ಬಿಜೆಪಿ ನೋಟಿಸ್‌ಗೂ ಉತ್ತರ ಕೊಡಲ್ಲ, ನನ್ನ ತಲೆಮೇಲೆ ತೂಗುಗತ್ತಿ

GOWDA
Published on

ದಾವಣಗೆರೆ: ನನ್ನ ಮೇಲೂ ತೂಗುಗತ್ತಿ ತೂಗುತ್ತಿದೆ. ನಾನು ಯಾವುದಕ್ಕೂ ಹೆದರುವುದಿಲ್ಲ. ನೋಟಿಸ್‌ಗೂ ಉತ್ತರ ಕೊಡುವುದಿಲ್ಲ. ಮೊದಲು ಬಿಎಸ್‌ವೈ ವಿರುದ್ಧ ಮಾತನಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸವಾಲು ಹಾಕಿದರು.

ಪಕ್ಷದ ಉಚ್ಚಾಟಿತ ಮಾಜಿ ಶಾಸಕ ಟಿ.ಗುರುಸಿದ್ದನಗೌಡ ಅವರ ದಾವಣಗೆರೆ ನಗರದ ನಿವಾಸಕ್ಕೆ ಭಾನುವಾರ ಭೇಟಿ ನೀಡಿದ್ದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದರು.

ನಾನು ಬಿಜೆಪಿಯಲ್ಲೇ ಇದ್ದೇನೆ. ಕಾಂಗ್ರೆಸ್‌ಗೆ ಹೋಗುವುದಾಗಿ ಹೇಳಿಲ್ಲ. ಅವರೂ ಕರೆದಿಲ್ಲ. ನಾನು ಲೋಕಸಭಾ ಚುನಾವಣೆ ಆಕಾಂಕ್ಷಿ. ಟಿಕೆಟ್ ಬಗ್ಗೆ ಕಾದು ನೋಡುತ್ತೇನೆ. ಒಂದು ವೇಳೆ ಬಿಜೆಪಿಯಲ್ಲಿ ಟಿಕೆಟ್ ಸಿಗದೇ ಹೋದಲ್ಲಿ ಕಾರ್ಯಕರ್ತರು, ಅಭಿಮಾನಿಗಳ ಅಭಿಪ್ರಾಯದಂತೆ ನಡೆದುಕೊಳ್ಳುತ್ತೇನೆ ಎಂದು ಉತ್ತರಿಸಿದರು.

ನನ್ನ ಹೋರಾಟ ಯಾವುದೇ ವ್ಯಕ್ತಿ ವಿರುದ್ಧವಲ್ಲ. ಪಕ್ಷದ ಸಂಘಟನೆಗಾಗಿ ಕೆಲಸ ಮಾಡುತ್ತಿದ್ದೇನೆ. ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ ಮಾಡಬೇಕು. ಇದಕ್ಕೆಂದೇ 9ನೇ ವರ್ಷದ ಸಾಧನೆಯನ್ನು ಪ್ರತಿ ಹಳ್ಳಿಗೂ ಮುಟ್ಟಿಸಿದ್ದೇನೆ ಎಂದರು.

ಗುರುಸಿದ್ದನಗೌಡರ ಪುತ್ರ ಡಾ. ರವಿಕುಮಾರ್ ಲೋಕಸಭಾ ಆಕಾಂಕ್ಷಿ ಎಂಬುದಾಗಿ ಬಹಿರಂಗವಾಗಿ ಹೇಳಿಕೊಂಡಿಲ್ಲ. ಅವರು ಬೆಳೆಯದಿರಲೆಂಬ ಕಾರಣಕ್ಕೆ ಅವರನ್ನ್ನೂ ಉಚ್ಚಾಟನೆ ಮಾಡಲಾಗಿದೆ ಎಂದು ದೂರಿದರು.

ನಾಳೆ ಮಾಡಾಳು ವಿರೂಪಾಕ್ಷಪ್ಪ ಅವರನ್ನು ಭೇಟಿ ಮಾಡಲಿದ್ದು, ನನ್ನನ್ನು ರೆಬೆಲ್ ರೇಣುಕಾಚಾರ್ಯ ಎಂದು ಕರೆದರೂ ಪರವಾಗಿಲ್ಲ. ಪಕ್ಷದ ಚೌಕಟ್ಟಿನಲ್ಲಿ ಮಾತನಾಡಬೇಕು. ಆದರೆ, ಅಲ್ಲ್ಲಿ ಅವಕಾಶ ಸಿಗದಿದ್ದರಿಂದಾಗಿ ಮಾಧ್ಯಮದ ಮೂಲಕ ಹಂಚಿಕೊಳ್ಳುತ್ತಿದ್ದೇನೆ ಎಂದು ಹೇಳಿಕೊಂಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net