

ರಾಯಚೂರು: ಗ್ಯಾರಂಟಿ ಯೋಜನೆಗಳನ್ನು ಜನರಿಂದ ಮತ ಪಡೆಯಲು ನೀಡಿಲ್ಲ ಬಡ ಜನರ ನೆರವಿಗಾಗಿ ಹಾಗೂ ರಾಜ್ಯದ ಜನರ ಬದುಕನ್ನು ಸ್ಥಿರಗೊಳಿಸಲು ನೀಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ್ ಹೇಳಿದರು.
ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಬಿಜೆಪಿ ಮೈತ್ರಿ ಸರ್ಕಾರ ಪಾದಯಾತ್ರೆ ಮಾಡುವುದರಿಂದ ಯಾವುದೇ ಉಪಯೋಗವಿಲ್ಲ. ಮುಡಾ ಹಗರಣವನ್ನಿಟ್ಟುಕೊಂಡು ಮೈಸೂರು ಚಲೋ ಪಾದಯಾತ್ರೆ ಮಾಡಿದ ಬಿಜೆಪಿ ಇದೀಗ ಕಕ ಭಾಗದಲ್ಲಿ ಪಾದಯಾತ್ರೆ ಮಾಡುವ ಮೊದಲು ತಮ್ಮ ಪಕ್ಷ ಆಡಳಿತವಿದ್ದಾಗ ಆದ ಹಗರಣಗಳ ಬಗ್ಗೆ ನೆನಪಿಸಿಕೊಳ್ಳಬೇಕು ಎಂದರು.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಾದ ಹಗರಣದ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಮತ್ತು ಕ್ರಮಕ್ಕೆ ಮುಂದಾಗಿದೆ. ಈಗಾಗಲೇ ಎಸ್‌ಐಟಿಯಿಂದ ಚಾರ್ಜ್ ಶೀಟ್ ಸಲ್ಲಿಸಲಾಗಿದ್ದು, ಇಡಿ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.
ಜೆಡಿಎಸ್ ಪಕ್ಷ ಬಿಜೆಪಿ ಪಕ್ಷದೊಂದಿಗೆ ಕೈಜೋಡಿಸಿದ್ದು, ಜೆಡಿಎಸ್ ಪಕ್ಷದ ಎಂಎಲ್‌ಎಗಳನ್ನು ಖರೀದಿಸಿ ಜೆಡಿಎಸ್ ಕುರ್ಚಿ ಬೀಳಿಸಿದ್ದು ಇದೇ ಬಿಜೆಪಿ ಸರ್ಕಾರ ಇದೀಗ ಜೆಡಿಎಸ್ ಬಿಜೆಪಿ ಸರ್ಕಾರದೊಂದಿಗೆ ಸೇರಿರುವುದು ನೋಡಿದರೆ ಜೆಡಿಎಸ್ ಅವಕಾಶವಾದಿ ರಾಜಕಾರಣ ಮಾಡುತ್ತಿದೆ ಎಂದು ಗೊತ್ತಾಗುತ್ತದೆ ಎಂದರು.