

ಮಂಡ್ಯ: ಚಳಿಗಾಲದ ಅಧಿವೇಶನ ನಡೆಯುತ್ತಿದ್ದ ಬೆಳಗಾವಿ ಜಿಲ್ಲೆಯಲ್ಲೇ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿರುವ ಘಟನೆ ನಡೆದಿರುವುದು ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಗೆ ಧಕ್ಕೆಯುಂಟಾಗಿದೆ. ಇನ್ನು ಸಂತ್ರಸ್ತೆಗೆ ರಕ್ಷಣೆ ನೀಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಲವಾಗಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಸಿ.ಟಿ.ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಸಿಎಂ ಸಿದ್ದರಾಮಯ್ಯ ಅವರು, ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆ ವೈಫಲ್ಯಕ್ಕಾಗಿ ಕರ್ನಾಟಕದ ಪರಿಶಿಷ್ಟ ಪಂಗಡದ ಮಹಿಳೆಯರು ಹಾಗೂ ರಾಜ್ಯದ ಎಲ್ಲ ಮಹಿಳೆಯರಲ್ಲಿ ಕ್ಷಮೆಯಾಚಿಸಬೇಕು. ಘಟನೆಯಿಂದ ನೊಂದ ಮಹಿಳೆ ಅನುಭವಿಸಿದ ಆಘಾತವನ್ನು ಊಹಿಸಲೂ ಸಾಧ್ಯವಿಲ್ಲ. ಆಕೆಯನ್ನು ಮನೆಯಿಂದ ಎಳೆದೊಯ್ದು, ವಿವಸ್ತ್ರಗೊಳಿಸಿ ಪ್ರಾಣಿಯಂತೆ ಥಳಿಸುತ್ತಿದ್ದಾಗ ಕೂಡ ರಕ್ಷಿಸಲು ಯಾರೂ ಬರಲಿಲ್ಲ. ರಾಜ್ಯವೇ ತಲೆತಗ್ಗಿಸುವಂತಹ ಘಟನೆ ನಡೆದಿದ್ದರೂ ಈ ವಿಚಾರವನ್ನು ಚಳಿಗಾಲದ ಅವೇಶನದಲ್ಲಿ ಚರ್ಚೆ ನಡೆಸಲು ಅವಕಾಶ ನೀಡದೆ ರಾಜ್ಯದ ಜನರನ್ನು ಅಪಮಾನಿಸಿದೆ ಎಂದು ಟೀಕಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಾಲ್ಕು ತಿಂಗಳ ಅವಧಿಯಲ್ಲಿ 216 ಅತ್ಯಾಚಾರ ಪ್ರಕರಣ, 6226 ಹಿಂಸಾಚಾರ ಪ್ರಕರಣ, 8043 ಸೈಬರ್ ಸಂಬಂಧಿತ ಪ್ರಕರಣ ವರದಿಯಾಗಿವೆ. ಈ ಅಂಕಿ ಅಂಶಗಳು ಕೇವಲ ಆರೋಪಗಳಲ್ಲ. ಕಾಂಗ್ರೆಸ್ಸಿಗರು ನಿರಾಕರಿಸಲಾಗ ಸತ್ಯಗಳು. ಪ್ರಾಥಮಿಕವಾಗಿ ಇದರಲ್ಲಿ ಬಲಿಪಶುಗಳಾದವರು ಹೆಚ್ಚಿನವರು ಮಹಿಳೆಯರೇ ಆಗಿದ್ದಾರೆ. ಸೋನಿಯಾಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಅವರು ಈ ಘಟನೆಯನ್ನು ಖಂಡಿಸಿದೆ ಮೌನವಾಗಿದ್ದಾರೆ. ಕನಿಷ್ಟ ಸಂತ್ರಸ್ಥರ ಬಗ್ಗೆ ಸಹಾನುಭೂತಿಯನ್ನು ವ್ಯಕ್ತಪಡಿಸಿಲ್ಲ. ಘಟನೆ ಕುರಿತು ಹೈಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿದೆ. ಇದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ನಿರ್ವಹಿಸುವಲ್ಲಿ ರಾಜ್ಯ ಸರ್ಕಾರದ ಅಸಮರ್ಪಕತೆ ಮತ್ತು ಸಮಸ್ಯೆಯ ಬಗ್ಗೆ ಸರ್ಕಾರಕ್ಕಿರುವ ಗಂಭೀರತೆಯ ಕೊರತೆಯನ್ನು ಎತ್ತಿ ತೋರಿಸುವುದಿಲ್ಲವೇ ಎಂದು ಪ್ರಶ್ನಿಸಿರುವ ಅವರು, ಮಹಿಳೆಯರ ಮೇಲಿನ ಅಪರಾಧಗಳನ್ನು ಬಿಜೆಪಿ ಎಂದಿಗೂ ಸಹಿಸುವುದಿಲ್ಲ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದಲ್ಲಿ ಕರ್ನಾಟಕದ ಮಹಿಳೆಯರು ಶೀಘ್ರದಲ್ಲೇ ಕಾಂಗ್ರೆಸ್ಸಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.