

ಮಂಡ್ಯ: ಪ್ರತೀ ಮನೆಯೂ ಸ್ವದೇಶಿ, ಮನೆ ಮನೆಯೂ ಸ್ವದೇಶಿ ಎಂಬ ಘೋಷಣೆಯೊಂದಿಗೆ ಆತ್ಮ ನಿರ್ಭರ ಭಾರತ ಸಂಕಲ್ಪ ಅಭಿಯಾನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯೊಂದಿಗೆ ಸೆ.25ರಂದು ಚಾಲನೆ ನೀಡಲಾಗಿದೆ. ಈ ಅಭಿಯಾನ ಡಿ.25ರವರೆಗೂ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಹೇಳಿದರು.
ದೀಪಾವಳಿ ದಿನದಿಂದ ಈ ಸ್ವದೇಶಿ ಅಭಿಯಾನದ ಬಗ್ಗೆ ಜನ ಜಾಗೃತಿ ಮೂಡಿಸಿ, ಪ್ರತಿ ಭಾರತೀಯನಿಗೂ ಆತ್ಮನಿರ್ಭರ ಭಾರತದ ಸಂದೇಶ ತಲುಪಿಸಿ ರಾಷ್ಟ್ರೀಯ ಚಿಂತನೆಗಳಿಗೆ ಶಕ್ತಿ ತುಂಬುವ ಕೆಲಸ ಮಾಡುವುದಾಗಿದೆ. ಇದರ ಅಂಗವಾಗಿ ರಾಷ್ಟ್ರೀಯ, ರಾಜ್ಯ, ಜಿಲ್ಲಾ, ಮಂಡಲ ಮಟ್ಟದಲ್ಲಿ ಕಾರ್ಯಾಗಾರ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇಡೀ ದೇಶದಲ್ಲಿ ವೋಕಲ್ ಫಾರ್ ಲೋಕಲ್ ಎಂಬ ಸಂದೇಶ ಹರಡುವ ಮೂಲಕ ಸ್ಥಳೀಯ ಉತ್ಪನ್ನಗಳಿಗೆ ಬೆಂಬಲ ನೀಡುವುದರ ಮೂಲಕ ರಾಷ್ಟ್ರದ ಆರ್ಥಿಕ ಸ್ಥಿತಿ ಮತ್ತು ಸಾಂಸ್ಕೃತಿಕತೆಗೆ ಶಕ್ತಿ ತುಂಬುವ ಕೆಲಸ ಮಾಡಲಾಗುವುದು. ಆತ್ಮನಿರ್ಭರ ಭಾರತ ಕುರಿತು ಭಾಷಣ ಸ್ಪರ್ಧೆ, ಕಾಲೇಜು ಮಟ್ಟದ ಸ್ವದೇಶಿ ಸಂಕಲ್ಪ ಸಮ್ಮೇಳನ, ಆತ್ಮ ನಿರ್ಭರ ಭಾರತ ರಥಯಾತ್ರೆ ಮತ್ತು ಪಾದಯಾತ್ರೆ ಸ್ವದೇಶಿ ಮೇಳ, ಸ್ಥಳೀಯ ಉತ್ಪನ್ನಗಳಿಗೆ ಬೆಂಬಲ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಸ್ವದೇಶಿ ಎನ್ನುವುದು ನಮ್ಮ ಜೀವನದ ಭಾಗವಾಗಬೇಕು. ನಮ್ಮ ದೇಶದಲ್ಲಿ ತಯಾರಾದ ಮೇಡ್ ಇನ್ ಇಂಡಿಯಾ ವಸ್ತುಗಳು ಮೇಕ್ ಇನ್ ಇಂಡಿಯಾ ವಸ್ತುಗಳನ್ನು ಮಾತ್ರ ಕೊಂಡುಕೊಳ್ಳುವುದರ ಬಗ್ಗೆ ಸ್ವದೇಶಿ ಜಾಗೃತಿಯನ್ನು ಕಾರ್ಯಕರ್ತರು ಮಾಡಲಿದ್ದಾರೆ ಎಂದು ವಿವರಿಸಿದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿವೇಕ್, ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಮಾಧ್ಯಮ ಸಂಚಾಲಕ ನಾಗಾನಂದ್, ಕಚೇರಿ ಕಾರ್ಯದರ್ಶಿ ಚಂದ್ರು ಇತರರಿದ್ದರು.