

ಮಂಡ್ಯ: ಜಿಲ್ಲಾ ಬಿಜೆಪಿಗೆ ನೂತನ ಅಧ್ಯಕ್ಷರನ್ನಾಗಿ ಡಾ.ಎನ್.ಎಸ್.ಇಂದ್ರೇಶ್ ಅವರನ್ನು ಆಯ್ಕೆ ಮಾಡಲಾಗಿದೆ. ಆದರೆ ಹಿರಿಯರು, ಪ್ರಮುಖ ಆಕಾಂಕ್ಷಿತರನ್ನು ಕಡೆಗಣಿಸಿ ನಡೆದಿರುವ ಬೆಳವಣಿಗೆ ಅಸಮಾಧಾನಕ್ಕೆ ಕಾರಣವಾಗಿದೆ. ಮಾತ್ರವಲ್ಲದೆ ಮಂಡ್ಯದಲ್ಲಿ ಜೆಡಿಎಸ್‌ಗೆ ಟಾಂಗ್ ಕೊಡಲು ಹಾಸನದ ಮಾಜಿ ಶಾಸಕ ಪ್ರೀತಂಗೌಡ ಗೇಮ್‌ಪ್ಲ್ಯಾನ್ ಎನ್ನುವುದು ಸ್ಪಷ್ಟವಾಗುತ್ತಿದೆ.
ಹಿಂದಿನಿಂದಲೂ ಜಿಲ್ಲೆಯನ್ನು ಗಂಭೀರವಾಗಿ ಪರಿಗಣಿಸಿದ ಬಿಜೆಪಿಗರು, ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಅಂತಹುದೇ ಮತ್ತೊಂದು ನಡೆಯನ್ನು ಅನುಸರಿಸಿದ್ದಾರೆ. ಜಿಲ್ಲಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಮುಖಂಡರು ಹಾಗೂ ಮಂಡಲದ ಅಧ್ಯಕ್ಷರ ಅಭಿಪ್ರಾಯ ಪಡೆದು ಇದ್ದಕ್ಕಿದ್ದಂತೆಯೇ ಇಂದ್ರೇಶ್ ಆಯ್ಕೆಮಾಡಿರುವುದು ಗೊಂದಲಕ್ಕೆ ಎಡೆಮಾಡಿಕೊಡಿದ್ದಾರೆ.
ಅನಿರೀಕ್ಷಿತ ನಿಲುವು: ಬಿ.ವೈ.ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಜಿಲ್ಲಾಧ್ಯಕ್ಷರ ಬದಲಾವಣೆ ಮಾಡುವ ಪ್ರಕ್ರಿಯೆಗೂ ಚಾಲನೆ ನೀಡಲಾಯಿತು. ಅದರಂತೆ ಜಿಲ್ಲಾ ಉಸ್ತುವಾರಿಯೂ ಆಗಿದ್ದ ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದ ಶಾಸಕ ಮಹೇಶ್ ಟೆಂಗಿನಕಾಯಿ ಅಭಿಪ್ರಾಯ ಸಂಗ್ರಹಿಸಿದರು. ಇದರಲ್ಲಿ ಬಹುತೇಕರು ಸಿ.ಪಿ.ಉಮೇಶ್ ಅವರನ್ನೇ ಮುಂದುವರೆಸಿಕೊಂಡು ಹೋಗಬೇಕೆಂದು ಸಲಹೆ ನೀಡಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಾಗಿದರೂ ಸಿಪಿಯು ಪರವಾಗಿಯೇ ಬ್ಯಾಟಿಂಗ್ ಮಾಡಿದ್ದರು. ಇದಕ್ಕೆ ಕಾರಣವೂ ಇದೆ.
ಜಿಲ್ಲೆಯಲ್ಲಿ ನೆಪಮಾತ್ರಕ್ಕೆ ಜಿಲ್ಲಾಧ್ಯಕ್ಷ ಸ್ಥಾನದಂತಿತ್ತು. ಜತೆಗೆ ಪಕ್ಷದೊಳಗೆ ಕ್ರಿಯಾಶೀಲ ಚಟುವಟಿಕೆಗಳು ಅಷ್ಟೊಂದು ನಡೆಯುತ್ತಿರಲಿಲ್ಲ. ಮೂರು ನಾಲ್ಕು ಬಣಗಳ ನಡುವೆ ಶೀತಲಸಮರ ನಡೆಯುತ್ತಿತ್ತು. ಈ ನಡುವೆ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷದೊಳಗೆ ಶಿಸ್ತು ಹಾಗೂ ಸಂಘಟನೆಯ ಕಾರಣಕ್ಕಾಗಿ ಹೊಸ ಜಿಲ್ಲಾಧ್ಯಕ್ಷರನ್ನು ನೇಮಿಸುವ ಪ್ರಕ್ರಿಯೆ ಬಿಜೆಪಿ ಮುಂದಾಗಿತ್ತು. ಅದರಂತೆ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಗಮನಾರ್ಹ ಕೆಲಸದ ಜತೆಗೆ ಪಕ್ಷದೊಳಗೂ ಚಟುವಟಿಕೆಗೆ ಬೆಂಬಲವಾಗಿ ನಿಲ್ಲುತ್ತಿದ್ದ ಉಮೇಶ್‌ಗೆ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನವನ್ನು ನೀಡಲಾಗಿತ್ತು.
ಅಧಿಕಾರ ವಹಿಸಿಕೊಂಡ ಬಳಿಕ ಪ್ರತಿಯೊಂದು ಹಂತದಲ್ಲಿಯೂ ಪಕ್ಷ ಸಂಘಟನೆ ಜತೆಗೆ ಮುಖಂಡರು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆದುಕೊಂಡರು. ಇದರ ಪರಿಣಾಮ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಷಾ, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಜಿಲ್ಲೆಯಲ್ಲಿ ಪಾಲ್ಗೊಂಡ ಕಾರ್ಯಕ್ರಮ ಅಭೂತಪೂರ್ವ ಯಶಸ್ಸು ಕಂಡಿತ್ತು. ಮಾತ್ರವಲ್ಲದೆ ಪಕ್ಷದ ಕಾರ್ಯಕ್ರಮ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತದ ಬಗ್ಗೆ ಪ್ರತಿಭಟನೆಗಳನ್ನು ನಡೆಸಿದರು. ಈ ನಡುವೆಯೂ ಗಮನಾರ್ಹ ವಿಷಯವೆಂದರೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸದಿದ್ದರೂ ನಿರೀಕ್ಷೆಗೂ ಮೀರಿದ ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಯಿತು. ಕೇವಲ ಒಂದೂವರೆ ವರ್ಷದ ಅವಧಿಯಲ್ಲಿ ಪಕ್ಷದೊಳಗೆ ಸಾಕಷ್ಟು ಬದಲಾವಣೆ ತಂದಿದ್ದರು.
ಈ ಎಲ್ಲ ಕಾರಣದಿಂದಲೇ ಹಾಗೂ ಭವಿಷ್ಯದ ದೃಷ್ಟಿಯಿಂದ ಉಮೇಶ್ ಮುಂದುವರೆಸುವಂತೆ ತೀವ್ರ ಒತ್ತಾಯ ಕೇಳಿಬಂದಿತ್ತು. ಇದಲ್ಲದೆ ಜಿಲ್ಲಾ ಉಪಾಧ್ಯಕ್ಷ ಟಿ.ಶ್ರೀಧರ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ಇಂಡುವಾಳು ಸಚ್ಚಿದಾನಂದ ಸೇರಿದಂತೆ 20ಕ್ಕೂ ಹೆಚ್ಚು ಆಕಾಂಕ್ಷಿತರು ಜಿಲ್ಲಾಧ್ಯಕ್ಷ ಸ್ಥಾನದ ರೇಸ್‌ನಲ್ಲಿದ್ದರು. ಈ ನಡುವೆ ಬೆಂಗಳೂರಿನಲ್ಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ನಡೆದ ಸಭೆಯಲ್ಲಿಯೂ ಚರ್ಚೆ ನಡೆದು ಸಿಪಿಯು ಅವರನ್ನೇ ಮುಂದುವರೆಸುವ ಭರವಸೆ ನೀಡಲಾಗಿತ್ತು. ಆದರೆ ಎಲ್ಲ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿ ಹೊಸಬರನ್ನು ಆಯ್ಕೆ ಮಾಡಲಾಗಿದೆ.
ಪಕ್ಷದ ನಾಯಕರ ನಿಲುವಿನ ಬಗ್ಗೆ ಅಸಮಾಧಾನವಿದ್ದರೂ ಬಹಿರಂಗಗೊಂಡಿಲ್ಲ. ಆದ್ದರಿಂದ ಮುಂದಿನ ದಿನದಲ್ಲಿ ಏನೆಲ್ಲ ಬೆಳವಣಿಗೆಯಾಗಲಿದೆ, ನಾಯಕರ ನಿರ್ಧಾರದ ಪರಿಣಾಮ ಏನಾಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.
ಮಂಡ್ಯ ಪಾಲಿಟಿಕ್ಸ್‌ಗೆ ಪ್ರೀತಂ ಎಂಟ್ರಿ?
ಹಾಗೆ ನೋಡಿದರೆ, ಇಂದ್ರೇಶ್ ಆಯ್ಕೆ ಬಹಳಷ್ಟು ಅಚ್ಚರಿ ಮೂಡಿಸುತ್ತಿದೆ. ತಮ್ಮ ಪರಿವರ್ತನಾ ಟ್ರಸ್ಟ್ ಮೂಲಕ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸಾಮಾಜಿಕ ಚಟುವಟಿಕೆ ಮಾಡಿಕೊಂಡು ಬಂದ ಅವರು, ಬಿಜೆಪಿ ಸೇರ್ಪಡೆಗೊಂಡು ಮಂಡ್ಯ ವಿಶ್ವವಿದ್ಯಾನಿಲಯದ ಯೋಜನೆ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಂಡಳಿ ನಾಮನಿರ್ದೇಶಕರಾದರು. ಬಳಿಕ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಯಾಗಿಯೂ ಆಯ್ಕೆಯಾದರು. ಆದರೆ ಪಕ್ಷದ ನಿರೀಕ್ಷೆಯಂತೆ ಮತಗಳನ್ನು ತೆಗೆದುಕೊಳ್ಳುವಲ್ಲಿ ವಿಲರಾದರು. ಮಾತ್ರವಲ್ಲದೆ ಉಳಿದ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳಿಗೆ ಹೋಲಿಸಿದರೆ ಅತಿ ಕಡಿಮೆ ಮತಗಳಿಕೆ ಇಂದ್ರೇಶ್ ಹೆಸರಲ್ಲಿದೆ. ಅಂದರೆ ಕಳೆದ ಚುನಾವಣೆಯಲ್ಲಿ ಗಳಿಸಿದ ಮತ 6,470 ಮತಗಳು ಮಾತ್ರ. ಇದು ಚರ್ಚೆಗೆ ಕಾರಣವಾಗಿದೆ.
ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಅಂಕ ಪಡೆದವರು ಹಾಗೂ ಹಲವು ವರ್ಷದಿಂದ ಕೆಲಸ ಮಾಡಿದವರನ್ನು ಕಡೆಗಣಿಸಿ ಇಂದ್ರೇಶ್‌ಗೆ ಪಟ್ಟ ಕಟ್ಟಿರುವುದು ಹಿಂದಿನ ಗುಟ್ಟಿನ ಬಗ್ಗೆ ಚರ್ಚೆ ನಡೆಯುತ್ತಿದೆ. ಅದರಂತೆ ಪ್ರಮುಖವಾಗಿ ಹಾಸನ ಮಾಜಿ ಶಾಸಕ ಪ್ರೀತಂ ಗೌಡ ಗೇಮ್ ಪ್ಲ್ಯಾನ್ ಆಗಿದೆ ಎನ್ನುವುದು ಪಕ್ಷದ ಅಂಗಳದಿಂದ ಕೇಳಿಬರುತ್ತಿದೆ. ಕಡುವೈರಿ ಜೆಡಿಎಸ್‌ಗೆ ಟಾಂಗ್ ಕೊಡಲು ಪ್ರೀತಂ, ತಮ್ಮ ಆಪ್ತ ಬಳಗದಲ್ಲಿರುವ ಇಂದ್ರೇಶ್‌ಗೆ ಜಿಲ್ಲಾಧ್ಯಕ್ಷ ಸ್ಥಾನ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಎನ್ನುವುದು ಈಗಾಗಲೇ ೋಷಣೆಯಾಗಿದೆ. ಅದರಂತೆ ಜೆಡಿಎಸ್ ಪ್ರಾಬಲ್ಯವಿರುವ ಮಂಡ್ಯ ಜಿಲ್ಲೆಯನ್ನು ಜೆಡಿಎಸ್‌ಗೆ ಬಿಟ್ಟುಕೊಡುವುದು ಬಹುತೇಕ ಖಚಿತ. ಅಂತೆಯೇ ಮೈತ್ರಿ ೋಷಣೆ ಬಳಿಕ ಬಿಜೆಪಿ ಜಿಲ್ಲಾ ನಾಯಕರು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡುತ್ತಿರುವುದು ಹಾಗೂ ದಳಪತಿಗಳ ಬಗ್ಗೆ ಸ್‌ಟಾಕಾರ್ನರ್ ತೋರಿಸುತ್ತಿರುವುದು ಕಂಡುಬರುತ್ತಿದೆ. ಜತೆಗೆ ಎಂಪಿ ಚುನಾವಣೆಗೆ ಅಭ್ಯರ್ಥಿಯಾಗಿ ಎಚ್‌ಡಿಕೆ ಬರುತ್ತಾರೆನ್ನುವ ಗಟ್ಟಿಮಾತುಗಳಿವೆ. ಈ ಹಿನ್ನೆಲೆಯಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಕೆಲವೊಂದು ನಿರ್ಧಾರ ತೆಗೆದುಕೊಳ್ಳುವಾಗಿ ಜಿಲ್ಲಾಧ್ಯಕ್ಷರ ನಿಲುವು ಪ್ರಮುಖವಾಗಲಿದೆ. ಅದರಂತೆ ಜೆಡಿಎಸ್‌ಗೆ ಅನಾನೂಕೂಲವಾಗುವಂತಹ ತೀರ್ಮಾನ ಮಾಡಿಕೊಳ್ಳಲು ನೆರವಾಗಬಹುದು. ಈ ಲೆಕ್ಕಾಚಾರದಲ್ಲಿ ಜೆಡಿಎಸ್‌ಗೆ ಒಳೇಟು ನೀಡಲು ಪ್ರೀತಂ ತಂತ್ರ ರೂಪಿಸುತ್ತಿದ್ದಾರೆಂದು ತಿಳಿದುಬಂದಿದೆ.
ಆದರೆ ಅದು ಅಷ್ಟೊಂದು ಸುಲಭವಲ್ಲ ಎನ್ನುವುದು ಬಿಜೆಪಿ ಮುಖಂಡರಿಗೂ ತಿಳಿದಿದೆ. ಜಿಲ್ಲೆಯಲ್ಲಿ ಜೆಡಿಎಸ್ ಬಲಶಾಲಿಯಾಗಿದ್ದು, ಮೈತ್ರಿಯಾದರೂ ಬಿಜೆಪಿಯಿಂದ ಸಂಪೂರ್ಣ ಬೆಂಬಲ ನಿರೀಕ್ಷೆ ಮಾಡುವಂತಿಲ್ಲ. ಇನ್ನು ಮೇಲುಕೋಟೆ ಕ್ಷೇತ್ರಕ್ಕೆ ಸೀಮಿತವಾಗಿದ್ದ ಇಂದ್ರೇಶ್, ಜಿಲ್ಲಾಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುವುದು ಸುಲಭವೇನಲ್ಲ. ಲೋಕಸಭೆ ಬಳಿಕ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳು ಎದುರಾಗಲಿವೆ. ಆದ್ದರಿಂದ ಯಾವ ರೀತಿ ಜವಾಬ್ದಾರಿ ನಿರ್ವಹಣೆ ಮಾಡುತ್ತಾರೆಂದು ಕಾದುನೋಡಬೇಕಿದೆ.