂತ್ರ ಜಪಿಸುತ್ತಿದ್ದರೆ, ಮತ್ತೊಂದು ಕಡೆ ಇಂತಹ ಕಾಂಗ್ರೆಸ್ ನಾಯಕರು ನಮ್ಮ ಸೈನಿಕರ ವಿರುದ್ಧವೇ ಟೀಕಿಸುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರ ವಿಚಾರದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಇನ್ನು ಮುಂದೆ ನಾನು ಸಂಧಾನ ಮಾಡುತ್ತೇನೆ ಎಂಬ ಹೇಳಿಕೆ ನೀಡಿದ್ದಾರೆ ಎಂಬ ಅಪಪ್ರಚಾರ ಮಾಡುತ್ತಿದ್ದಾರೆ. ಕಾಶ್ಮೀರ ವಿಚಾರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅಧಿಕೃತವಾಗಿ ಪರವಾಗಲಿ ಅಥವಾ ವಿರುದ್ಧವಾಗಲಿ ಒಂದು ಮಾತನ್ನು ಹೇಳಿಲ್ಲವೆಂಬ ಅಪಪ್ರಚಾರ ಮಾಡುತ್ತಿದ್ದಾರೆ ಎಂದಿದ್ದಾರೆ.
ಮೋದಿ ಅವರು ಪಾಕಿಸ್ತಾನದ ಜತೆ ಮಾತನಾಡುವುದಿದ್ದರೆ ಭಯೋತ್ಪಾದನೆ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ವಿಚಾರವಾಗಿ ಮಾತ್ರ. ದೇಶದ ಏಕತೆ, ಸಮಗ್ರತೆ ವಿಚಾರದಲ್ಲಿ ಮೂರನೇ ವ್ಯಕ್ತಿ ಮೂಗು ತೂರಿಸುವ ಅಗತ್ಯವಿಲ್ಲ ಎಂದು ಅಮೆರಿಕಗೆ ಎಚ್ಚರಿಕೆ ನೀಡಿದ್ದಾರೆ. ಇಂತಹ ಮಾಹಿತಿಯನ್ನು ಅರಿಯದ ಸಂತೋಷ್ ಲಾಡ್ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.
ನಾಲ್ಕು ವಿಮಾನ ಹಾರಿಸಿದ ಮಾತ್ರಕ್ಕೆ ಎಲ್ಲವನ್ನೂ ಸದೆ ಬಡಿದಂತಾಗುವುದಿಲ್ಲ. ಪಾಕಿಸ್ತಾನದ ವಿರುದ್ಧ ಇನ್ನೂ ಕಾರ್ಯಾಚರಣೆ ನಡೆಸಬೇಕಿತ್ತೆಂದು ಕೊತ್ತನೂರು ಮಂಜುನಾಥ್ ಹೇಳಿರುವುದನ್ನು ಖಂಡಿಸಿರುವ ಮಂಜುನಾಥ್, ಪಾಕಿಸ್ತಾನದಲ್ಲಿ ಏನೆಲ್ಲಾ ನಡೆದಿದೆ, ನಮ್ಮ ಸೈನಿಕರು ಯಾವ ಪ್ರಮಾಣದಲ್ಲಿ ಹಾನಿ ಮಾಡಿದ್ದಾರೆ ಎಂಬುದನ್ನು ಮೊದಲು ಅರಿತು ಮಾತನಾಡಲಿ. ಇಲ್ಲದಿದ್ದರೆ ಸ್ವಲ್ಪ ದಿನ ಸೇನೆ ಜತೆಗೆ ಕೆಲಸ ಮಾಡಿ, ಅದು ಬಿಟ್ಟು ಇಲ್ಲಿ ಕುಳಿತು ಸುಮ್ಮನೆ ಮಾತನಾಡುವುದು ಶಾಸಕರಾಗಿರುವ ನಿಮಗೆ ಶೋಭೆ ತರುವುದಿಲ್ಲ ಎಂದು ಹೇಳಿಕೆಯಲ್ಲಿ ಛೇಡಿಸಿದ್ದಾರೆ.