

ಶಿವಮೊಗ್ಗ: ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡಿರುವುದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಸೋಮವಾರ ನಗರದಲ್ಲಿ ವಿಭಿನ್ನವಾಗಿ ಪ್ರತಿಭಟಿಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಮಹಿಳಾ ಮೋರ್ಚಾದಿಂದ ಮಹಿಳಾ ಸಂತೆ, ರೈತ ಮೋರ್ಚಾದಿಂದ ಎತ್ತಿನಗಾಡಿ ಮತ್ತು ಟ್ರಾೃಕ್ಟರ್ ಮೆರವಣಿಗೆ, ಯುವ ಮೋರ್ಚಾದಿಂದ ಕಾರು ಮತ್ತು ಬೈಕ್ ಎಳೆಯುವುದು, ನಗರ ಮೋರ್ಚಾದಿಂದ ಕಲ್ಪಿತ ಶವಯಾತ್ರೆ ಮಾಡಿ ಸರ್ಕಾರವನ್ನು ಅಣಕಿಸಿದರು.
ನಗರದ ವಿವಿಧೆಡೆಯಿಂದ ಏಕಕಾಲಕ್ಕೆ ಮೆರವಣಿಗೆ ಮೂಲಕ ಸೀನಪ್ಪ ಶೆಟ್ಟಿ ವೃತ್ತಕ್ಕೆ ಜಮಾಯಿಸಿದ ನೂರಾರು ಕಾರ್ಯಕರ್ತರು, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವುದನ್ನು ತೀವ್ರವಾಗಿ ಖಂಡಿಸಿದರು. ಅದರಲ್ಲೂ ಪೆಟ್ರೋಲ್‌ಗೆ 3.05 ರೂ. ಮತ್ತು ಡೀಸೆಲ್‌ಗೆ 3.02 ರೂ. ಏರಿಕೆ ಮಾಡಿರುವುದಕ್ಕೆ ಕೆಂಡಾಮಂಡಲರಾದರು.
ಇದೊಂದು ಪಿಕ್‌ಪ್ಯಾಕೆಟ್ ಸರ್ಕಾರ. ಖಾಲಿ ಖಜಾನೆ ಭರ್ತಿ ಮಾಡಿಕೊಳ್ಳಲು ಜನಸಾಮಾನ್ಯರ ಮೇಲೆ ಬೆಲೆ ಏರಿಕೆ ಬರೆ ಎಳೆದಿದೆ. ಬರದ ನಡುವೆ ಜನರ ಬದುಕು ತತ್ತರಿಸಿದೆ. ಇಂತಹ ಸಂದರ್ಭದಲ್ಲಿ ತೈಲ ಬೆಲೆ ಏರಿಸುವ ಮೂಲಕ ಜನಸಾಮಾನ್ಯರ ಬದುಕು ಮತ್ತಷ್ಟು ದುಸ್ತರ ಆಗುವಂತೆ ಮಾಡಿದೆ ಎಂದು ಕಿಡಿಕಾರಿದರು.
ಎಂಎಲ್‌ಸಿ ಭಾರತಿ ಶೆಟ್ಟಿ, ಮಾಜಿ ಎಂಎಲ್‌ಸಿ ಆರ್.ಕೆ.ಸಿದ್ದರಾಮಣ್ಣ, ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ, ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗಾಯತ್ರಿ ಮಲ್ಲಪ್ಪ, ನಗರ ಬಿಜೆಪಿ ಅಧ್ಯಕ್ಷ ಮೋಹನ್ ರೆಡ್ಡಿ, ಪ್ರಮುಖರಾದ ಗಿರೀಶ್ ಪಟೇಲ್, ಎಸ್.ಎಸ್.ಜ್ಯೋತಿಪ್ರಕಾಶ್, ಸಂತೋಷ್ ಬಳ್ಳೆಕೆರೆ, ಎಸ್.ಜ್ಞಾನೇಶ್ವರ್, ಪ್ರಭಾಕರ್, ಹೃಷಿಕೇಶ್ ಪೈ, ಎಂ.ಬಿ.ಹರಿಕೃಷ್ಣ, ಸಿ.ಎಚ್.ಮಾಲತೇಶ್, ಎನ್.ಕೆ.ಜಗದೀಶ್, ವಿನ್ಸೆಂಟ್ ರೋಡ್ರಿಗಸ್, ಶಾಂತಾ ಸುರೇಂದ್ರ, ಮಂಗಳಾ ಮತ್ತಿತರರು ಪ್ರತಿಭಟನೆಯಲ್ಲಿದ್ದರು.