ಕಾಂಗ್ರೆಸ್ ಹೈಕಮಾಂಡ್ ಸಚಿವರಿಗೆ ಟಾರ್ಗೆಟ್ ಕೊಟ್ಟಿರಬಹುದು: ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ವ್ಯಂಗ್ಯ

1 (2)
Published on

ಮಂಡ್ಯ: ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವರಿಗೆ ಅವರ ಹೈಕಮಾಂಡ್ ಹಣ ಕೊಡುವಂತೆ ಟಾರ್ಗೆಟ್ ನಿಗದಿ ಮಾಡಿದೆ ಎನ್ನುವ ಚರ್ಚೆ ನಡೆಯುತ್ತಿವೆ. ದೇಶಾದ್ಯಂತ ಲೋಕಸಭಾ ಚುನಾವಣೆ ಮಾಡಲು ಹಣ ಸಂಗ್ರಹಿಸಿಕೊಡುವಂತೆ ಸೂಚನೆ ನೀಡಿರಬಹುದೆಂದು ಸಿ.ಪಿ.ಉಮೇಶ್ ವ್ಯಂಗ್ಯವಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ರಾಜೀನಾಮೆ ಒತ್ತಾಯಿಸಿ ನಗರದ ಸರ್‌ಎಂವಿ ಪ್ರತಿಮೆ ಎದುರು ನಡೆಯುತ್ತಿರುವ ಬಿಜೆಪಿ ಪ್ರತಿಭಟನೆಯಲ್ಲಿ ಮಾತನಾಡಿದರು. ಕೆಲವೇ ತಿಂಗಳಲ್ಲಿ ಎಂಪಿ ಚುನಾವಣೆ ನಡೆಯುವುದರಿಂದ ಕಾಂಗ್ರೆಸ್ ಸರ್ಕಾರ ಸಾಧ್ಯವಾದಷ್ಟು ಹಣ ಲೂಟಿ ಮಾಡುತ್ತಿದೆ. ಇದಕ್ಕೆ ಹಳೇ ಮೈಸೂರು ಭಾಗದ ಸಚಿವರನ್ನೇ ಕಾಂಗ್ರೆಸ್ ಹೆಚ್ಚಾಗಿ ಬಳಕೆ ಮಾಡಿಕೊಳ್ಳುತ್ತಿದೆ. ಅದರಲ್ಲಿಯೂ ಚಲುವರಾಯಸ್ವಾಮಿ ಮಂಡ್ಯದಿಂದಲೇ ಲಂಚ ತೆಗೆದುಕೊಳ್ಳಲು ಮುಂದಾಗಿರುವುದು ದುರಂತ. ಇನ್ನು ಡಿ.ಕೆ.ಶಿವಕುಮಾರ್ ಅವರಿಗೆ ಮುಂದೆ ಮುಖ್ಯಮಂತ್ರಿ ಮಾಡುತ್ತೇವೆ, ಹಣ ಸಂಗ್ರಹಿಸುವಂತೆ ಹೇಳಿರಬಹುದು. ಅದಕ್ಕೆ ಗುತ್ತಿಗೆದಾರರು ಅವರ ವಿರುದ್ಧ ಕಮಿಷನ್ ಕೇಳುತ್ತಿದ್ದಾರೆಂದು ಆರೋಪ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ. ಈ ಬಗ್ಗೆ ಪ್ರತಿದಿನವೂ ಮಾಧ್ಯಮದಲ್ಲಿ ವರದಿಯಾಗುತ್ತಿತ್ತು. ಆದರೆ ಕಳೆದ ಒಂಭತ್ತು ವರ್ಷದ ಅವಧಿಯಲ್ಲಿ ಒಂದೇ ಒಂದು ಭ್ರಷ್ಟಾಚಾರ ಮಾಡದೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದಕ್ಷ ಆಡಳಿತ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಲಂಚದಿಂದ ಹಣ ಸಂಗ್ರಹಿಸಿ ಚುನಾವಣೆ ಮಾಡಿ ಮೋದಿ ಅವರನ್ನು ಸೋಲಿಸಲು ಸಜ್ಜಾಗುತ್ತಿದೆ. ಅದು ಸಾಧ್ಯವಿಲ್ಲ. ಈ ಬಾರಿಯೂ ಮೋದಿ ಅವರೇ ಪ್ರಧಾನಿಯಾಗುತ್ತಾರೆಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net