

ಮಂಡ್ಯ: ಜೋರು ಮಳೆಯಿಂದಾಗಿ ರಾಜ್ಯದ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಇಂತಹ ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕ ಮಾಡಿ ಜನರ ಸಂಕಷ್ಟವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಕಾರ್ಯಕ್ರಮ ಹಮ್ಮಿಕೊಳ್ಳಬೇಕಿತ್ತು. ಆದರೆ, ಕುರ್ಚಿ ಉಳಿಸಿಕೊಳ್ಳಲು ದೆಹಲಿಗೆ ಯಾತ್ರೆ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಟೀಕಿಸಿದರು.
ಸಂಕಷ್ಟದಲ್ಲಿರುವ ಜನರ ಜತೆಗೆ ಬಿಜೆಪಿ ನಿಂತಿದೆ. ಅವರ ಸಂಕಷ್ಟಗಳಿಗೆ ಆಸರೆಯಾಗಬೇಕು ಎಂಬ ಉದ್ದೇಶದಿಂದ 6 ತಂಡಗಳನ್ನಾಗಿ ಮಾಡಿ ರಾಜ್ಯಾದ್ಯಂತ ಪ್ರವಾಹ ಪೀಡಿತ ಪ್ರದೇಶಗಳಗೆ ತೆರಳಿ ನೆರೆಪೀಡಿತರ ನೆರವಿಗೆ ಮುಂದಾಗುತ್ತೇವೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ಪ್ರವಾಹದಿಂದಾಗಿ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ ಪರಿಹಾರ ನೀಡುತ್ತಿದ್ದರು. ಇದರಲ್ಲಿ ಎನ್‌ಡಿಆರ್‌ಎಫ್‌ನ 90 ಸಾವಿರ ರೂ ಅನುದಾನದ ಜತೆಗೆ 4.10 ಲಕ್ಷ ರೂರಾಜ್ಯ ಸರ್ಕಾರದ ಅನುದಾನ ಸೇರಿಸಿ ನೀಡಲಾಗುತ್ತಿತ್ತು. ಆದರೆ ಸಿದ್ದರಾಮಯ್ಯ ಅವರು ಕೇಂದ್ರದ ಎನ್‌ಡಿಆರ್‌ಎಫ್ ನೀಡಿರುವ 90 ಸಾವಿರ ರೂ ನೀಡಿ, ನಮ್ಮಲ್ಲಿ ಅನುದಾನ ಲಭ್ಯವಿಲ್ಲವೆಂದು ಹೇಳುವ ಮೂಲಕ ಬೇಜವಾಬ್ದಾರಿತನವನ್ನು ತೋರಿಸುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು ಮುಡಾದಲ್ಲಿನ ಹಗರಣ ಖಂಡಿಸಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಆದರೆ ಗೃಹ ಸಚಿವ ಡಾ.ಪರಮೇಶ್ವರ್ ಅವರು ಪಾದಯಾತ್ರೆಗೆ ಅನುಮತಿ ನೀಡಲಾಗದು ಎಂದೇಳುವ ಮೂಲಕ ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಹಿಂದೆ ಅವರು ನಮಗೆ ನೀಡಿದ್ದರೇ ಎಂದು ಪ್ರಶ್ನಿಸಿದ್ದಾರೆ. ಹಿಂದೆ ಕೋವಿಡ್ ಸಂದರ್ಭದಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ಬಿಜೆಪಿ ಸರ್ಕಾರ ಪಾದಯಾತ್ರೆಗೆ ಅನುಮತಿ ನೀಡಿರಲಿಲ್ಲ. ಆದರೂ ಅವರು ಪಾದಯಾತ್ರೆ ಮಾಡಿದ್ದರು ಎಂದು ಹೇಳಿದರು.
ಈ ಹಿಂದೆ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರ ಬಳ್ಳಾರಿ ಪಾದಯಾತ್ರೆಗೆ ಬಿಜೆಪಿ ಸರ್ಕಾರ ಅನುಮತಿ ನೀಡಿತ್ತು. ರಾಹುಲ್‌ಗಾಂಧಿ ಭಾರತ್‌ಜೋಡೋ ಯಾತ್ರೆ ಮಾಡಿದಾಗಲೂ ಬಿಜೆಪಿ ಸರ್ಕಾರ ಇರುವ ಕಡೆಗಳಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಎಲ್ಲ ರೀತಿಯ ಸಹಕಾರವನ್ನೂ ನೀಡಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ತನ್ನ ಉಳುಕುಗಳನ್ನು ಮುಚ್ಚಿಕೊಳ್ಳಲು ನಾವು ನಡೆಸುವ ಪಾದಯಾತ್ರೆಯನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ ಎಂದು ದೂರಿದ ಅವರು, ಮೊನ್ನೆ ಮೇಕೆ ಮಾಂಸವೇ ಅಥವಾ ನಾಯಿ ಮಾಂಸವೇ ಎಂಬ ಗೊಂದಲವನ್ನು ರಾಜ್ಯದ ಜನರಿಗೆ ತಿಳಿಸಬೇಕಾದ ಸರ್ಕಾರ ಮಾಡಿದ್ದಾದರೂ ಏನು?. ದೂರುದಾರರನ್ನೇ ಜೈಲಿಗಟ್ಟುವುದು, ಅಮಾಯಕರ ಮೇಲೆ ಸುಳ್ಳು ದೂರು ದಾಖಲಿಸುವಂತಹ ಕ್ರಮಕ್ಕೆ ಮುಂದಾಗಿದೆ ಎಂದು ಕಿಡಿಕಾರಿದರು.
ದಲಿತರ ಹಣ ದುರ್ಬಳಕೆ ಮಾಡಿಕೊಂಡಿರುವುದು, ಮುಡಾ ಹಗರಣವನ್ನು ಚರ್ಚಿಸಲು ನಿಯಮ 60ರಡಿಯಲ್ಲಿ ಅವಕಾಶ ನೀಡದೆ ಕಾಂಗ್ರೆಸ್ ಸರ್ಕಾರ ಉದ್ಧಟತನದಿಂದ ವರ್ತಿಸುತ್ತಿದೆ. ಈ ಹಣವನ್ನು ಸರ್ಕಾರವೇ ಮುಂದೆ ನಿಂದು ಬಂಗಾರ, ಕಾರು ಖರೀದಿ ಹಾಗೂ ಚುನಾವಣೆಯಲ್ಲಿ ಹಂಚಲು ಮದ್ಯ ಖರೀದಿಗೆ ಬಳಕೆ ಮಾಡಿಕೊಂಡಿದೆ. ಈ ಬಗ್ಗೆ ಚರ್ಚೆ ಮಾಡಲೂ ಅವಕಾಶ ನೀಡದೆ ಮೊಂಡಾಟ ಮೆರೆದಿದೆ. ರಾಜ್ಯದ ಜನತೆಗೆ ಈಗಾಗಲೇ ಈ ಸರ್ಕಾರ ಯಾವ ರೀತಿ ವರ್ತಿಸುತ್ತಿದೆ ಎಂಬುದು ಜಗಜ್ಜಾಹೀರಾಗಿದೆ ಎಂದು ಉದಾಹರಣೆ ಸಮೇತ ವಿವರಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ಕೆಆರ್‌ಡಿಎಲ್ ಮಾಜಿ ಅಧ್ಯಕ್ಷ ರುದ್ರೇಶ್, ಮುಖಂಡರಾದ ಕೆ.ಎಸ್.ನಂಜುಂಡೇಗೌಡ, ಸಚ್ಚಿದಾನಂದ ಇಂಡುವಾಳು, ವಿವೇಕ್, ಸಿ.ಟಿ.ಮಂಜುನಾಥ್ ಇದ್ದರು.