ಅವ್ಯವಹಾರಗಳ ತನಿಖೆಗೆ ಬಿಜೆಪಿ ಪಟ್ಟು

FotoJet
Published on

ತಿಪಟೂರು ತಾಪಂ ಕಚೇರಿ ಎದುರು ಪ್ರತಿಭಟನೆ | ರಾಗಾಂಧಿ ವಸತಿ ನಿಲಯ ಅವ್ಯವಸ್ಥೆ ಸರಿಪಡಿಸಿ

ತಿಪಟೂರು: ತಾಲೂಕಿನ ಕುಪ್ಪಾಳು ಗ್ರಾಪಂನಲ್ಲಿ ವಿವಿಧ ಕಾಮಗಾರಿಗಳ ಅವ್ಯವಹಾರಗಳು, ಇಂದಿರಾಗಾಂಧಿ ವಸತಿನಿಲಯದಲ್ಲಿ ನಡೆದಿರುವ ಭ್ರಷ್ಟಾಚಾರ, ಅವ್ಯವಸ್ಥೆ ಖಂಡಿಸಿ ತಾಪಂ ಕಚೇರಿ ಎದುರು ತಾಲೂಕು ಬಿಜೆಪಿಯಿಂದ ಸೋಮವಾರ ಪ್ರತಿಭಟಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಮುಖಂಡ ಗಂಗರಾಜು ಮಾತನಾಡಿ, ತಾಲೂಕಿನ ಅರಳಗುಪ್ಪೆ ಇಂದಿರಾಗಾಂಧಿ ವಸತಿನಿಲಯದಲ್ಲಿ ನಡೆದಿರುವ ಭ್ರಷ್ಟಾಚಾರ ಮತ್ತು ಅಲ್ಲಿನ ಅವ್ಯವಸ್ಥೆ ತಾಲೂಕು ಆಡಳಿತದ ದಿಕ್ಸೂಚಿಯಾಗಿದೆ. ವಸತಿನಿಲಯದಲ್ಲಿ ಪೂರೈಸಲಾಗುತ್ತಿರುವ ಆಹಾರ ಸೇವಿಸಿ 5 ಮಕ್ಕಳು ಆಸ್ಪತ್ರೆ ಸೇರಿದ ಪ್ರಕರಣ ಕುರಿತಂತೆ ಸೂಕ್ತ ತನಿಖೆಯಾಗಬೇಕು. ಅಸ್ವಸ್ಥತೆಗೆ ಕಾರಣ ಏನೆಂಬುದು ಸಾರ್ವಜನಿಕವಾಗಿ ಗೊತ್ತಾಗಬೇಕಿದೆ. ಹಾಸ್ಟೇಲ್​ಗೆ ಉಪವಿಭಾಗಾಧಿಕಾರಿ ಭೇಟಿ ನೀಡಿ ವಾರ ಕಳೆದರೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿರುವುದು ಖಂಡನೀಯ. ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕುಪ್ಪಾಳು ಗ್ರಾಪಂನಲ್ಲಿ ಹಿಂದೆ ಇದ್ದ ಮೂವರು ಅಧ್ಯಕ್ಷರ ಅವಧಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಕಾಮಗಾರಿಗೆ ನಕಲಿ ಬಿಲ್​ ಸೃಷ್ಟಿಸಿ ಲಕ್ಷಾಂತರ ರೂಪಾಯಿ ಹಣ ಪಡೆಯಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕೆಂದು ಹಾಲಿ ಅಧ್ಯಕ್ಷೆ ಗಾಯತ್ರಿ ಮೈಲಾರಸ್ವಾಮಿ ಅವರು ತಾಪಂ ಇಒ ಅವರಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಗಮಹರಿಸಬೇಕು ಎಂದು ಒತ್ತಾಯಿಸಿದರು.

ಮುಖಂಡ ಹರಿಸಮುದ್ರ ಗಂಗಾಧರ್​ ಮಾತನಾಡಿ, ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್​ ಆರೋಪ ಹೊರಿಸಿ, ಹುಸಿ ಭರವಸೆಗಳ ಮೂಲಕ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್​ ಸರ್ಕಾರದ ಬ್ರಹ್ಮಾಂಡ ಬ್ರಷ್ಟಾಚಾರದ ವಿರುದ್ಧ ಜನ ತಿರುಗಿ ಬಿದ್ದಿದ್ದಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಮಾಜಿ ಸಚಿವ ಬಿ.ಸಿ.ನಾಗೇಶ್​ ತಂದ 435 ಕೋಟಿ ವೆಚ್ಚದ ಜೆಜೆಎಂ ಕಾಮಗಾರಿ ಹಳ್ಳ ಹಿಡಿಯುತ್ತಿದೆ. ಹಿಂದಿನ ಅವಧಿಯ ಕಾಮಗಾರಿಯ ಗುತ್ತಿಗೆಯನ್ನು ಕಾಂಗ್ರೆಸ್​ ಗುತ್ತಿಗೆದಾರರಿಗೆ ಕೊಡಲಾಗುತ್ತಿದೆ. ತಾಲೂಕಿನ ನಾಗರಘಟ್ಟ ಪಿಡಿಒ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿ 3 ತಿಂಗಳಾದರೂ ಇಲ್ಲಿವರೆಗೂ ಕ್ರಮ ವಹಿಸಲಾಗಿಲ್ಲ. ಇಒ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಸೂಕ್ತ ಕ್ರಮ ಗೈಗೊಳ್ಳಬೇಕು ಎಂದು ಆಗ್ರಹಿಸಿದರು.

ತಾಪಂ ಇಒ ಎಚ್​.ಎಂ. ಸುದರ್ಶನ್​ ಅವರಿಗೆ ಮನವಿ ಸಲ್ಲಿಸಲಾಯಿತು. ಈಚನೂರು ಗ್ರಾಪಂ ಅಧ್ಯಕ್ಷ ಉದಯ್​ಕುಮಾರ್​, ನಗರಸಭೆ ಮಾಜಿ ಸದಸ್ಯರಾದ ಪ್ರಸನ್ನಕುಮಾರ್​, ಮಂಜುನಾಥ್​. ಅನಂತರಾಮು, ಮಾವಿನತೋಪು ಮಂಜು, ಚೇತನ್​ ಹಾಗೂ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net