ಬಿಜೆಪಿಯಿಂದ ಅನವಶ್ಯಕ ಗೊಂದಲ ಸೃಷ್ಟಿ

8 KST 01
ಕುಷ್ಟಗಿಯಲ್ಲಿ ಭಾನುವಾರ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮವನ್ನು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸಿದರು. ಸಂಸದ ರಾಜಶೇಖರ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ, ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಪುರ ಇತರರು ಇದ್ದರು.
Published on

ಕುಷ್ಟಗಿ: ಬಿಜೆಪಿಯವರು ಅನವಶ್ಯಕ ಗೊಂದಲ ಸೃಷ್ಟಿಸಿ ಸುಸೂತ್ರ ಆಡಳಿತಕ್ಕೆ ಅಡ್ಡಿಪಡಿಸುತ್ತಿದ್ದಾರೆಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಸಂಸದ ರಾಜಶೇಖರ ಹಿಟ್ನಾಳರನ್ನು ಅಭಿನಂದಿಸಲು ಭಾನುವಾರ ಪಟ್ಟಣದ ಅಮರೇಗೌಡ ಪಾಟೀಲ್ ಬಯ್ಯಪುರ ನಿವಾಸದ ಆವರಣದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಉತ್ತಮ ಆಡಳಿತ ನಡೆಸುತ್ತಿದೆ. ಮುಡಾ, ವಾಲ್ಮೀಕಿ ಹಗರಣ, ವಕ್ಫ್ ಇನ್ನಿತರ ವಿಚಾರಗಳನ್ನಿಟ್ಟುಕೊಂಡು ಗೊಂದಲ ಸೃಷ್ಟಿಸುತ್ತಿರುವ ಬಿಜೆಪಿಗೆ ಉಪಚುನಾವಣೆಯ ಫಲಿತಾಂಶ ಪಾಠ ಕಲಿಸಿದೆ. ರಾಜ್ಯದ ಶೇ.70 ಮುಸ್ಲಿಮರಿಗೆ ವಕ್ಫ್ ಮಂಡಳಿಯಿಂದ ನೋಟಿಸ್ ಜಾರಿಯಾಗಿದೆ. ಶಿಗ್ಗಾವಿಯಲ್ಲಿ 650 ರೈತರಿಗೆ ನೋಟಿಸ್ ಜಾರಿಯಾದರೆ ಆ ಪೈಕಿ 500 ರೈತರು ಮುಸ್ಲಿಮರಿದ್ದಾರೆ. ವಕ್ಫ್ ಹೆಸರಿನಲ್ಲಿ ಜನರ ದಾರಿ ತಪ್ಪಿಸುವ ಹಾಗೂ ಸರ್ಕಾರವನ್ನು ರೈತ ವಿರೋಧಿಯನ್ನಾಗಿ ಬಿಂಬಿಸುವ ವ್ಯರ್ಥ ಪ್ರಯತ್ನ ಬಿಜೆಪಿಯಿಂದ ನಡೆಯುತ್ತಿದೆ. ಜಾತಿ ವ್ಯವಸ್ಥೆಯ ಕಾರಣದಿಂದ ಅಮರೇಗೌಡ ಪಾಟೀಲ್ ಬಯ್ಯಪುರ ಕಳೆದ ಚುನಾವಣೆಯಲ್ಲಿ ಸೋಲುಂಡರು. ಅದೆನ್ನಲ್ಲ ಮೀರಿ ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕಿದೆ. ಅದಕ್ಕಾಗಿ ಈಗಿನಿಂದಲೇ ತಯಾರಿ ನಡೆಸಬೇಕಿದೆ ಎಂದರು.

ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಬಿಜೆಪಿ ಅಭ್ಯರ್ಥಿ ಕುಷ್ಟಗಿ ತಾಲೂಕಿನವರಾಗಿದ್ದರೂ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವದಿಸಿದ್ದಾರೆ. ಮತದಾರರ ವಿಶ್ವಾಸಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸುವುದಾಗಿ ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಹಿಂದು-ಮುಸ್ಲಿಂ ಜಪ ಮಾಡುತ್ತ ಬಂದಿರುವ ಬಿಜೆಪಿಗೆ ಸದ್ಯ ವಕ್ಫ್ ಜಪ ಶುರುವಾಗಿದೆ. ದೇಶದಲ್ಲಿ ಓಡಿ ಹೋದ ಹಾಗೂ ಓಡಿ ಹೋಗಲಿರುವ ಮೋದಿ ಇದ್ದಾರೆ. ರಾಜ್ಯದಲ್ಲಿ ಯತ್ನಾಳ ಹಾಗೂ ವಿಜಯೇಂದ್ರ ಎಂಬ ಎರಡು ನಾಟಕ ಕಂಪನಿಗಳಿವೆ ಎಂದು ಲೇವಡಿ ಮಾಡಿದರು.

ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಕಂಡ 2ನೇ ದೇವರಾಜ ಅರಸು ಆಗಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ಎಂಬ ಜೋಡೆತ್ತುಗಳು ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿವೆ ಎಂದು ಬಣ್ಣಿಸಿದರು.

ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಪುರ ಮಾತನಾಡಿ, ರಾಜಕೀಯದಲ್ಲಿ ಗೆಲವು ಸೋಲು ಸಾಮಾನ್ಯ. ಅಧಿಕಾರ ಇರದಿದ್ದರೂ ನಿಮ್ಮ ಸೇವೆ ಮಾಡುತ್ತೇನೆ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ ನಾಲತ್ವಾಡ, ಕಲ್ಲಪ್ಪ ತಳವಾರ, ಮಾಜಿ ಶಾಸಕ ಹಸನಸಾಬ ದೋಟಿಹಾಳ, ಪಕ್ಷದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಾಲತಿ ನಾಯಕ್ ಇತರರು ಇದ್ದರು. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಸಂಸದ ರಾಜಶೇಖರ ಹಿಟ್ನಾಳ ಹಾಗೂ ಸಚಿವ ಶಿವರಾಜ ತಂಗಡಗಿಗೆ ಬೆಳ್ಳಿ ಗದೆ ನೀಡಿ ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net