ಗ್ಯಾರಂಟಿ ವಿರುದ್ಧ ಬಿಜೆಪಿ ಪಿತೂರಿ

zameer in cong office
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಮುಡಾ ನಿವೇಶನ ಹಂಚಿಕೆ, ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮದ ಹೆಸರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸುವುದಷ್ಟೇ ಬಿಜೆಪಿ ಉದ್ದೇಶವಲ್ಲ. ಆ ಮೂಲಕ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲು ಪಿತೂರಿ ನಡೆಸಿದೆ ಎಂದು ವಸತಿ, ವಕ್ಪ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ಆರೋಪಿಸಿದರು.

ಇಲ್ಲಿಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸಂಜೆ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕರ್ನಾಟಕದಲ್ಲಿ 9 ಸ್ಥಾನಗಳನ್ನು ಮಾತ್ರ ಗೆದ್ದಿರಬಹುದು. ಆದರೆ, ಗ್ಯಾರಂಟಿ ಯೋಜನೆಗಳ ಪರಿಣಾಮವಾಗಿ ನಮ್ಮ ಮತ ಗಳಿಕೆ ಪ್ರಮಾಣ ಶೇ. 11ರಷ್ಟು ಏರಿಕೆಯಾಗಿರುವುದು ಬಿಜೆಪಿಗೆ ಸಹಿಸಲು ಆಗುತ್ತಿಲ್ಲ. ಅದಕ್ಕಾಗಿ ಅವರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್​ಗೆ ರಾಜ್ಯಪಾಲರನ್ನು ಬಳಕೆ ಮಾಡಿಕೊಂಡಿದ್ದಾರೆ ಎಂದರು.

ಸಿಎಂ ವಿರುದ್ಧ ಪ್ರಾಸಿಕ್ಯೂಷನ್​ಗೆ ನಾನು ಅನುಮತಿ ಕೊಟ್ಟಿಲ್ಲ ಎಂದು ತಮ್ಮನ್ನು ಭೇಟಿಯಾದ ಕಾಂಗ್ರೆಸ್ ಮುಖಂಡರ ಎದುರು ರಾಜ್ಯಪಾಲರು ಹೇಳಿದ್ದಾರೆ. ಹಾಗಾದರೆ ಅನುಮತಿ ಕೊಟ್ಟಿದ್ದು ಯಾರು ಎಂದು ಅವರೇ ರಾಜ್ಯದ ಜನತೆಗೆ ತಿಳಿಸಬೇಕು. ನ್ಯಾಯಾಲಯದಿಂದ ನಮಗೆ ನ್ಯಾಯ ಸಿಗುತ್ತದೆಂಬ ನಂಬಿಕೆ ಇದೆ ಎಂದು ಹೇಳಿದರು.

ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಜಬ್ಬಾರ್ ಅಹ್ಮದ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಲ್ತಾಫ್ ಕಿತ್ತೂರ, ಪಾಲಿಕೆ ವಿಪಕ್ಷ ನಾಯಕ ರಾಜಶೇಖರ ಕಮತಿ, ಹುಬ್ಬಳ್ಳಿ ಅಂಜುಮನ್ ಎ ಇಸ್ಲಾಂ ಸಂಸ್ಥೆ ಅಧ್ಯಕ್ಷ ಎ.ಎಂ. ಹಿಂಡಸಗೇರಿ, ಅಲ್ತಾಫ್ ಹಳ್ಳೂರ, ಅನಿಲಕುಮಾರ ಪಾಟೀಲ, ಮಹೇಂದ್ರ ಸಿಂಘಿ, ಪಾಲಿಕೆ ಸದಸ್ಯರಾದ ಇಕ್ಬಾಲ ನವಲೂರ, ಚೇತನ ಹಿರೇಕೆರೂರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net