

ಮೂಡಿಗೆರೆ: ಸತತವಾಗಿ 3ನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ಹಿಡಿಯಲು ದೇಶದ ಜನ ಆಶೀರ್ವಾದ ಮಾಡಿದ್ದಾರೆ. ಮೋದಿ ಆಡಳಿತದಲ್ಲಿ ಭಾರತ ವಿಶ್ವದಲ್ಲಿ ಉತ್ತಮ ರಾಷ್ಟ್ರವಾಗಿ ಮಾಡಲು ಬಿಜೆಪಿ ತಯಾರಾಗಿದೆ ಎಂದು ಬಿಜೆಪಿ ಹಿರಿಯ ಮುಖಂಡ ಎಂ.ಆರ್.ಜಗದೀಶ್ ಹೇಳಿದರು.
ಬಿಜೆಪಿ ಗೆಲುವಿನ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದ ಅವರು, ಕಾಂಗ್ರೆಸ್‌ನ 60 ವರ್ಷದ ಆಡಳಿತದಲ್ಲಿ ನಡೆದ ಲೋಪ ದೋಷಗಳನ್ನು ಪ್ರಧಾನಿ ನರೇಂದ್ರ ಮೋದಿ 10 ವರ್ಷದ ಆಡಳಿತದಲ್ಲಿ ಸರಿಪಡಿಸಿದ್ದಾರೆ. 10 ವರ್ಷದಲ್ಲಿ ಶಿಕ್ಷಣ ಕ್ಷೇತ್ರ ಮುಂಚೂಣಿಯಲ್ಲಿ ಸಾಗಿದೆ. ಆರೋಗ್ಯ ಕ್ಷೇತ್ರ ಪರಿಣಾಮಕಾರಿಯಾಗಿ ಬೆಳೆದಿದೆ. ಆಹಾರ ಭದ್ರತೆಯಿಂದ ಯಾರೊಬ್ಬರೂ ಹಸಿವಿನಿಂದ ಕಂಗೆಡುವ ಪರಿಸ್ಥಿತಿ ಇಲ್ಲ. ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ದೊರೆತಿರುವುದರಿಂದ ಪದವೀಧರರು ನಿರುದ್ಯೋಗಿಗಳಾಗಿಲ್ಲ. ವಿದ್ಯುತ್ ಸಮಸ್ಯೆ ಸರಿಪಡಿಸಲಾಗಿದೆ. ಕುಡಿಯುವ ನೀರು ಎಲ್ಲರಿಗೂ ತಲುಪಿದೆ. ಗ್ರಾಮೀಣ ರಸ್ತೆ, ನಗರ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಮೂಲ ಸೌಕರ್ಯ ದೇಶದ ಜನರಿಗೆ ತಲುಪಿದೆ ಎಂದು ತಿಳಿಸಿದರು.
ಮಾಜಿ ಪಪಂ ಅಧ್ಯಕ್ಷೆ ಸರೋಜಾ ಸುರೇಂದ್ರ ಮಾತನಾಡಿ, ಕಾಂಗ್ರೆಸ್ ಗ್ಯಾರಂಟಿಯನ್ನು ರಾಜ್ಯದ ಜನ ಒಪ್ಪಿಕೊಂಡಿಲ್ಲ. ರಾಜ್ಯದಲ್ಲಿ ಸರ್ಕಾರ ಅಧಿಕಾರದಲ್ಲಿದ್ದರೂ ಕಾಂಗ್ರೆಸ್ ಹೀನಾಯವಾಗಿ ಸೋಲು ಅನುಭವಿಸಿದೆ. ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಅಧಿಕ ಸ್ಥಾನಗಳಿಸಿದೆ. ಕಾಂಗ್ರೆಸ್ ಸರ್ಕಾರದ ಅಧಿಕಾರ ದುರ್ಬಳಕೆ, ಭ್ರಷ್ಟಾಚಾರದಿಂದ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಬಗ್ಗೆ ಕಾಂಗ್ರೆಸ್ ಹೀಯಾಳಿಸುತ್ತಿತ್ತು. ಈಗ ಕಾಂಗ್ರೆಸ್ ನೆಲಕಚ್ಚಿದೆ ಎಂದರು.
ಪಟ್ಟಣದ ವಿವಿಧಡೆ ಪಟಾಕಿ ಸಿಡಿಸಿ ಕಾರ್ಯಕರ್ತರು ಸಂಭ್ರಮಿಸಿದರು. ಬಿಜೆಪಿ ಕಚೇರಿಯಿಂದ ಮೆರವಣಿಗೆ ಸಾಗಿ ಲಯನ್ಸ್ ವೃತ್ತದಲ್ಲಿ ಸಮಾವೇಶ ನಡೆಸಲಾಯಿತು. ಬಿಜೆಪಿ ಮುಖಂಡರಾದ ದುಂಡುಗ ಪ್ರಮೋದ್, ಡಿ.ಎಸ್.ಸುರೇಂದ್ರ, ಪದ್ಮನಾಭ, ಅವಿನಾಶ್, ತಾರೇಶ್, ಸಾಗರ್, ಪರೀಕ್ಷಿತ್, ನಯನ ತಳವಾರ, ಶರತ್ ಲ್ಗುಣಿ, ಶಶಿ ಕೆಲ್ಲೂರು, ಪ್ರಸನ್ನ ತಳವಾರ, ಮೋಹನ್ ಇತರರಿದ್ದರು.