ಬಂದ್ ಹಿಂಪಡೆಯಲು ಬಿಜೆಪಿ ಆಗ್ರಹ

New BJP New
Published on

ಹುಬ್ಬಳ್ಳಿ : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂಬ ಸುಳ್ಳು ಆರೋಪದಡಿ ಕೆಲ ದಲಿತ ಸಂಘಟನೆಗಳು ಕಾಂಗ್ರೆಸ್ ನೇತೃತ್ವದಡಿ ಜ. 9ಕ್ಕೆ ಕರೆ ನೀಡಿರುವ ಹುಬ್ಬಳ್ಳಿ-ಧಾರವಾಡ ಬಂದ್ ಕರೆಯನ್ನು ಹಿಂಪಡೆಯುವಂತೆ ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಹಾಗೂ ಬಿಜೆಪಿ ರಾಜ್ಯ ಎಸ್​ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕೌತಾಳ ಆಗ್ರಹಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯತನದಿಂದಾಗಿ ಈಗಾಗಲೇ ಅಭಿವೃದ್ಧಿ ಸ್ಥಗಿತಗೊಂಡಿದೆ. ಇದೀಗ ಬಂದ್ ಕರೆ ನೀಡುವ ಮೂಲಕ ಅವಳಿ ನಗರದ ವ್ಯಾಪಾರ, ವಹಿವಾಟಿಗೆ ಹಾಗೂ ಜನಸಾಮಾನ್ಯರಿಗೆ ತೊಂದರೆ ನೀಡದಂತೆ ಒತ್ತಾಯಿಸಿದರು.

ಡಾ. ಬಿ.ಆರ್. ಅಂಬೇಡ್ಕರ ಅವರು ಕಾಂಗ್ರೆಸ್​ನಿಂದ ಸಾಕಷ್ಟು ಕಿರುಕುಳ, ಮಾನಸಿಕ ಯಾತನೆ ಅನುಭವಿಸಿದ್ದರು. ಅಂಬೇಡ್ಕರ ಅವರು ಜೀವಂತ ಇದ್ದಾಗ ಹಾಗೂ ಅವರ ನಿಧನದ ನಂತರವೂ ಕಾಂಗ್ರೆಸ್ ಅವರಿಗೆ ಅವಮಾನ ಮಾಡಿತು. ಈಗಲಾದರೂ ಅವರ ಹೆಸರು ಬಿಟ್ಟು ದೇವರ ಹೆಸರು ಸ್ಮರಿಸಬೇಕು ಹಾಗೂ ಅಂಬೇಡ್ಕರ ಅವರಲ್ಲಿ ಕ್ಷಮೆಯಾಚಿಸಬೇಕೆಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದರು. ಆದರೆ, ಕಾಂಗ್ರೆಸ್​ನವರು ಅವರ ಹೇಳಿಕೆ ತಿರುಚಿದ್ದಾರೆ ಎಂದು ಹೇಳಿದರು.

ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ ಅವರು ತುರ್ತು ಪರಿಸ್ಥಿತಿ ಘೋಷಿಸುವ ಮೂಲಕ ಸಂವಿಧಾನಕ್ಕೆ ಅವಮಾನ ಮಾಡಿದ್ದರು. ರಾಹುಲ್ ಗಾಂಧಿ ಅವರು ಸಂವಿಧಾನ ಬದಲಾವಣೆ ಬಗ್ಗೆ ಹೇಳಿದ್ದರು. ಆ ಸಮಯದಲ್ಲಿ ದಲಿತ ಸಂಘಟನೆಗಳು ಎಲ್ಲಿ ಹೋಗಿದ್ದವು ? ಎಂದು ಕೌತಾಳ ಪ್ರಶ್ನಿಸಿದರು.

ಹುಬ್ಬಳ್ಳಿ-ಧಾರವಾಡ ಬಂದ್ ಕರೆಗೆ ಶಾಸಕ ಪ್ರಸಾದ ಅಬ್ಬಯ್ಯ ಅವರು ದಲಿತ ಸಂಘಟನೆಗಳನ್ನು ಉತ್ತೇಜಿಸುತ್ತಿದ್ದಾರೆ. ಆರ್​ಎಸ್​ಎಸ್​ನವರು ಸಂವಿಧಾನ ಸುಟ್ಟಿದ್ದಾರೆಂದು ಅಬ್ಬಯ್ಯ ಆರೋಪಿಸಿದ್ದರು. ಅಬ್ಬಯ್ಯ ಆಪಾದನೆ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲು ಏರುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದರು.

ಕಾಂಗ್ರೆಸ್​ನವರು ಹುಬ್ಬಳ್ಳಿ-ಧಾರವಾಡ ಬಂದ್ ನಡೆಸದೇ, ಶಾಂತಿಯುತ ಪ್ರತಿಭಟನೆ ಮಾಡಬೇಕು ಎಂದ ಅರವಿಂದ ಬೆಲ್ಲದ, ಒಂದು ವೇಳೆ ಬಂದ್ ಮಾಡಿದರೆ ಕಾಂಗ್ರೆಸ್ ವಿರುದ್ಧ ಬಿಜೆಪಿಯೂ ಬೀದಿಗಿಳಿದು ಬಂದ್ ಮಾಡುತ್ತದೆ. ಅದರ ಹೊಣೆ ಕಾಂಗ್ರೆಸ್ ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಉಪ ಮಹಾಪೌರರಾದ ದುರ್ಗಮ್ಮ ಬಿಜವಾಡ, ಪಾಲಿಕೆ ಸದಸ್ಯೆ ಚಂದ್ರಿಕಾ ಮೇಸ್ತ್ರಿ, ದತ್ತಮೂರ್ತಿ ಕುಲಕರ್ಣಿ, ಸಂತೋಷ ಅರಕೇರಿ, ರವಿ ನಾಯಕ ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net