

ಮಂಡ್ಯ: ರಾಜ್ಯದಲ್ಲಿ ಬರ ತೀವ್ರವಾಗಿ ಕಾಡಲಾರಂಭಿಸಿದೆ. ಜನ, ಜಾನುವಾರುಗಳು ನೀರಿಲ್ಲದೆ ಪರದಾಡುವಂತಾಗಿದೆ. ಆದರೆ ರಾಜ್ಯ ಸರ್ಕಾರ ಇನ್ನೂ ಪರಿಹಾರ ಮಾತನಾಡುತ್ತಿದೆಯೇ ಹೊರತು ಸಮರೋಪಾದಿ ಪರಿಣಾಮಕಾರಿ ಕಾರ್ಯಗಳನ್ನು ಕೈಗೊಳ್ಳುತ್ತಿಲ್ಲ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲಾದ್ಯಂತ ಎಲ್ಲೆಡೆ ಮಳೆ ಇಲ್ಲದೆ ಬೆಳೆ ಬೆಳೆಯಲಾಗಿಲ್ಲ. ಇರುವ ಬೆಳೆ ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ. ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದೆ. ಬರವನ್ನೇ ಬಂಡವಾಳ ಮಾಡಿಕೊಂಡಿರುವ ಕಸಾಯಿಖಾನೆಗಳು ರೈತರಿಂದ ಕಡಿಮೆ ದರದಲ್ಲಿ ಜಾನುವಾರುಗಳನ್ನು ಖರೀದಿಸಿ ಕೇರಳಕ್ಕೆ ಸಾಗಿಸುತ್ತಿವೆ ಎಂದು ಆರೋಪಿಸಿದ್ದಾರೆ.
ಬರದಿಂದ ತತ್ತರಿಸಿರುವ ರೈತರು ಜಾನುವಾರುಗಳಿಗೆ ಮೇವು ಹಾಕಲಾಗದೆ ಪರಿತಪಿಸುತ್ತಿದ್ದಾರೆ. ನಿತ್ಯ ಬೇರೆ ಬೇರೆ ತಾಲೂಕುಗಳಿಂದ ಕೇರಳ ಮತ್ತು ತಮಿಳುನಾಡಿಗೆ ಲೋಡ್‌ಗಟ್ಟಲೆ ಹುಲ್ಲನ್ನು ಸಾಗಿಸಲಾಗುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಅಧಿಕಾರಿಗಳು ಸರ್ಕಾರ ಮುಂದಾಗದಿರುವುದು ವಿಪರ್ಯಾಸದ ಸಂಗತಿ. ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರು ಸರ್ಕಾರದ ಹಣದಲ್ಲಿ ಕಾರು-ಬಾರು ಮಾಡುತ್ತಿದ್ದಾರೆ. ಆದರೆ ರೈತರು ಮಾತ್ರ ಬರದಿಂದ ತತ್ತರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.