ಶೇ.80ರಷ್ಟು ಪಂಚಾಯಿತಿ ಗೆಲ್ಲುವ ಪ್ರತಿಜ್ಞೆ: ನಳಿನ್ ಕುಮಾರ್ ಕಟೀಲ್

bjp new
Published on

ವಿಜಯವಾಣಿ ಸುದ್ದಿಜಾಲ ಮಂಗಳೂರು

ರಾಜ್ಯದ 37 ಸಂಘಟನಾತ್ಮಕ ಜಿಲ್ಲೆಗಳ ಪೈಕಿ 35 ಜಿಲ್ಲೆಗಳಲ್ಲಿ ಜಿಲ್ಲಾಧ್ಯಕ್ಷರ ಆಯ್ಕೆಯಾಗಿದೆ. ಇದೇ ಮೊದಲ ಬಾರಿ ಎಲ್ಲ ಜಿಲ್ಲೆಗಳಲ್ಲಿ ಅಧ್ಯಕ್ಷರ ಪದಗ್ರಹಣ ನಡೆಸಲಾಗುತ್ತಿದೆ. ಇದು ಕೇವಲ ಸಮಾರಂಭವಾಗಿರದೆ ಮುಂಬರುವ ಪಂಚಾಯಿತಿ ಚುನಾವಣೆಯಲ್ಲಿ ಶೇ.80ರಷ್ಟು ಗೆಲುವು ಸಾಧಿಸುವ ಪ್ರತಿಜ್ಞಾ ಸಮಾರಂಭವಾಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಆಶಯ ವ್ಯಕ್ತಪಡಿಸಿದರು.

ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸೋಮವಾರ ದ.ಕ.ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾ ಬಿಜೆಪಿಯಲ್ಲಿ ಇದು ಸುವರ್ಣಯಗವಾಗಿದ್ದು, ನೂತನ ಅಧ್ಯಕ್ಷರಿಗೆ ಇದನ್ನು ಉಳಿಸುವ ಮಹತ್ತರ ಜವಾಬ್ದಾರಿಯಿದೆ. ಎಲ್ಲ ಬೂತ್‌ಗಳಲ್ಲಿ ಶೇ.100ರಷ್ಟು ಪೇಜ್ ಪ್ರಮುಖರನ್ನು ಮಾಡಿ ಜಿಲ್ಲೆಯ ಮನೆ ಮನೆಗಳಲ್ಲಿ ಕಮಲ ಅರಳಿಸಬೇಕಿದೆ. ಸವಾಲಾಗಿರುವ ಮಂಗಳೂರು ಕ್ಷೇತ್ರದಲ್ಲಿ ಪಕ್ಷ ಗೆಲ್ಲಿಸುವ ಜವಾಬ್ದಾರಿ ನೂತನ ಅಧ್ಯಕ್ಷರ ಮೇಲಿದೆ ಎಂದರು.

ನಿಕಟಪೂರ್ವ ಅಧ್ಯಕ್ಷ ಸಂಜೀವ ಮಠಂದೂರು ನೂತನ ಅಧ್ಯಕ್ಷ ಸುದರ್ಶನ್ ಎಂ. ಅವರಿಗೆ ಪಕ್ಷದ ಧ್ವಜ ನೀಡುವ ಮೂಲಕ ಅಧಿಕಾರವನ್ನು ಹಸ್ತಾಂತರಿಸಿದರು. ಈ ವೇಳೆ ಹಿಂದಿನ ಅವಧಿಯಲ್ಲಿ ಪದಾಧಿಕಾರಿಗಳಾಗಿದ್ದವರನ್ನು ಗೌರವಿಸಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಎಸ್.ಅಂಗಾರ, ಉಮಾನಾಥ ಕೋಟ್ಯಾನ್, ಡಾ.ವೈ.ಭರತ್ ಶೆಟ್ಟಿ, ಹರೀಶ್ ಪೂಂಜ, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ವಿಭಾಗ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ, ಸಹ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ವಿವಿಧ ಮಂಡಲಗಳ ನೂತನ ಅಧ್ಯಕ್ಷರಾದ ಸುನೀಲ್ ಆಳ್ವ, ತಿಲಕ್‌ರಾಜ್, ವಿಜಯ್ ಕುಮಾರ್ ಶೆಟ್ಟಿ, ಚಂದ್ರಹಾಸ್ ಪಂಡಿತ್‌ಹೌಸ್, ದೇವಪ್ಪ ಪೂಜಾರಿ , ಜಗನ್ನಿವಾಸ ರಾವ್, ಸಾಜ ರಾಧಾಕೃಷ್ಣ ಆಳ್ವ, ಹರೀಶ್ ಕಂಜಿಪಿಲಿ ಉಪಸ್ಥಿತರಿದ್ದರು.

ಶಾಸಕ ವೇದವ್ಯಾಸ ಕಾಮತ್ ಸ್ವಾಗತಿಸಿದರು. ದೇವದಾಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಸುಧೀರ್ ಶೆಟ್ಟಿ ಕಣ್ಣೂರು ವಂದಿಸಿದರು.

ನೂತನ ಪದಾಧಿಕಾರಿಗಳು: ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಸುದರ್ಶನ್ ಎಂ. ನೇತೃತ್ವದಲ್ಲಿ ಪಕ್ಷವನ್ನು ಮುನ್ನಡೆಸಲು ನೂತನ ಸಮಿತಿ ರಚಿಸಲಾಗಿದೆ. ಜಿಲ್ಲಾ ಉಪಾಧ್ಯಕ್ಷರಾಗಿ ಕೊರಗಪ್ಪ ನಾಯ್ಕ, ಗಣೇಶ್ ಹೊಸಬೆಟ್ಟು, ಪ್ರಭಾ ಮಾಲಿನಿ, ಹರಿಕೃಷ್ಣ ಬಂಟ್ವಾಳ, ರಾಧಾಕೃಷ್ಣ ರೈ, ಸಂತೋಷ್ ರೈ ಬೋಳಿಯಾರು, ವೆಂಕಟ ವಳಲಂಬೆ, ಈಶ್ವರ್ ಕಟೀಲ್ ಅವರನ್ನು ಆಯ್ಕೆ ಮಾಡಲಾಗಿದೆ. ಕಾರ್ಯದರ್ಶಿಗಳಾಗಿ ರಾಮದಾಸ್ ಬಂಟ್ವಾಳ, ಸುಧೀರ್ ಶೆಟ್ಟಿ ಕಣ್ಣೂರು, ಕಸ್ತೂರಿ ಪಂಜ ಪ್ರಧಾನ ಕಾರ್ಯದರ್ಶಿ, ಜಿತೇಂದ್ರ ಕೊಟ್ಟಾರಿ ಕೋಶಾಧಿಕಾರಿ, ಸತೀಶ್ ಕುಂಪಲ, ಕೇಶವ ಭಟ್ ಮುಳಿಯ, ಧನಲಕ್ಷ್ಮಿ, ಜಯಂತಿ ನಾಯಕ್, ಪೂಜಾ ಪೈ, ಮಂಗಳಾ ಆಚಾರ್ಯ, ಭರತ್ ಸೂಟರ್‌ಪೇಟೆ, ಜಯಶ್ರೀ ಕರ್ಕೇರ, ಕಾರ್ಯಾಲಯ ಕಾರ್ಯದರ್ಶಿಯಾಗಿ ಸುಕೇಶ್ ಮೂಡುಬಿದಿರೆ, ಜಿಲ್ಲಾ ವಕ್ತಾರರಾಗಿ ರವಿಶಂಕರ್ ಮಿಜಾರ್, ಜಗದೀಶ್ ಶೇಣವ, ಮಾಧ್ಯಮ ಪ್ರಮುಖ್ ಆಗಿ ರಣದೀಪ್ ಕಾಂಚನ್ ಆಯ್ಕೆಯಾಗಿದ್ದಾರೆ. ಯುವ ಮೋರ್ಚಾ ಅಧ್ಯಕ್ಷರಾಗಿ ಸಂದೇಶ್ ಶೆಟ್ಟಿ, ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿ ಗೌರಿ ಬನ್ನೂರು, ಎಸ್‌ಸಿ ಮೋರ್ಚಾ ಅಧ್ಯಕ್ಷರಾಗಿ ವಿನಯ್‌ನೇತ್ರ, ಹಿಂದುಳಿದ ಮೋರ್ಚಾ ಅಧ್ಯಕ್ಷರಾಗಿ ಆರ್.ಸಿ.ನಾರಾಯಣ್ ಅವರನ್ನು ಆಯ್ಕೆ ಮಾಡಲಾಗಿದೆ.

ಜಗತ್ತಿನ ಅತೀ ದೊಡ್ಡ ಪಕ್ಷವೊಂದರ ಜಿಲ್ಲಾಧ್ಯಕ್ಷನಾಗಿ ಆಯ್ಕೆಯಾಗಿರುವುದು ಅವಿಸ್ಮರಣೀಯ ಕ್ಷಣ. ಮುಂದೆ ಹಲವು ಸವಾಲುಗಳಿದ್ದು, ಅದನ್ನು ಯಶಸ್ವಿಯಾಗಿ ನಿಭಾಯಿಸುವ ವಿಶ್ವಾಸವಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಮುನ್ನಡೆಸುತ್ತೇನೆ. ದ.ಕ ಜಿಲ್ಲೆ ಬಿಜೆಪಿ ಭದ್ರಕೋಟೆಯಾಗಿದ್ದು, ಯಾವುದೇ ದೇಶ ವಿರೋಧಿ ಶಕ್ತಿಗಳಿಗೆ ಜಿಲ್ಲೆಯಲ್ಲಿ ಸಂಘ ಪರಿವಾರವನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ. - ಸುದರ್ಶನ್ ಎಂ., ಬಿಜೆಪಿ ನೂತನ ಜಿಲ್ಲಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net