

ಮಂಡ್ಯ: ರಾಜ್ಯದಲ್ಲಿ ಬರ ಪರಿಸ್ಥಿತಿ ವ್ಯಾಪಕವಾಗಿದ್ದರೂ, ರಾಜ್ಯ ಸರ್ಕಾರ ಇನ್ನೂ ವೈಜ್ಞಾನಿಕ ಪರಿಹಾರ ನೀಡಿಲ್ಲ. 2 ಸಾವಿರ ರೂ ಪರಿಹಾರ ಕೊಡುವುದಾಗಿ ಹೇಳಿದ್ದಾರೆ. ಆದರೆ ಇನ್ನೂ ರೈತರ ಖಾತೆಗೆ ಹಣ ಬಂದಿಲ್ಲ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ್ ನಡಹಳ್ಳಿ ಆರೋಪಿಸಿದರು.
ಕಳೆದ ಬಾರಿ ರಾಜ್ಯದಲ್ಲಿ ಸಂಕಷ್ಟ ಪರಿಸ್ಥಿತಿ ಎದುರಾದಾಗ ಎನ್‌ಡಿಆರ್‌ಎ್ ನಿಯಮಾನುಸಾರ 6,800 ರೂ ಪರಿಹಾರ ಜತೆಗೆ ಇನ್ನೂ 6,500 ರೂ ಸೇರಿಸಿ 13 ಸಾವಿರ ರೂ ಪರಿಹಾರ ನೀಡಲಾಗಿತ್ತು. ಕಬ್ಬಿನ ಬೆಳೆಗೆ 11,500 ರೂಗೆ ಬದಲಾಗಿ 25 ಸಾವಿರ ರೂ ಕೊಟ್ಟಿದ್ದೆವು. ತೆಂಗು ಸೇರಿದಂತೆ ದೀರ್ಘಕಾಲದ ಬೆಳೆಗೆ 18 ಸಾವಿರ ರೂಗೆ ಬದಲಾಗಿ 28 ಸಾವಿರ ರೂ ಪರಿಹಾರ ನೀಡಲಾಗಿತ್ತು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬರಗಾಲದ ತೀವ್ರತೆ ಹೆಚ್ಚಾಗಿದೆ. ನಾಲೆಗಳಲ್ಲಿ ನೀರು ಹರಿಸುತ್ತಿಲ್ಲ. ಇರುವ ಬೆಳೆಯನ್ನು ರಕ್ಷಿಸಿಕೊಳ್ಳಲು ರೈತರು ಬೋರ್‌ವೆಲ್ ಮೋರೆ ಹೋದರೂ ಅಲ್ಲೂ ಸಹ ವಿದ್ಯುತ್ ಕಣ್ಣಾಮುಚ್ಚಾಲೆ. ರಾತ್ರಿ ವೇಳೆ 3 ಗಂಟೆ ವಿದ್ಯುತ್ ಕೊಡುತ್ತಾರೆ. ನೀರು ಹರಿಸಲು ರಾತ್ರಿ ರೈತರು ಹೊಲ-ಗದ್ದೆಗಳಲಿ ಕಾಯಬೇಕಿದೆ. ಚಿರತೆ ಕಾಟ ಬೇರೆ. ಪರಿಸ್ಥಿತಿ ಹೀಗಿರುವಾಗ ಹೇಗೆ ನಿಭಾಯಿಸುವುದು. ಹಗಲು ಹೊತ್ತಿನಲ್ಲಿ 7 ಗಂಟೆಗಳ ಕಾಲ ತ್ರಿ ೇಸ್ ವಿದ್ಯುತ್ ನೀಡುವಂತೆ ಒತ್ತಾಯಿಸಿದರು.
ಬರದಿಂದ ತತ್ತರಿಸಿರುವ ರೈತರ ಸ್ಥಿತಿಗತಿಯನ್ನು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿ ಸಾಂತ್ವನ ಹೇಳುವ ಪ್ರಯತ್ನವನ್ನು ಸರ್ಕಾರ ಮತ್ತು ಕೃಷಿ ಸಚಿವರು ಮಾಡಿಲ್ಲ. ರೈತ ಮೋರ್ಚಾ ವತಿಯಿಂದ ಗ್ರಾಮ ಪರಿಶ್ರಮ ಯಾತ್ರೆ ಪ್ರಾರಂಭಿಸಲಾಗಿದ್ದು, ಈಗಾಗಲೇ ಒಂದೆರೆಡು ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಮಂಡ್ಯಕ್ಕೆ ಭೇಟಿ ನೀಡಿದ್ದೇವೆ. ಇಲ್ಲಿನ ಸ್ಥಿತಿ ತುಂಬಾ ಗಂಭೀರವಾಗಿದೆ. ರೈತರ ಬೆಳೆಗೆ ನೀರಿಲ್ಲದೆ ಒಣಗುತ್ತಿವೆ. ಇದರಿಂದಾಗಿ ಕಬ್ಬು, ಬಾಳೆ, ಇತರೆ ತೋಟಗಾರಿಕೆ ಬೆಳೆಗಳನ್ನು ರೈತರು ಕಿತ್ತು ಹಾಕುತ್ತಿದ್ದಾರೆ. 6 ತಿಂಗಳ ಕಬ್ಬಿನ ಬೆಳೆ ಕಟಾವು ಮಾಡಿ ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇನ್ನು ಬಾಳೆ ಸಂಪೂರ್ಣ ಒಣಗಿಹೋಗಿದೆ. ಆದಾಗ್ಯೂ ರೈತರಿಗೆ ಸಾಂತ್ವನ ಹೇಳುವ ಕೆಲಸ ಸರ್ಕಾರದಿಂದಾಗಿಲ್ಲ ಎಂದು ಕಿಡಿಕಾರಿದರು.
ಕೆಆರ್‌ಎಸ್ ಡ್ಯಾನಿಂದ ನಾಲೆಗಳಲ್ಲಿ ಹರಿಯುವ ನೀರು ಮಳವಳ್ಳಿ ಕೊನೇ ಭಾಗಕ್ಕೆ ತಲುಪಿಲ್ಲ. ಇಂಡಿಯಾ ಮೈತ್ರಿಕೂಟದಲ್ಲಿರುವ ತಮಿಳುನಾಡು ಮುಖ್ಯಮಂತ್ರಿಯ ಸ್ಟಾಲಿನ್ ಮನವೊಲಿಸಿ ನೀರು ಉಳಿಸಿಕೊಂಡು ಜಿಲ್ಲೆಯ ರೈತರಿಗೆ ನೀಡುವುದನ್ನು ಬಿಟ್ಟು ತಮಿಳುನಾಡಿಗೆ ನೀರು ಬಿಟ್ಟು ನಮ್ಮ ರೈತರನ್ನು ಬಲಿಕೊಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ರಾಜ್ಯ ಸರ್ಕಾರದ ಇಂತಹ ನಿಲುವಿನಿಂದಾಗಿ ರೈತರು ಪರಿತಪಿಸುವಂತಾಗಿದೆ. ಕನಿಷ್ಟ ಬೋರ್‌ವೆಲ್‌ಗಳಲ್ಲೂ ಸಹ ನೀರು ಇಲ್ಲದಂತಾಗಿದೆ. ಅಂತರ್ಜಲ ಮಟ್ಟ ಕುಸಿದಿದೆ. ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿಲ್ಲ. ಇದೆಲ್ಲದ್ದಕ್ಕೂ ಇಲ್ಲಿನ ಸ್ಥಳೀಯ ಜನಪ್ರತಿನಿಧಿಗಳು, ಜಲಸಂಪನ್ಮೂಲ ಸಚಿವರು, ರಾಜ್ಯಸರ್ಕಾರವೇ ಕಾರಣ ಎಂದು ಆರೋಪಿಸಿದರು.
ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ಕೆ.ಎಸ್.ನಂಜುಂಡೇಗೌಡ, ಎಂ.ಆರ್.ಕುಮಾರಸ್ವಾಮಿ, ಬ್ಯಾಟರಾಯಿಗೌಡ, ಜಿಲ್ಲಾಧ್ಯಕ್ಷ ಜೋಗಿಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಇಂದ್ರೇಶ್ ಇತರರಿದ್ದರು.