ಸುಳ್ಳುರಾಮಯ್ಯ, ಬುರುಡೆರಾಮಯ್ಯ ಎಂದು ಹೆಸರು ಬದಲಿಸಿಕೊಳ್ಳಿ: ಸಿಎಂ ವಿರುದ್ಧ ಜಿಲ್ಲಾ ಬಿಜೆಪಿ ಟೀಕೆ

C.T.Manjunath
Published on

ಮಂಡ್ಯ: ಅಧಿಕಾರಕ್ಕೆ ಬಂದಾಗಿನಿಂದ ಸುಳ್ಳುಗಳನ್ನೇ ಹೇಳಿಕೊಂಡು ಬರುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಹೆಸರನ್ನು ಸುಳ್ಳುರಾಮಯ್ಯ, ಬುರುಡೆ ರಾಮಯ್ಯ ಎಂದಿಟ್ಟುಕೊಂಡರೆ ಚೆಂದ ಎಂದು ಜಿಲ್ಲಾ ಬಿಜೆಪಿ ಟೀಕಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಹಲವು ಸಭೆಗಳಲ್ಲಿ ಮೇಕೆದಾಟು ಯೋಜನೆಯ ಡಿಪಿಆರ್ ಕುರಿತು ಚರ್ಚೆಯನ್ನು ಅಜೆಂಡಾ ವಿಷಯವಾಗಿ ಸೇರಿಸಲಾಗಿತ್ತು. ಆದರೆ ಈ ಕಾರ್ಯಸೂಚಿಯ ಬಗ್ಗೆ ನೆರೆಯ ರಾಜ್ಯಗಳ ನಡುವೆ ಒಮ್ಮತ ಮೂಡದೇ ಇರುವುದರಿಂದ ಚರ್ಚೆ ನಡೆಸಲು ಸಾಧ್ಯವಾಗಿಲ್ಲ. ವಾಸ್ತವ ಸ್ಥಿತಿ ನಿಮಗೆ ಗೊತ್ತಿದ್ದರೂ ಕೇಂದ್ರ ಸರ್ಕಾರದ ಮೇಲೆ ಸುಳ್ಳು ಆರೋಪ ಮಾಡುವುದೇಕೆ ಎಂದು ಪ್ರಶ್ನಿಸಿದ್ದಾರೆ.

ಕಳಸಾ ಮತ್ತು ಬಂಡೂರ ನಾಲೆ ಯೋಜನೆ ಡಿಪಿಆರ್‌ಗಳನ್ನು ಈಗಾಗಲೇ ಕೇಂದ್ರ ಜಲ ಆಯೋಗ (ಸಿಡಬ್ಲುೃಸಿ) ಕೆಲವು ಷರತ್ತುಗಳೊಂದಿಗೆ ಅನುಮೋದಿಸಿದೆ. ಅದನ್ನು ಕರ್ನಾಟಕ ಸರ್ಕಾರಕ್ಕೆ ಈಗಾಗಲೇ ತಿಳಿಸಲಾಗಿದೆ. ಆದರೂ ಈ ಮಾಹಿತಿಯನ್ನು ನೀವು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟು ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ ಎಂದು ಹೇಳಲಾಗುತ್ತಿದೆ. 2017-17ರಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ತ್ವರಿತ ನೀರಾವರಿ ಕಾರ್ಯಕ್ರಮದ ಅಡಿಯಲ್ಲಿ ಆದ್ಯತೆ ನೀಡಲಾದ ಕರ್ನಾಟಕದ 5 ಯೋಜನೆಗಳಲ್ಲಿ ಮೂರು ಪೂರ್ಣಗೊಂಡಿದೆ. ಎರಡು ಕಾಮಗಾರಿ ಚಾಲನೆಯಲ್ಲಿದೆ. ಈ ಯೋಜನೆಗಾಗಿ ಕೇಂದ್ರದ ಪಾಲಿನ 1238.30 ಕೋಟಿ ರೂ ಪೈಕಿ 1190.05 ಕೋಟಿ ರೂ ಈಗಾಗಲೇ ಬಿಡುಗಡೆಯಾಗಿದೆ. ಇದು ರಾಜ್ಯದ ಹಣಕಾಸು ಸಚಿವಾಲಯವನ್ನೂ ನಿಭಾಯಿಸುತ್ತಿರುವ ನಿಮ್ಮ ಗಮನಕ್ಕೆ ಬಂದಿದ್ದರೂ ಬುರುಡೆ ಬಿಡುವುದೇಕೆ ಎಂದು ಟೀಕಿಸಿದ್ದಾರೆ.

ಅಟಲ್ ಭೂ ಜಲ ಯೋಜನೆ ಅಡಿಯಲ್ಲಿ ಕರ್ನಾಟಕಕ್ಕೆ ಕೇಂದ್ರದಿಂದ ಈಗಾಗಲೇ 629.54 ಕೋಟಿ ರೂ ಬಿಡುಗಡೆ ಮಾಡಲಾಗಿದೆ. ಆದರೆ ಈವರೆವಿಗೆ ಕೇವಲ 274.05 ಕೋಟಿ ರೂ ಮಾತ್ರ ಬಳಕೆ ಮಾಡಿಕೊಂಡಿದ್ದೀರಿ. ಆದರೂ ಕೇಂದ್ರ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ ಎಂದು ರೈಲು ಬಿಡುವುದೇಕೆ?. ಮಂಡ್ಯ ಜಿಲ್ಲೆಯಲ್ಲಿ ಸುಮಾರು 4 ಲಕ್ಷ ಎಕರೆ ಬೆಳೆ ಒಣಗಿದೆ. ಕೃಷಿ ಅಧಿಕಾರಿಗಳು ಒಣ ಬೇಸಾಯದ ಬೆಳೆ ಬೆಳೆಯುವಂತೆ ಸೂಚನೆ ನೀಡಿದ್ದರು. ಜಿಲ್ಲಾ ಉಸ್ತುವಾರಿ ಸಚಿವರು ಬೆಳೆಗಳ ರಕ್ಷಣೆಗೆ ನಮ್ಮ ಸರ್ಕಾರ ಬದ್ದ ಎಂದಿದ್ದರು. ಈ ನಡುವೆ ಸದ್ದಿಲ್ಲದೇ ತಮಿಳುನಾಡಿಗೆ ನೀರು ಬಿಟ್ಟು ಕನ್ನಡಿಗರ ಕಿವಿಗೆ ಹೂವಿಟ್ಟು ರೈತರ ಕೈಗೆ ಚಿಪ್ಪನ್ನು ಕೊಟ್ಟು ಇನ್ನು ಕೂಡ ರಾಜ್ಯ ಸುಭಿಕ್ಷೆಯಾಗಿದೆಂದು ಹೇಳುತ್ತಿರುವುದು ನಿಜವೇ?. ಹಿಂದೆ ಸರ್ವ ಪಕ್ಷದ ಸಭೆಯಲ್ಲಿ ತಮಿಳುನದಿಗೆ ನೀರು ಬಿಡುವುದಿಲ್ಲ ಎಂದು ಭರವಸೆ ಕೊಟ್ಟು 24 ಗಂಟೆಯ ಒಳಗೆ ನಿಮ್ಮದೇ ಸರ್ಕಾರದ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಆದೇಶವಿದೆ ನೀರು ಬಿಟ್ಟೆವು ಎಂದರು. ಇದೇನಾ ನಿಮ್ಮ ನುಡಿದಂತೆ ನಡೆವ ಸರ್ಕಾರ. ನಿಮ್ಮ ಮಾತನ್ನು ನಂಬಿ ಬಹುಮತದಿಂದ ಗೆಲ್ಲಿಸಿದ ಜನತೆಗೆ ಪಂಗನಾಮ ಗ್ಯಾರಂಟಿ ನೀಡಿದ್ದಾರೆಂದು ವಾಗ್ದಾಳಿ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net