

ವಿಜಯಪುರ: ‘ಸಚಿವ ಎಂ.ಬಿ. ಪಾಟೀಲರು ಒಂದೇ ಸಮುದಾಯದ ಮುಖಂಡರನ್ನು ಬೆಳೆಸುತ್ತಾರೆ’ ಎಂಬ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಆರೋಪವನ್ನು ಖಂಡಿಸುವುದಾಗಿಯೂ ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲವೆಂದು ಮಾಜಿ ಶಾಸಕ ರಾಜು ಆಲಗೂರ ಹೇಳಿದರು.
ಸಚಿವ ಎಂ.ಬಿ. ಪಾಟೀಲರು ಜಾತ್ಯತೀತ ನಾಯಕ. ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಆಡಳಿತ ನೀಡುತ್ತಿರುವ ರಾಜಕಾರಣಿ. ಕಾಂಗ್ರೆಸ್‌ನ ತತ್ವ ಮೈಗೂಡಿಸಿಕೊಂಡು ಎಲ್ಲ ಜಾತಿ, ಮತ, ಪಂಥದವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನೀಡುತ್ತಿದ್ದಾರೆ. ಹೀಗಾಗಿ ಅವರನ್ನು ಜಾತಿಯಾಧಾರದ ಮೇಲೆ ಗುರುತಿಸುವುದು ಸರಿಯಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಅಲ್ಪಸಂಖ್ಯಾತರು, ಶೋಷಿತರು ಹಾಗೂ ಹಿಂದುಳಿದ ವರ್ಗದವರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಎಂ.ಬಿ. ಪಾಟೀಲ ಶ್ರಮಿಸುತ್ತಿದ್ದಾರೆ. ನಾನು ಸೇರಿದಂತೆ ಅನೇಕ ಶೋಷಿತ ಸಮುದಾಯಗಳ ನಾಯಕರನ್ನು ಮುನ್ನೆಲೆಗೆ ತಂದಿದ್ದಾರೆ. ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಎತ್ತಿ ಹಿಡಿದಿದ್ದಾರೆ. ಇದಕ್ಕೆ ನನಗಿಂತ ತಾಜಾ ಉದಾಹರಣೆ ಬೇರೆ ಇಲ್ಲ. ಇದೇ ರೀತಿ ಎಲ್ಲ ಸಮುದಾಯದವರನ್ನೂ ಬೆಳೆಸಿದ್ದಾರೆ. ಅವರು ಹಿಂದು ಧರ್ಮದ ವಿರೋಧಿ ಎಂಬ ಹೇಳಿಕೆಯೂ ಸರಿಯಲ್ಲ. ಸಂವಿಧಾನದ ಆಶಯದಂತೆ ಎಲ್ಲ ಸಮುದಾಯದವರನ್ನು ಭ್ರಾತೃತ್ವದಿಂದ ಕಂಡವರು ಎಂ.ಬಿ. ಪಾಟೀಲ ಎಂದು ರಾಜು ಆಲಗೂರ ತಿಳಿಸಿದರು.
ಬಿಜೆಪಿಗರು ಕೋಮುವಾದ ಸೃಷ್ಠಿಸುವ ಹುನ್ನಾರ ನಡೆಸುತ್ತಾರೆ. ಹೀಗಾಗಿ ಅವರಿಗೆ ಕೋಮುವಾದ ಬಿಟ್ಟು ಬೇರೇನೂ ಕಾಣುವುದಿಲ್ಲ. ಪ್ರಿಯಾಂಕ್ ಖರ್ಗೆ ವಿರುದ್ಧ ವರ್ಷದಲ್ಲಿ ನಾಲ್ಕು ಬಾರಿ ಬಿಜೆಪಿಗರು ಪ್ರತಿಭಟನೆ ಮಾಡಿದರು. ಮೋದಿ ವಿರುದ್ಧ ಮಾತನಾಡಿದ್ದಕ್ಕಾಗಿ ಪ್ರಿಯಾಂಕ್ ವಿರುದ್ಧ ಹೋರಾಟ ಎಂಬ ಬಿಜೆಪಿಗರ ಹೇಳಿಕೆ ಬಾಲಿಷತನದಿಂದ ಕೂಡಿರುವಂಥದ್ದು. ಪ್ರಧಾನಿ ಮೋದಿಯನ್ನು ಪ್ರಶ್ನಿಸುವುದು ಪ್ರತಿಯೊಬ್ಬರ ಹಕ್ಕು. ಹೀಗಿದ್ದರೂ ಪ್ರಿಯಾಂಕ್ ಖರ್ಗೆ ಅವರನ್ನು ಗುರಿಯಾಗಿಸಿಕೊಂಡು ಮಾಡಿದ ಹೋರಾಟ ದಲಿತ ವಿರೋಧಿ ನೀತಿಯಾಗಿದೆ ಎಂದರು.
ಛಲವಾದಿ ನಾರಾಯಾಣ ಸ್ವಾಮಿ ಎಂಬ ದಲಿತನನ್ನು ದಲಿತರ ವಿರುದ್ಧವೆ ಎತ್ತಿ ಕಟ್ಟುವ ಷಡ್ಯಂತ್ರ ಬಿಜೆಪಿ ನಡೆಸಿದೆ. ಈ ಹಿಂದೆ ಇದೇ ನಾರಾಯಣ ಸ್ವಾಮಿ ಮಲ್ಲಿಕಾರ್ಜುನ ಖರ್ಗೆ ಅವರ ಮನೆ ಬಾಗಿಲು ಕಾಯುತ್ತಿದ್ದ. ಇದೀಗ ಆರ್‌ಎಸ್‌ಎಸ್ ಚಡ್ಡಿ ತಲೆ ಮೇಲೆ ಹೊತ್ತುಕೊಂಡು ತಿರುಗಾಡುತ್ತಿದ್ದಾನೆ. ಯಾವಾಗ ನಾರಾಯಣ ಸ್ವಾಮಿ ತಲೆ ಮೇಲೆ ಆರ್‌ಎಸ್‌ಎಸ್ ಚಡ್ಡಿ ಹೊತ್ತುಕೊಂಡನೋ ಆಗಲೇ ಅಂಬೇಡ್ಕರ್ ಅವರ ತತ್ವ ಸಿದ್ಧಾಂತವನ್ನು ಬಲಿಕೊಟ್ಟಿದ್ದಾನೆಂದು ಆಲಗೂರ ಟೀಕಿಸಿದರು.
ಮುಖಂಡ ಅಬ್ದುಲ್‌ಹಮೀದ್ ಮುಶ್ರೀಫ್ ಸಹ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಆರೋಪವನ್ನು ಖಂಡಿಸಿದನು.
ಜಿಲ್ಲಾ ಉಪಾಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ, ವಸಂತ ಹೊನಮೋಡೆ, ಮಹಾನಗರ ಪಾಲಿಕೆಯ ನಾಮ ನಿರ್ದೇಶಿತ ಸದಸ್ಯ ಅಷ್ಪಾಕ್ ಮನಗೂಳಿ ಇದ್ದರು.