ಮಂಡ್ಯ ಬಿಜೆಪಿ ಜಿಲ್ಲಾಧ್ಯಕ್ಷರ ಆಯ್ಕೆಗೆ ಅತೃಪ್ತಿ: ಡಾ.ಎನ್.ಎಸ್.ಇಂದ್ರೇಶ್ ನೇಮಕಕ್ಕೆ ತೀವ್ರ ವಿರೋಧ

Bjp Office mandya
Published on

ಮಂಡ್ಯ: ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರಾಗಿ ಡಾ.ಎನ್.ಎಸ್.ಇಂದ್ರೇಶ್ ನೇಮಕಗೊಳ್ಳುತ್ತಿದ್ದಂತೆ ಕಮಲ ಪಾಳಯದಲ್ಲಿ ಅತೃಪ್ತಿ ತೀವ್ರಗೊಳ್ಳುತ್ತಿದೆ. ಮಾತ್ರವಲ್ಲದೆ ಏಕಾಏಕಿ ತೆಗೆದುಕೊಂಡ ನಿರ್ಧಾರದ ಬಗ್ಗೆ ಎದ್ದಿರುವ ಅಸಮಾಧಾನ ಹೈಕಮಾಂಡ್ ತಲುಪಿದೆ.
ಡಾ.ಎನ್.ಎಸ್.ಇಂದ್ರೇಶ್ ಆಯ್ಕೆಯ ಬಗ್ಗೆ ನಿರೀಕ್ಷೆಯಂತೆ ಆಕ್ಷೇಪ ವ್ಯಕ್ತವಾಗುತ್ತಿದೆ. ಅದರಂತೆ ಲೋಕಸಭಾ ಚುನಾವಣೆ ಹೊತ್ತಲ್ಲಿ ಮಾಡಿರುವ ಎಡವಟ್ಟಿನ ಬಗ್ಗೆ ಪಕ್ಷದೊಳಗೆ ಬಂಡಾಯ ಸ್ಫೋಟಿಸುವ ಮುನ್ಸೂಚನೆ ಸಿಗುತ್ತಿದೆ. ಮಾತ್ರವಲ್ಲದೆ ಹಿರಿಯರನ್ನು ಕಡೆಗಣಿಸಿರುವುದಕ್ಕೆ ಕೋಪ ಮಡುಗಟ್ಟುವಂತಾಗಿದೆ.
ಶಿಸ್ತಿನ ಪಕ್ಷದಲ್ಲಿ ಅಶಿಸ್ತು: ಪ್ರಮುಖವಾಗಿ ಜಿಲ್ಲಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ರಾಜ್ಯ ನಾಯಕರ ನಡೆ ಬೇಸರಕ್ಕೆ ಕಾರಣವಾಗಿದೆ. ಇದಕ್ಕೆ ಪ್ರಮುಖ ಕಾರಣ, ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಅಭಿಪ್ರಾಯ ಸಂಗ್ರಹಿಸಲು ಸಮಿತಿ ರಚನೆ ಮಾಡಲಾಗಿತ್ತು. ಅದರಂತೆ ನಡೆದ ಸಭೆಲ್ಲಿ ಹಾಲಿ ಅಧ್ಯಕ್ಷರಾಗಿದ್ದ ಸಿ.ಪಿ.ಉಮೇಶ್ ಮುಂದುವರೆಸಿಕೊಂಡು ಹೋಗಬೇಕು. ಒಂದು ವೇಳೆ ಬದಲಾವಣೆ ಅನಿವಾರ್ಯವಾದರೆ ಉಪಾಧ್ಯಕ್ಷ ಟಿ.ಶ್ರೀಧರ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ ಅವರಿಗೆ ಅವಕಾಶ ಕೊಡಬೇಕೆಂಬ ಸಲಹೆ ಕೇಳಿಬಂದಿತ್ತು. ಈ ಅಂಶವನ್ನೇ ಫೈನಲ್ ಮಾಡಿ ರಾಜ್ಯಕ್ಕೆ ಕಳುಹಿಸಲಾಗಿತ್ತು.
ಇದಾದ ಬಳಿಕ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ನಡೆದ ಸಭೆಯಲ್ಲಿಯೂ ಉಮೇಶ್ ಪರವಾಗಿಯೇ ಬೆಳವಣಿಗೆ ನಡೆದಿತ್ತು. ಒಂದೂವರೆ ವರ್ಷದ ಅವಧಿಯಲ್ಲಿ ಪಕ್ಷ ಸಂಘಟನೆ ಜತೆಗೆ ಕ್ರಿಯಾಶೀಲರಾಗಿದ್ದರೆನ್ನುವ ಕಾರಣಕ್ಕೆ ಬದಲಾವಣೆಯಾಗುವುದಿಲ್ಲ ಎನ್ನುವ ಖಚಿತತೆ ಸಿಕ್ಕಿತ್ತು. ಆದರೆ ಇದ್ದಕ್ಕಿದ್ದಂತೆ ಬದಲಾವಣೆ ಮಾಡಲಾಗಿದೆ. ಹೀಗಾದರೆ ಸಮಿತಿ ರಚನೆ ಏಕೆ ಮಾಡಬೇಕಿತ್ತು. ಅಭಿಪ್ರಾಯ ಸಂಗ್ರಹಿಸುವ ಅವಶ್ಯಕತೆ ಏನಿತ್ತು?. ಶಿಸ್ತಿನ ಪಕ್ಷದಲ್ಲಿ ಇಂತಹ ಅಶಿಸ್ತಿನ ಬೆಳವಣಿಗೆ ನಡೆದರೆ ಮುಖಂಡರು ಹಾಗೂ ಕಾರ್ಯಕರ್ತರು ಏನೆಂದು ಅರ್ಥ ಮಾಡಿಕೊಳ್ಳಬೇಕೆನ್ನುವ ಪ್ರಶ್ನೆ ಪಕ್ಷದೊಳಗೆ ಚರ್ಚೆಗೆ ಕಾರಣವಾಗುತ್ತಿದೆ. ಮಾತ್ರವಲ್ಲದೆ ಕೆಲವರು ರಾಜ್ಯ ನಾಯಕರೊಂದಿಗೂ ಈ ವಿಚಾರದ ಬಗ್ಗೆ ಗಮನಸೆಳೆಯುತ್ತಿದ್ದಾರೆ. ಅನಿರೀಕ್ಷಿತವಾಗಿ ತೆಗೆದುಕೊಂಡಿರುವ ನಿಲುವು ಪಕ್ಷಕ್ಕೆ ಹಿನ್ನಡೆಯುಂಟು ಮಾಡಿದೆ ಎನ್ನುವ ವಿಚಾರವನ್ನು ಮನದಟ್ಟು ಮಾಡಿಕೊಟ್ಟಿದ್ದಾರೆಂದು ತಿಳಿದುಬಂದಿದೆ.

ನೂತನ ಅಧ್ಯಕ್ಷರ ವಿರುದ್ಧವೂ ಅಸಮಾಧಾನ: ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಡಾ.ಎನ್.ಎಸ್.ಇಂದ್ರೇಶ್ ಅವರ ನಡೆಯ ಬಗ್ಗೆಯೂ ಪಕ್ಷದೊಳಗೆ ಸಾಕಷ್ಟು ಬೇಸರಕ್ಕೆ ಕಾರಣವಾಗಿದೆ. ಜಿಲ್ಲಾ ಸಮಿತಿಯಲ್ಲಿ ಅಭಿಪ್ರಾಯ ಸಂಗ್ರಹಿಸಿ ಸೀಮಿತ ಹೆಸರನ್ನು ಕಳುಹಿಸಿಕೊಡಲಾಗಿದೆ. ಹೀಗಿರುವಾಗ ಪ್ರಭಾವ ಬೀರಿ ಅಧ್ಯಕ್ಷ ಸ್ಥಾನವನ್ನು ಕಸಿದುಕೊಂಡಿರುವುದು ಸರಿಯಲ್ಲ ನಡೆಯಲ್ಲ. ಹೀಗಾದಾಗ ಕಾರ್ಯಕರ್ತರು, ಮುಖಂಡರಿಗೆ ಪಕ್ಷದೊಳಗೆ ಕೆಲಸ ಮಾಡಲು ಸಿದ್ಧರಿರುವುದಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎನ್ನುವ ಮೂಲಕ ಹಾಸನದ ಮಾಜಿ ಶಾಸಕ ಪ್ರೀತಂ ಗೌಡ, ಜಿಲ್ಲಾಧ್ಯಕ್ಷರ ನೇಮಕ ವಿಚಾರದಲ್ಲಿ ಮೂಗು ತೂರಿಸಿರುವುದಕ್ಕೆ ಪರೋಕ್ಷವಾಗಿ ಆಕ್ರೋಶ ಹೊರಹಾಕುತ್ತಿದ್ದಾರೆ.
ಇನ್ನು ಈ ನಡುವೆ ಅಧಿಕಾರ ಹಸ್ತಾಂತರಕ್ಕೆ ಮುನ್ನವೇ ಇಂದ್ರೇಶ್ ಅವರು ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಅವರನ್ನು ಭೇಟಿ ಮಾಡಿ ಅಭಿನಂದಿಸಿರುವುದು ಪಕ್ಷದೊಳಗೆ ಅಸಮಾಧಾನ ತರಿಸಿದೆ. ಹಲವು ತಿಂಗಳಿಂದ ಪಕ್ಷದಿಂದಲೇ ಅಂತರ ಕಾಯ್ದುಕೊಂಡಿರುವ ಕೆ.ಸಿ.ನಾರಾಯಣಗೌಡ ಭೇಟಿ ಅನಿವಾರ್ಯವೇ ಎನ್ನುವ ಮಾತನ್ನು ಕೇಳುತ್ತಿದ್ದಾರೆ. ಒಟ್ಟಾರೆ ಜಿಲ್ಲಾಧ್ಯಕ್ಷರ ಬದಲಾವಣೆ ಕಮಲ ಪಾಳಯದಲ್ಲಿ ಹಂತ ಹಂತವಾಗಿ ಕಾವೇರುತ್ತಿದ್ದು, ಮುಂದೆ ಏನೆಲ್ಲ ಬೆಳವಣಿಗೆಯಾಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

ಗೋವಿಂದ ಗೋವಿಂದ: ಇಂದ್ರೇಶ್ ಆಯ್ಕೆ ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ಫೋಸ್ಟರ್‌ಗಳು ಹರಿದಾಡತೊಡಗಿವೆ. ಅದರಂತೆ ಇಂದ್ರೇಶ್ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಸ್ವಂತ ಗ್ರಾಮದಲ್ಲಿ ಜೆಡಿಎಸ್, ರೈತ ಸಂಘದ ಅಭ್ಯರ್ಥಿಗಳಿಗಿಂತ ಕಡಿಮೆ ಮತಗಳನ್ನು ಪಡೆದುಕೊಂಡಿದ್ದಾರೆ.
ಜಿಲ್ಲೆಯ ಪೈಕಿ ಏಳು ವಿಧಾನಸಭಾ ಕ್ಷೇತ್ರದಲ್ಲಿ ಕಳಪೆ ಮಟ್ಟದ ಸಾಧನೆ ಮಾಡಿದ್ದಾರೆ. ಅಂತಹವರಿಗೆ ಜಿಲ್ಲಾಧ್ಯಕ್ಷರ ಪಟ್ಟ ನೀಡಿರುವುದು ಹಾಸ್ಯಾಸ್ಪದ. ಲೋಕಸಭಾ ಚುನಾವಣೆಯಲ್ಲಿ 2 ಲಕ್ಷಕ್ಕೂ ಹೆಚ್ಚು ಮತ ಪಡೆದಿದ್ದ ಡಾ.ಸಿದ್ದರಾಮಯ್ಯ, ಹಿರಿಯ ನಾಯಕ ಕೆ.ಎಸ್.ನಂಜುಂಡೇಗೌಡ, ವಿಧಾನಸಭಾ ಚುನಾವಣೆಯಲ್ಲಿ 40 ಸಾವಿರಕ್ಕೂ ಹೆಚ್ಚು ಮತ ಪಡೆದ ಸಚ್ಚಿದಾನಂದ, ಡಾ.ಎಸ್.ಪಿ.ಸ್ವಾಮಿ ರಾಜ್ಯನಾಯಕರ ಕಾಣಲಿಲ್ಲವೇ?. ಜಿಲ್ಲೆಯಲ್ಲಿ ಕಮಲ ಅರಳುವುದು ರಾಜ್ಯ ನಾಯಕರಿಗೆ ಇಷ್ಟವಿಲ್ಲ ಎಂದು ಸ್ಪಷ್ಟವಾಗುತ್ತಿದೆ. ಆದ್ದರಿಂದ ಜಿಲ್ಲಾ ಬಿಜೆಪಿ ಗೋವಿಂದ ಗೋವಿಂದ, ಕಾರ್ಯಕರ್ತರ ಕಥೆ ಗೋವಿಂದ ಗೋವಿಂದ ಎನ್ನುವ ಮೂಲಕ ನಾಯಕರ ನಿರ್ಧಾರದ ಬಗ್ಗೆ ಪರೋಕ್ಷವಾಗಿ ಆಕ್ರೋಶ ಹೊರಹಾಕುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net