

ಮಂಡ್ಯ: ಇಡೀ ರಾಜ್ಯದಲ್ಲಿ ಬರಗಾಲ ಆವರಿಸಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಮತ್ತೊಂದೆಡೆ ಜನರು ನಗರದತ್ತ ಗುಳೇ ಹೋಗುತ್ತಿದ್ದಾರೆ. ಆದರೂ ರಾಜ್ಯಸರ್ಕಾರ ಯಾವುದೇ ಕಾಳಜಿ ವಹಿಸಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಆರೋಪಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಬರ ಪರಿಹಾರ ಕಾರ್ಯನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ರಾಜ್ಯದಲ್ಲಿ 875ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಕಾಂಗ್ರೆಸ್ ಸರ್ಕಾರವೇ ಹೊಣೆ. ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸಿ ಕಾವೇರಿಕೊಳ್ಳದ ರೈತರ ಬದುಕನ್ನು ದುರ್ಬಲಗೊಳಿಸಿದ್ದಲ್ಲದೆ, ಕಾವೇರಿಯನ್ನೇ ನಂಬಿಕೊಂಡಿರುವ ಮೈಸೂರು-ಬೆಂಗಳೂರಿನ ಜನರು ಕುಡಿಯುವ ನೀರಿಗಾಗಿ ಪರದಾಡುವಂತಹ ಸನ್ನಿವೇಶ ತಂದಿಟ್ಟಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಮುಚ್ಚುತ್ತಿದ್ದು, ಟ್ಯಾಂಕರ್ ನೀರಿನ ಮಾಫಿಯಾಗಳಿಗೆ ಅನುಕೂಲ ಮಾಡಿಕೊಟ್ಟಿದೆ. ನೀರಿನ ದರವನ್ನು ದುಪ್ಪಟ್ಟು ಮಾಡಿದ ಪರಿಣಾಮ ಕೈಗಾರಿಕಾ ಪ್ರದೇಶಗಳಿಗೆ ನೀರು ಸರಬರಾಜಾಗದಂತೆ ಮಾಡಿ ಉದ್ಯಮಗಳು ಬಾಗಿಲು ಮುಚ್ಚಿ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಇದು ಆಳುವ ಸರ್ಕಾರದ ನಿರ್ಲಕ್ಷ್ಯತನವನ್ನು ತೋರಿಸುತ್ತಿದೆ. ಇದಲ್ಲದೆ ರಾಜ್ಯಸರ್ಕಾರ ದಲಿತರ ವಿರೋಧಿ ಎನ್ನುವುದಕ್ಕೆ ಸಾಕಷ್ಟು ನಿದರ್ಶನಗಳಿವೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರ ಅಭಿವೃದ್ಧಿಗೆ ಮೀಸಲಿರಿಸಿದ್ದ 11 ಸಾವಿರ ಕೋಟಿ ರೂಗಳನ್ನು ಅನ್ಯ ಉದ್ದೇಶಗಳಿಗೆ ಬಳಸಿಕೊಂಡಿದೆ. ದಲಿತರು, ಶೋಷಿತ ವರ್ಗದವರ ಕುರಿತು ಸಿಎಂ ಸಿದ್ದರಾಮಯ್ಯ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಪರೋಕ್ಷವಾಗಿ ಶೋಷಿತ, ಪೀಡಿತ, ವಂಚಿತ ತಳ ಸಮುದಾಯಗಳ ಮೇಲೆ ನಿರಂತರ ಅನ್ಯಾಯ ಮುಂದುವರಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಕಳೆದ 10 ವರ್ಷದಲ್ಲಿ ಮಾಡಿದ ಅಭಿವೃದ್ಧಿಯಲ್ಲಿ ಒಂದು ಭಾಗವನ್ನೂ ಕೂಡ ಕಾಂಗ್ರೆಸ್ ಸರ್ಕಾರ ತನ್ನ 70 ವರ್ಷಗಳ ಆಡಳಿತದಲ್ಲಿ ಮಾಡಲಾಗಿಲ್ಲ. ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ ಸರ್ಕಾರ 6 ಸಾವಿರ ರೂ ನೀಡುತ್ತಿದೆ. ನಮ್ಮ ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರ ಆರಂಭಿಸಿದ್ದ ಹೆಚ್ಚುವರಿ 4 ಸಾವಿರ ರೂ ನೀಡುವ ವ್ಯವಸ್ಥೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ರದ್ದು ಮಾಡಿ ವಂಚಿಸಿದೆ ಎಂದು ಟೀಕಿಸಿದರು.
ಹಾಲಿನ ದರ, ಅಬಕಾರಿ ಸುಂಕ, ಆಸ್ತಿ ನೋಂದಣಿ ಶುಲ್ಕ, ವಾಹನ ನೋಂದಣಿ ಶುಲ್ಕ ಸೇರಿದಂತೆ ಜನರಿಗೆ ಅಗತ್ಯವಿರುವ ಎಲ್ಲ ಸೇವೆಗಳಿಗೂ ದುಪ್ಪಟ್ಟು ದರ ಹೆಚ್ಚಿಸಿರುವ ಸರ್ಕಾರದಿಂದ ಜನಸಾಮಾನ್ಯರು ಬವಣೆಪಡುತ್ತಿದ್ದಾರೆ. ಹೀಗಿದ್ದರೂ ಕಳೆದ ವಿಧಾನಸಭಾ ಬಜೆಟ್ ಅಧಿವೇಶನದಲ್ಲಿ ಯಾವುದೇ ಜನಪರ ಚರ್ಚೆಗಳನ್ನು ಮಾಡದೆ ಸಮಯ ವ್ಯರ್ಥ ಮಾಡಿ ಜನತೆಯ ತೆರಿಗೆ ಹಣ ಪೋಲು ಮಾಡಿದ್ದೇ ಈ ಸರ್ಕಾರದ ಸಾಧನೆ ಎಂದು ಕಿಡಿಕಾರಿದರು.
ಎಸ್ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಪರಮಾನಂದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನಂದ, ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಸಾಮಾಜಿಕ ಜಾಲತಾಣದ ಮುಖ್ಯಸ್ಥ ಬಾಲು, ಮಾಧ್ಯಮ ಸಂಚಾಲಕ ನಾಗಾನಂದ ಉಪಸ್ಥಿತರಿದ್ದರು.