ಮಹಾನಗರ ಪಾಲಿಕೆ ಸದಸ್ಯರ ಪ್ರಶಿಕ್ಷಣ ವರ್ಗಕ್ಕೆ ಚಾಲನೆ, ಕಾರ್ಯಪದ್ಧತಿಯಿಂದ ಬೆಳೆದ ಬಿಜೆಪಿ ಪಕ್ಷ

IMG_20231103_154349_85-2.jpg
Published on

ಹುಬ್ಬಳ್ಳಿ: ಬಿಜೆಪಿ ಮಹಾನಗರ ಪಾಲಿಕೆ ಸದಸ್ಯರ ರಾಜ್ಯ ಮಟ್ಟದ ಎರಡು ದಿನಗಳ ಪ್ರಶಿಕ್ಷಣ ವರ್ಗವು ಇಲ್ಲಿಯ ಭೈರಿದೇವರಕೊಪ್ಪದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಭಗವದ್ಗೀತಾ ಜ್ಞಾನಲೋಕ ಸಭಾಂಗಣದಲ್ಲಿ ಶುಕ್ರವಾರ ಆರಂಭವಾಯಿತು.

ರಾಜ್ಯದ ಏಳು ಮಹಾನಗರ ಪಾಲಿಕೆಗಳಿಂದ ಆಗಮಿಸಿರುವ ಬಿಜೆಪಿ ಸದಸ್ಯರು ಪ್ರಶಿಕ್ಷಣ ವರ್ಗದಲ್ಲಿ ಭಾಗಿಯಾಗಿದ್ದು, ಎರಡು ದಿನ ಅಭ್ಯಾಸ ವರ್ಗದಲ್ಲಿ ಕುಳಿತು ವಿವಿಧ ವಿಷಯಗಳನ್ನು ಚರ್ಚೆ ಮಾಡಲಿದ್ದಾರೆ.

ಪಕ್ಷದ ಹಿರಿಯ ಮುಖಂಡರು, ಮಹಾನಗರ ಪಾಲಿಕೆಯ ಸದಸ್ಯರಾಗಿ ಸೇವೆ ಸಲ್ಲಿಸಿದವರು ಇಲ್ಲಿ ಅಭ್ಯಾಸ ವರ್ಗ ನಡೆಸಲಿದ್ದು, ಮಾಹಿತಿ ವಿನಿಮಯ ಮಾಡಿಕೊಳ್ಳುವರು.

ಎರಡು ದಿನಗಳ ಶಿಬಿರವನ್ನು ಉದ್ಘಾಟಿಸಿದ ಬಿಜೆಪಿ ರಾಜ್ಯಾಧ್ಯಕ್ಷರು, ಪಕ್ಷ ಇಷ್ಟೊಂದು ದೊಡ್ಡದಾಗಿ ಬೆಳೆಯಲು ಅದರ ಕಾರ್ಯಪದ್ಧತಿ, ಶಿಸ್ತು, ಅಭ್ಯಾಸ ವರ್ಗಗಳು ಎಲ್ಲವೂ ಕಾರಣ. ಅಧಿಕಾರ ಸಿಕ್ಕಾಗಲೆಲ್ಲ ಪರಿವರ್ತನೆ ತರುವ ಕೆಲಸವನ್ನು ಪಕ್ಷ ಮಾಡುತ್ತದೆ ಎಂಬುದನ್ನು ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ, ಬಿ.ಎಸ್. ಯಡಿಯೂರಪ್ಪ, ಬಿ.ಎಸ್. ಬೊಮ್ಮಾಯಿ ಅವರೆಲ್ಲ ತೋರಿಸಿ ಕೊಟ್ಟಿದ್ದಾರೆ ಎಂದರು.

ಪಕ್ಷದ ಮುಖಂಡ ಶ್ರೀಕಾಂತ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿ, ಬಜೆಪಿ ಪಕ್ಷದಲ್ಲಿ ಮಾತ್ರ ಇಂತಹ ಅಭ್ಯಾಸ ವರ್ಗಗಳು ನಡೆಯುತ್ತವೆ. ಹಾಗಾಗಿಯೇ ವಿಭಿನ್ನ ಪಕ್ಷ ಎಂದು ಗುರುತಿಸಿಕೊಂಡಿದೆ. ಜನಪ್ರತಿನಿಧಿಗಳಾದವರಿಗೆ ಸಂಸ್ಕಾರ ನೀಡುವುದು, ಜನರ ಸೇವೆ ಹೇಗೆ ಮಾಡಬೇಕೆಂಬ ಮಾಹಿತಿ ವಿನಿಮಯ ಮಾಡಿಕೊಳ್ಳುವ ಕಾರ್ಯ ಇಂತಹ ಶಿಬಿರದಲ್ಲಿ ನಡೆಯುತ್ತದೆ ಎಂದರು.

ಜ್ಞಾನಲೋಕ ಆವರಣದಲ್ಲಿ ಜನಸಂದಿಂದ ನಡೆದು ಬಂದ ದಾರಿ ಹಾಗೂ ಬಿಜೆಪಿ ನಾಯಕರ ಭಾವಚಿತ್ರ ಮುಂತಾದವುಗಳ ಪ್ರದರ್ಶನ ಏರ್ಪಡಿಸಲಾಗಿದ್ದು, ಹಳೆಯ ನೆನಪುಗಳನ್ನು ಮೆಲಕು ಹಾಕುವಂತೆ ಮಾಡಿತು.

ಮಾಜಿ ಸಚಿವ ಬಿ.ಸಿ. ನಾಗೇಶ, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಸಂಜಯ ಕಪಟಕರ, ಗ್ರಾಮೀಣ ಅಧ್ಯಕ್ಷ ಬಸವರಾಜ ಕುಂದಗೋಳಮಠ, ನಂದೀಶ ರೆಡ್ಡಿ, ಕೆ.ಎಸ್. ನವೀನಕುಮಾರ, ಲಿಂಗರಾಜ ಪಾಟೀಲ, ಇತರು ಇದ್ದರು.

ಅರ್ಚನಾ ಕೆ. ಪ್ರಾರ್ಥನೆ ಹಾಡಿದರು. ಮೇಯರ್ ವೀಣಾ ಬರದ್ವಾಡ ಸ್ವಾಗತಿಸಿದರು. ದತ್ತಮೂರ್ತಿ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net