ಮಂತ್ರಿ ಪದವಿಗಾಗಿ ಬಿಜೆಪಿ ಸೇರಲಿಲ್ಲ

6
Published on

ಮೈಸೂರು: ನಾನು ಮಂತ್ರಿ ಪದವಿ ಬಯಸಿ ಬಿಜೆಪಿಗೆ ಸೇರಲಿಲ್ಲ ಎಂದು ಎಂಎಲ್‌ಸಿ ಆಗಿ ನಾಮನಿದೇಶನಗೊಂಡಿರುವ ಎಚ್.ವಿಶ್ವನಾಥ್ ಸ್ಪಷ್ಟಪಡಿಸಿದರು.

ವಿಧಾನಪರಿಷತ್‌ಗೆ ನಾಮನಿರ್ದೇಶನಗೊಂಡ ಬಳಿಕ ಗುರುವಾರ ನಗರದ ಬಿಜೆಪಿ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾತಿಗೆ ತಪ್ಪದ ಮಗ ಹಾಗೂ ನಾಯಕ ಎಂಬುದನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಾಬೀತು ಮಾಡಿದ್ದಾರೆ. ನನಗೆ ಮಂತ್ರಿ ಸ್ಥಾನ ನೀಡುವುದು ಸಿಎಂ ವಿವೇಚನೆಗೆ ಬಿಟ್ಟಿದ್ದು. ಅದು ಅವರ ಪರಮಾಧಿಕಾರವಾಗಿದೆ ಎಂದರು.

ಗುಜರಾತ್‌ನಲ್ಲಿ ಅತ್ಯಂತ ಪ್ರಭಾವಿಯಾಗಿರುವ ಪಟೇಲ್ ಸಮುದಾಯವನ್ನು ಹಿಮ್ಮೆಟ್ಟಿಸಿ ನರೇಂದ್ರ ಮೋದಿ ಮುಖ್ಯಮಂತ್ರಿ ಆಗಿದ್ದರು. ಸತತ ಮೂರು ಬಾರಿ ಸಿಎಂ ಹುದ್ದೆ ಅಲಂಕರಿಸಿದ್ದ ಅವರು ನಂತರದ ದಿನಗಳಲ್ಲಿ ದೇಶದ ಪ್ರಧಾನಿಯಾದರು ಎಂದು ಹೇಳುವ ಮೂಲಕ ಮೋದಿ ಅವರನ್ನು ಗುಣಗಾನ ಮಾಡಿದರು.

ನನ್ನನ್ನು ಕೆಲ ಸಾಹಿತಿಗಳು ಟೀಕಿಸಿದ್ದಾರೆ. ಆದರೆ, ನಾನೇನು ಕಾಗಕ್ಕ ಗುಬ್ಬಕ್ಕನ ಕಥೆಗಳನ್ನು ಬರೆದಿಲ್ಲ. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ರಾಜಕಾರಣದ ಬಗ್ಗೆ ಪುಸ್ತಕಗಳನ್ನು ಬರೆದಿದ್ದೇನೆ. ನನ್ನ ಅನುಭವವನ್ನು ಗುರುತಿಸಿದ ಬಿಜೆಪಿ ನನಗೆ ಈ ಸ್ಥಾನ ನೀಡಿದೆ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದರು.

ಕಾಂಗ್ರೆಸ್‌ನಲ್ಲಿ ಗರ್ಭಗುಡಿ ಸಂಸ್ಕೃತಿ ಇದೆ. ಜಿಲ್ಲೆಯಲ್ಲಿ ಬಿಜೆಪಿ ಜತೆಗೆ ಜನರು ಹೆಜ್ಜೆ ಹಾಕುತ್ತಿದ್ದಾರೆ. ಈ ನಿಟ್ಟಿನಲ್ಲಿ ನಾಯಕರಾದ ನಾವು ಕೂಡ ಸಾಗಬೇಕಿದೆ. ಜನರ ವಿಶ್ವಾಸ ಗಳಿಸುವುದು ಬಹಳ ಮುಖ್ಯವಾಗಿದೆ ಎಂದರು. ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಸೇರಿದಂತೆ ಪಕ್ಷದ ವಿವಿಧ ಪದಾಧಿಕಾರಿಗಳಿದ್ದರು.

ಕಾಂಗ್ರೆಸ್ ಅಧ್ಯಕ್ಷರೇ ಎಂದ ಎಚ್ವಿ!: ಬಿಜೆಪಿ ಕಚೇರಿಯಲ್ಲಿ ಮಾತು ಆರಂಭಿಸಿದ ವಿಶ್ವನಾಥ್, ‘ಮೈಸೂರು ನಗರ ಕಾಂಗ್ರೆಸ್ ಅಧ್ಯಕ್ಷರೇ’ ಎಂದು ಹೇಳಿದಾಗ ಅಲ್ಲಿದ್ದ ಮುಖಂಡರು ಹಾಗೂ ಕಾರ್ಯಕರ್ತರು ಕೆಲಕ್ಷಣ ತಬ್ಬಿಬ್ಬಾದರು. ತಪ್ಪಿನ ಅರಿವಾದ ತಕ್ಷಣ ಅವರು, ಕ್ಷಮಿಸಬೇಕು ಎಂದು ಹೇಳಿ ಮಾತು ಮುಂದುವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net