

ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಸರಪಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಉದ್ಘಾಟನೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಬರುವ ಮುನ್ನಾ ದಿನವೇ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಜಟಾಪಟಿ ಮಾಡಿಕೊಂಡಿದ್ದಾರೆ.
ಈ ಯೋಜನೆಯನ್ನು ಜಾರಿಗೊಳಿಸಿದ್ದು ತಾವು ಎನ್ನುವ ಹಿನ್ನೆಲೆಯಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಅವರು ತಮ್ಮ ಕೆಲವು ಸಹವರ್ತಿಗಳೊಂದಿಗೆ ಸರಪಾಡಿ ಯೋಜನೆ ನೋಡುವುದಕ್ಕೆಂದು ಆಗಮಿಸಿದರು. ಇದನ್ನು ಅರಿತ ಬಿಜೆಪಿ ಕಾರ್ಯಕರ್ತರು ಅಡ್ಡಗಟ್ಟಿ ಭಾನುವಾರ ಯೋಜನೆ ಉದ್ಘಾಟನೆಯಾಗುತ್ತಿರುವಾಗ ಮಾಜಿ ಸಚಿವರು ಹಿಂದಿನ ದಿನವೇ ಅಲ್ಲಿಗೆ ತೆರಳುವುದು ಸರಿಯಲ್ಲ, ಹೋಗುವುದಕ್ಕೆ ಬಿಡಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಈ ವೇಳೆ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಪರ ವಿರೋಧ ಘೋಷಣೆ ಮೇರೆ ಮೀರಿತು. ಒಂದು ಹಂತದಲ್ಲಿ ಕಾರ್ಯಕರ್ತರಲ್ಲಿ ಕೆಲವರು ಕೈ ಕೈ ಮಿಲಾಯಿಸಿಕೊಂಡ ಸನ್ನಿವೇಶವೂ ಸೃಷ್ಟಿಯಾಯಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ವಿಕೋಪಕ್ಕೆ ತೆರಳದಂತೆ ನೋಡಿಕೊಂಡರು. ಎರಡೂ ಪಕ್ಷಗಳ ಕಾರ್ಯಕರ್ತರನ್ನೂ ಕುಡಿಯುವ ನೀರಿನ ಯೋಜನೆಯ ಆವರಣದೊಳಗೆ ಪ್ರವೇಶಿಸದಂತೆ ತಡೆದರು.
ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರ ನೇತೃತ್ವದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಪದ್ಮಶೇಖರ ಜೈನ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಮತ್ತಿತರರು ಸರಪಾಡಿಗೆ ತೆರಳಿದ್ದಾರು. ಹಿಂದೆಯೂ ಸಂಗಬೆಟ್ಟು, ಮಾಣಿ ಬಹುಗ್ರಾಮ ಕುಡಿಯುವ ನೀರಿನ ಘಟಕಗಳ ಉದ್ಘಾಟನೆಗೆ ಕೆಲ ದಿನ ಹಿಂದೆ ಇದೇ ರೀತಿಯಲ್ಲಿ ಮಾಜಿ ಸಚಿವ ರೈ ಅವರು ಘಟಕಕ್ಕೆ ನೀಡಿ ಹೇಳಿಕೆ ನೀಡುತ್ತಿದ್ದರು, ತಾವು ಮಂಜೂರು ಮಾಡಿದ ಘಟಕಗಳೆನ್ನುವ ಹಿನ್ನಲೆಯಲ್ಲಿ ಅವರು ಭೇಟಿ ನೀಡುತ್ತಿದ್ದರು. ಇದು ಬಿಜೆಪಿ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿತ್ತು.