ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿದ್ದು ಕಲೆಕ್ಷನ್, ಕಮಿಷನ್, ಕರಪ್ಷನ್: ಕರಪತ್ರ ಬಿಡುಗಡೆ ಮಾಡಿದ ಬಿಜೆಪಿ

BJP criticizes Congress government mandya
Published on

ಮಂಡ್ಯ: ರಾಜ್ಯದ ಜನತೆಗೆ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಕಳೆದ 10 ತಿಂಗಳಲ್ಲಿ ಮಾಡಿದ್ದು ಕೇವಲ ಕಲೆಕ್ಷನ್, ಕಮಿಷನ್ ಮತ್ತು ಕರಪ್ಷನ್ ಮಾತ್ರ ಎಂದು ಜಿಲ್ಲಾ ಬಿಜೆಪಿ ವಕ್ತಾರ ಸಿ.ಟಿ.ಮಂಜುನಾಥ್ ಆರೋಪಿಸಿದರು.
ನಗರದ ಬಿಜೆಪಿ ವಿಕಾಸ ಭವನದಲ್ಲಿ ಶುಕ್ರವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಸಾಧನೆ ಹಾಗೂ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದ ಅವರು, ರಾಜ್ಯದಲ್ಲಿ 900ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ರೈತರಿಗೆ ಆತ್ಮಸ್ಥೈರ್ಯ ತುಂಬಲು ಕ್ರಮಗಳೇ ಇಲ್ಲ. ಸರ್ಕಾರ ಇದ್ದೂ ಸತ್ತಂತಾಗಿದೆ. ಗಲಭೆಕೋರ ಪಿಎಫ್‌ಐ ಕಾರ್ಯಕರ್ತರ ಕೇಸು ಖುಲಾಸೆ ಮಾಡುತ್ತೀರಿ. ಇನ್ನೊಂದೆಡೆ ರಾಮಭಕ್ತ ಕರಸೇವಕರನ್ನು ಟಾರ್ಗೆಟ್ ಮಾಡುತ್ತೀರಿ. ಹಿಂದು ವಿರೋಧಿ ತುಷ್ಠೀಕರಣ ನೀತಿ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಜನತೆ ತಕ್ಕ ಪಾಠ ಕಲಿಸುವ ದಿನ ದೂರವಿಲ್ಲ ಎಂದು ಎಚ್ಚರಿಸಿದರು.
ಬಿಜೆಪಿ ಸರ್ಕಾರವಿದ್ದಾಗ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ 4 ಸಾವಿರ ರೂ ಕೊಡುತ್ತಿತ್ತು. ಪ್ರಧಾನಿ ಮೋದಿ ಅವರು 6 ಸಾವಿರ ರೂ ಕೊಡುತ್ತಿದ್ದರು. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ತಕ್ಷಣ ಅದನ್ನು ಸ್ಥಗಿತಗೊಳಿಸಿ ರೈತ ವಿರೋಧಿ ಧೋರಣೆಯನ್ನು ಅನುಸರಿಸುತ್ತಿದೆ. ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಹಾಗೂ ಕೆಟ್ಟ ಆರ್ಥಿಕ ನೀತಿಗಳಿಂದ ರಾಜ್ಯದ ಖಜಾನೆ ಖಾಲಿಯಾಗಿದೆ. ಬೊಕ್ಕಸ ಸಂಪೂರ್ಣವಾಗಿ ಬರಿದಾಗಿದೆ. ರಾಜ್ಯ ಸಂಪೂರ್ಣವಾಗಿ ಆರ್ಥಿಕವಾಗಿ ದಿವಾಳಿಯಾಗಿದೆ. ಸರ್ಕಾರವೊಂದು ರಾಜ್ಯದ ಆರ್ಥಿಕ ಸ್ಥಿತಿಯನ್ನು ಈ ಪರಿ ಹದಗೆಡಿಸಿರುವುದು ರಾಜ್ಯದ ಇತಿಹಾಸದಲ್ಲೇ ಇದೇ ಮೊದಲಾಗಿದೆ ಎಂದು ದೂರಿದರು.
ದೆಹಲಿ ಹೈಕಮಾಂಡ್‌ಗೆ ಎಟಿಎಂ ಆಗಿರುವ ಕಾಂಗ್ರೆಸ್ ಸರ್ಕಾರ ರಾಜ್ಯದ ಖಜಾನೆಯನ್ನು ಲೂಟಿ ಮಾಡಿದ್ದು, ಅನುತ್ಪಾದಕ ವಲಯಕ್ಕೆ ಸಂಪೂರ್ಣ ಸಾಲ ಮೀಸಲಾಗಿದೆ. ಆದಾಯ ಹೆಚ್ಚಿಸಲು ಯಾವುದೇ ಉಪಕ್ರಮಗಳನ್ನು ಘೋಷಿಸದೆ ಕೇವಲ ಸಾಲ ಮಾಡಿದ್ದಾರೆ. ವರ್ಗಾವಣೆ ದಂಧೆಯಲ್ಲಿ ತಿಂಗಳು ಕಾಲ ನಿರತವಾಗಿದ್ದು, ತೆರಿಗೆ ಸಂಗ್ರಹಣೆಯಲ್ಲೂ ಅವ್ಯಾಹತ ಭ್ರಷ್ಟಾಚಾರ ನಡೆದಿದೆ. ಪಂಚ ರಾಜ್ಯಗಳ ಚುನಾವಣೆಗೆ ಕರ್ನಾಟಕದಿಂದ ಬೇಕಾಬಿಟ್ಟಿಯಾಗಿ ಕಲೆಕ್ಷನ್ ಮಾಡಿದ್ದು, ಹೆಚ್ಚು ಕಮೀಷನ್ ಕೊಟ್ಟ ಗುತ್ತಿದಾರರಿಗೆ ಮಾತ್ರ ಬೇಕಾಬಿಟ್ಟಿಯಾಗಿ ಬಿಲ್ ಪಾವತಿಸಲಾಗಿದೆ ಎಂದು ಆರೋಪಿಸಿದರು.
ಬಿಜೆಪಿ ಮುಖಂಡರಾದ ನಾಗಾನಂದ, ಶಿವಕುಮಾರ್ ಕೆಂಪಯ್ಯ, ಪ್ರಸನ್ನಕುಮಾರ್, ಶಿವಲಿಂಗಯ್ಯ, ಭೀಮೇಶ್, ಸಾತನೂರು ಯೋಗೇಶ್, ಪದ್ಮಾ, ಜ್ಯೋತಿ ಕೃಷ್ಣೇಗೌಡ, ಶಂಕರ್, ಧರಣಿ, ಶಶಿಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net