

ಯಲ್ಲಾಪುರ: ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂಬ ಮಾತು ಬಿಜೆಪಿ ಮುಖಂಡರ ಭಾಷಣಕ್ಕೆ ಮಾತ್ರ ಸೀಮಿತ. ಅವರ ಪಕ್ಷದಲ್ಲಿ ಆ ಮಾತಿಗೆ ಬೆಲೆ ಇಲ್ಲ. ಅದನ್ನು ನಿಜವಾಗಿಸಿದ್ದು ಕಾಂಗ್ರೆಸ್ ಪಕ್ಷ ಎಂದು ಕೆಪಿಸಿಸಿ ಉಪಾಧ್ಯಕ್ಷ ಐವಾನ್ ಡಿಸೋಜಾ ಹೇಳಿದರು.
ಪಟ್ಟಣದ ಅಡಕೆ ಭವನದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷ ಎಲ್ಲ ಜಾತಿ, ಧರ್ಮ, ವರ್ಗದವರನ್ನು ಸಮಾನವಾಗಿ ಕಾಣುತ್ತದೆ. ಬಿಜೆಪಿ ರೈತರನ್ನು, ಬಡವರನ್ನು, ಜನಸಾಮಾನ್ಯರನ್ನು ಹತ್ತಿಕ್ಕುವ ಕಾರ್ಯ ಮಾಡುತ್ತಿದೆ ಎಂದರು.
ಯುವ ಮುಖಂಡ ವಿವೇಕ ಹೆಬ್ಬಾರ ಮಾತನಾಡಿ, ಎಲ್ಲ ನಾಯಕರು, ಕಾರ್ಯಕರ್ತರು ಪಕ್ಷದಲ್ಲಿ ಒಗ್ಗೂಡಿದ್ದೇವೆ. ನಮ್ಮ ಶಕ್ತಿಯನ್ನು ಪ್ರತಿ ಬೂತ್ನಲ್ಲಿ ತೋರಿಸಬೇಕು. ಬಿಜೆಪಿಗೆ ಹೋಗಿ ತಪ್ಪು ಮಾಡಿದ್ದೆವು ಎಂಬ ಪಶ್ಚಾತ್ತಾಪ ಇತ್ತು. ಈಗ ಸಂತೋಷದಿಂದ ಮರಳಿ ಮನೆಗೆ ಬಂದಿದ್ದೇವೆ ಎಂದರು.
ಪಕ್ಷದ ಜಿಲ್ಲಾಧ್ಯಕ್ಷ ಸಾಯಿನಾಥ ಗಾಂವ್ಕರ ಮಾತನಾಡಿದರು. ವಿವೇಕ ಹೆಬ್ಬಾರ ಬೆಂಬಲಿಗರಾದ ಡಾ.ರವಿ ಭಟ್ಟ ಬರಗದ್ದೆ, ಶ್ರೀಕಾಂತ ಶೆಟ್ಟಿ, ಸುಬ್ಬಣ್ಣ ಕುಂಟೆಗಾಳಿ, ಪ್ರೇಮಾನಂದ ನಾಯ್ಕ, ಶಿರೀಷ ಪ್ರಭು, ಗಜಾನನ ಭಟ್ಟ ಇತರರು ಬಿಜೆಪಿ ತೊರೆದು ಕಾಂಗ್ರೆಸ್ಗೆ ಸೇರಿದರು.
ಮಾಜಿ ಶಾಸಕ ವಿ.ಎಸ್. ಪಾಟೀಲ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಹೆಗಡೆ ಹೊಸಬಾಳೆ, ಪ್ರಕಾಶ ಹೆಗಡೆ, ಬ್ಲಾಕ್ ಅಧ್ಯಕ್ಷ ಎನ್.ಕೆ. ಭಟ್ಟ ಮೆಣಸುಪಾಲ, ಪ್ರಮುಖರಾದ ರಾಘವೇಂದ್ರ ಭಟ್ಟ, ವಿ.ಎಸ್. ಭಟ್ಟ, ಡಿ.ಎನ್. ಗಾಂವ್ಕರ, ರವಿಚಂದ್ರ ನಾಯ್ಕ, ಶಂಕರ ಹೆಗಡೆ ಇತರರಿದ್ದರು.
ಸಮಾವೇಶದಲ್ಲಿ ವಿವೇಕ ಹೆಬ್ಬಾರ ಭಾಷಣ ಮುಗಿಸುತ್ತಿದ್ದಂತೆ ಕೆಲ ಬೆಂಬಲಿಗರು ’ಶಿವರಾಮ ಹೆಬ್ಬಾರ ಅವರಿಗೆ ಜಯವಾಗಲಿ’ ಎಂದು ಘೊಷಣೆ ಕೂಗಿ ಅಚ್ಚರಿ ಮೂಡಿಸಿದರು.