

ವಿಜಯಪುರ: ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಪಕ್ಷದಿಂದ ಉಚ್ಚಾಟನೆಗೊಳಿಸಿರುವ ಬಿಜೆಪಿ ಕೇಂದ್ರ ಶಿಸ್ತು ಸಮಿತಿಯ ನಿರ್ಣಯವನ್ನು ಜಿಲ್ಲಾ ಕೋರ್ ಕಮೀಟಿ ಸರ್ವಾನುಮತದಿಂದ ಬೆಂಬಲಿಸಿ ಅಂಗಿಕರಿಸಿದೆ.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ನಡೆದ ಕೋರ್ ಕಮೀಟಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಅವರು, ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ನೇತೃತ್ವದಲ್ಲಿ ಕೋರ್ ಕಮೀಟಿ ಸಭೆ ನಡೆಸಲಾಗಿದ್ದು, ಸಭೆಯಲ್ಲಿ ಯತ್ನಾಳರ ಉಚ್ಚಾಟನೆಯ ನಿರ್ಣಯವನ್ನು ಅಂಗಿಕರಿಸಲಾಗಿದೆ. ಆ ಮೂಲಕ ಇನ್ಮುಂದೆ ಶಾಸಕ ಯತ್ನಾಳ ಪಕ್ಷದ ಯಾವುದೇ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತಿಲ್ಲ. ಅಲ್ಲದೇ, ಅವರನ್ನು ಬೆಂಬಲಿಸಿ ಪಕ್ಷವನ್ನು ಟೀಕಿಸುವ ಪಕ್ಷದ ಯಾವುದೇ ಪದಾಧಿಕಾರಿಗಳಿದ್ದರೂ ಅವರ ಮೇಲೆ ನಿಗಾ ಇರಿಸಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು.
ಯತ್ನಾಳರ ಉಚ್ಚಾಟನೆಯನ್ನು ಜಾತಿಗೆ ಅನ್ವಯಿಸುವುದು, ಎಳೆದು ತರೋದು ಸರಿಯಲ್ಲ. ರಾಜಕೀಯವನ್ನು ರಾಜಕೀಯವಾಗಿಯೇ ನೋಡಬೇಕು. ರಾಜಕೀಯಕ್ಕೆ ಮಾತ್ರ ಈ ವಿಷಯ ಸೀಮಿತವಾಗಿರಲಿ. ಜಾತಿ ಎಳೆದು ತರುವ ಕೆಲಸ ಮಾಡಬಾರದು. ಬಿಜೆಪಿ ಜಾತಿ ಆಧಾರಿತವಾಗಿ ರಾಜಕಾರಣ ಮಾಡಿಲ್ಲ. ಬಿಜೆಪಿ ರಾಷ್ಟ್ರೀಯವಾದಿ ಪಕ್ಷ. ಹಿಂದುತ್ವವಾದಿ ಪಕ್ಷ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ಬಸನಗೌಡ ಪಾಟೀಲ ಯತ್ನಾಳ ಇರಲಿ ಯಾರೇ ಆಗಲಿ ಪಕ್ಷದ ವಿಚಾರದಲ್ಲಿ ಹೆದರುವ ಮಾತೇ ಇಲ್ಲ. ಪಕ್ಷದ ತತ್ವ ಸಿದ್ದಾಂತಕ್ಕೆ ನಾನು ಬದ್ಧ. ನನಗೆ ಪಕ್ಷ ಮುಖ್ಯವೇ ಹೊರತು ವ್ಯಕ್ತಿಯಲ್ಲ. ಮುಂದಿನ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಸೇರಿ ಎಲ್ಲ ಚುನಾವಣೆಯಲ್ಲಿ ಪಕ್ಷ ಗೆಲ್ಲಿಸುವುದೇ ನನ್ನ ಸಂಕಲ್ಪ ಎಂದರು.
ಮುಂದುವರಿದು ಯತ್ನಾಳರ ವಿಚಾರದಲ್ಲಿ ಈವರೆಗೆ ಕೇವಲ ಎರಡು ರಾಜೀನಾಮೆ ಮಾತ್ರ ಬಂದಿವೆ. ಬಿಜೆಪಿ 9 ಮಂಡಳಗಳಿದ್ದು, ನಗರ ಮಂಡಳದಲ್ಲಿ ಮಾತ್ರ ಶಂಕರ ಹೂಗಾರ ಹಾಗೂ ಕಾರ್ಯದರ್ಶಿಯಾಗಿದ್ದ ಸಿದ್ದು ರಾಜೀನಾಮೆ ಸಲ್ಲಿಸಿದ್ದಾರೆ, ಅದನ್ನು ಪರಿಶೀಲನೆ ನಡೆಸಲಾಗುವುದು. ಇನ್ನೂ ಕೆಲವರು ಸರಿಯಾದ ಪ್ರಕ್ರಿಯೆ ಆಧರಿಸಿ ರಾಜಿನಾಮೆ ಸಲ್ಲಿಸಿಲ್ಲ, ಹೀಗಾಗಿ ಸದ್ಯಕ್ಕೆ ರಾಜೀನಾಮೆ ಅಂಗಿಕರಿಸಿಲ್ಲ ಎಂದರು.
ಲಕ್ಷಾಂತರ ಸಂಖ್ಯೆಯಲ್ಲಿ ಬಿಜೆಪಿ ಸದಸ್ಯರು ಪಕ್ಷದ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದಾರೆ ಎನ್ನುವುದು ಸತ್ಯಕ್ಕೆ ದೂರವಾದ ಸಂಗತಿ, ಇದು ಇಂಪಾಸಿಬಲ್ ಎಂದು ಅರುಣ ಶಹಾಪುರ ತಿಳಿಸಿದರು.
ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಮಾತನಾಡಿ, ಕಾರ್ಯಕರ್ತರ ಗೊಂದಲ ನಿವಾರಿಸಿ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸನ್ನದ್ಧಗೊಳಿಸುವ ನಿಟ್ಟಿನಲ್ಲಿ ಕಾರ್ಯಕರ್ತರ ಬೃಹತ್ ಸಮಾವೇಶ ಸಂಘಟಿಸುವ ನಿರ್ಣಯ ಸ್ವೀಕರಿಸಲಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷರ ಅನುಮತಿ ಕೋರಲಾಗುವುದು ಎಂದು ತಿಳಿಸಿದರು.
ಬಿಜೆಪಿಗೆ ರಾಜ್ಯದಲ್ಲಿ ಯಡಿಯೂರಪ್ಪ ಅವರೇ ಪಿತಾಮಹ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಭಾವಚಿತ್ರಕ್ಕೆ ಅಗೌರವ ತೋರುವುದು ಸರಿಯಲ್ಲ, ನಿನ್ನೆ ನಡೆದ ಪ್ರತಿಭಟನೆಯಲ್ಲಿ ಅವಮಾನಕಾರ ರೀತಿಯಲ್ಲಿ ವರ್ತನೆ ಮಾಡಿರುವುದು ಸರಿಯಲ್ಲ, ಅದು ನಮ್ಮ ಸಂಸ್ಕೃತಿಯಲ್ಲ, ಈ ಎಲ್ಲ ವಿದ್ಯಮಾನವನ್ನು ಬಿಜೆಪಿ ವರಿಷ್ಠರು ಗಮನಿಸುತ್ತಿದ್ದಾರೆ, ಒಂದು ವೇಳೆ ಅವಮಾನ ಮಾಡಿದವರು ನಮ್ಮ ಪಕ್ಷದ ಸದಸ್ಯರೇ ಆಗಿದ್ದರೆ ಅವರ ಮೇಲೆ ಪಕ್ಷ ಕ್ರಮ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.
ಮಾಜಿ ಸಚಿವರಾದ ಎಸ್.ಕೆ. ಬೆಳ್ಳುಬ್ಬಿ, ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಾಜಿ ಶಾಸಕ ರಮೇಶ ಭೂಸನೂರ, ಬಿಜೆಪಿ ಹಿರಿಯ ಮುಖಂಡರಾದ ವಿಜುಗೌಡ ಪಾಟೀಲ, ಉಮೇಶ ಕಾರಜೋಳ, ಡಾ.ಸುರೇಶ ಬಿರಾದಾರ, ಗೋಪಾಲ ಘಟಕಾಂಬಳೆ, ರವೀಂದ್ರ ಲೋಣಿ, ಪ್ರಕಾಶ ಮಿರ್ಜಿ, ವಿಜಯ ಜೋಶಿ ಮತ್ತಿತರರಿದ್ದರು.