ಉಪಸಮರ| ರಾಜರಾಜೇಶ್ವರಿ ನಗರದಲ್ಲಿ ರಾರಾಜಿಸುವವರ್ಯಾರು?

Collage
Published on
ರಾಜರಾಜೇಶ್ವರಿ ನಗರ ಉಪಸಮರ ದಿನೇದಿನೆ ಕದನ ಕುತೂಹಲ ಹೆಚ್ಚಿಸುತ್ತಿದೆ. ಅಖಾಡದಲ್ಲಿರುವ ಮೂರೂ ಪಕ್ಷಗಳ ಹುರಿಯಾಳುಗಳು ಈಗಾಗಲೇ ಕ್ಷೇತ್ರದಾದ್ಯಂತ ಸುತ್ತಾಟ ಆರಂಭಿಸಿದ್ದಾರೆ. ಪ್ರತಿದಿನವೂ ಕಾರ್ಯಕರ್ತರು, ವಿವಿಧ ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸುತ್ತಿದ್ದಾರೆ. ಪ್ರಚಾರದ ಒತ್ತಡದ ನಡುವೆಯೂ ಅಭ್ಯರ್ಥಿಗಳು ವಿಜಯವಾಣಿ ಜತೆಗಿನ ಸಂದರ್ಶನದಲ್ಲಿ ತಮ್ಮ ಅನಿಸಿಕೆ, ಅಭಿಪ್ರಾಯ ಹಾಗೂ ಕನಸುಗಳನ್ನು ಬಿಚ್ಚಿಟ್ಟಿದ್ದಾರೆ.

1. ಉಪ ಚುನಾವಣೆ ನಿಮಗೆ ಎಷ್ಟು ಮುಖ್ಯ? 2. ಯಾವ ವಿಷಯ ಇಟ್ಟುಕೊಂಡು ಮತ ಕೇಳುತ್ತೀರಿ? 3. ನಿಮಗೆ ಏಕೆ ಮತ ಹಾಕಬೇಕು? 4. ಚುನಾವಣೆಯಲ್ಲಿ ನಿಮ್ಮ ನೇರ ಎದುರಾಳಿ ಯಾರು? 5. ನೀವು ಪ್ರತಿನಿಧಿಸುವ ಪಕ್ಷದ ಬಗ್ಗೆ ಮತದಾರರ ಒಲವು ಹೇಗಿದೆ? 6. ಕ್ಷೇತ್ರದ ಅಭಿವೃದ್ಧಿಗೆ ನೀವು ಹಾಕಿಕೊಂಡಿರುವ ಯೋಜನೆಗಳೇನು? 7. ಕ್ಷೇತ್ರದಲ್ಲಿ ಹಣ ಹಾಗೂ ಹೆಂಡದ ಹೊಳೆ ಹರಿಯಲಿದೆ ಎಂಬ ಆರೋಪವಿದೆ?

ಶೀಘ್ರವೇ ಮಹಿಳಾ ಪ್ರಣಾಳಿಕೆ ಬಿಡುಗಡೆ

| ಕುಸುಮಾ ಕಾಂಗ್ರೆಸ್ ಅಭ್ಯರ್ಥಿ

1. ಸ್ಥಿರ ಸರ್ಕಾರ ಆಡಳಿತ ನೀಡಬೇಕು. ಮತ್ತೆ ಕಾಂಗ್ರೆಸ್ ಅಧಿಕಾರ ಚುಕ್ಕಾಣಿ ಹಿಡಿದು ಜನಪರ ಯೋಜನೆಗಳು ಮುಂದುವರಿಯಬೇಕು. ವೈಯಕ್ತಿಕ ಹಿತಾಸಕ್ತಿಗೆ ಉಪಚುನಾವಣೆಗಳು ನಡೆದು ಜನರಿಗೆ ತೆರಿಗೆ ಭಾರ ಹೊರಿಸಬಾರದು ಎಂಬ ಕಾರಣಕ್ಕೆ ಈ ಚುನಾವಣೆಯನ್ನು ಮುಖ್ಯವಾಗಿ ಪರಿಗಣಿಸಿದ್ದೇನೆ.

2. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂ. ಅನುದಾನ ಬಿಡುಗಡೆ ಯಾಗಿದೆ. ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ ಇಂಥಹದ್ದೇ ದೂರದೃಷ್ಟಿ ಇಟ್ಟುಕೊಂಡು ಅಭಿವೃದ್ಧಿ ಕೆಲಸಗಳಿಗಾಗಿ ಮತ ಕೇಳುತ್ತೇನೆ.

3. ನಾನು ವಿದ್ಯಾವಂತೆ, ಪ್ರಾಧ್ಯಾಪಕಿಯಾಗಿ ಸೇವಾ ಅನುಭವವಿದೆ. ನನ್ನ ಮುಂದಿನ ಜೀವನವನ್ನು ಜನಸೇವೆಗೆ ಮುಡಿಪಾಗಿಡಲು ನಿರ್ಧರಿಸಿ ದ್ದೇನೆ. ಸುಶೀಕ್ಷಿತ ಸಮಾಜ ನಿರ್ಮಾಣ ಮಾಡಿ ಜನಪರ ಸೇವೆ ಮಾಡಲು ಅವಕಾಶ ಕೋರುತ್ತಿರುವುದರಿಂದ ಜನರು ನನ್ನ ಆಯ್ಕೆ ಬಯಸುವ ಭರವಸೆ ಇದೆ.

4. ಈ ಚುನಾವಣೆಯಲ್ಲಿ ನಾವು ಯಾರನ್ನೂ ನೇರ ಎದುರಾಳಿ ಎಂದುಕೊಂಡಿಲ್ಲ. ಕ್ಷೇತ್ರದ ಮತದಾರರು ಪ್ರಜ್ಞಾವಂತರಾಗಿರುವುದರಿಂದ ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸುತ್ತಿರುವುದರಿಂದ ಕಾಂಗ್ರೆಸ್ ಗೆಲವು ನಿಶ್ಚಿತ.

5. ಕ್ಷೇತ್ರದ ಜನರು ಕಳೆದ ಚುನಾವಣೆಯಲ್ಲಿಯೇ ಕಾಂಗ್ರೆಸ್ ಅಭ್ಯರ್ಥಿಯನ್ನು ಹರಸಿದ್ದರು. ಸಿದ್ದರಾಮಯ್ಯ ಅವರ ಜನಪರ ಯೋಜನೆ ಅಪ್ಪಿಕೊಂಡಿದ್ದರು. ಈಗಲೂ ಮತದಾರರಿಗೆ ಕಾಂಗ್ರೆಸ್ ಬಗ್ಗೆ ಅಪಾರ ಒಲವಿದೆ. ಸುರೇಶ್ ಅವರ ಜನಪರ ಕಾಳಜಿ ಬಗ್ಗೆ ಪ್ರೀತಿ ಇದೆ.

6. ಶೀಘ್ರವೇ ಮಹಿಳಾ ಪ್ರಣಾಳಿಕೆ ಬಿಡುಗಡೆಗೊಳಿಸಲಿದ್ದೇವೆ. ಮಹಿಳಾ ಸಬಲೀಕರಣ, ಕೊಳೆಗೇರಿ ಪ್ರದೇಶಗಳ ಅಭಿವೃದ್ಧಿ, ಅಲ್ಲಿನ ಮಕ್ಕಳ ಶೈಕ್ಷಣಿಕ ಪ್ರಗತಿ ಸೇರಿ ಕ್ಷೇತ್ರದಲ್ಲಿ ಮೂಲಸೌಕರ್ಯಕ್ಕೆ ಒತ್ತು ನೀಡುವುದು ಪ್ರಮುಖ ಅಜೆಂಡವಾಗಿದೆ.

7. ಕರೊನಾ ಲಾಕ್​ಡೌನ್​ನಂತ ಸನ್ನಿವೇಶದಲ್ಲಿ ಹಲವರು ಉದ್ಯೋಗ ಕಳೆದುಕೊಂಡಿದ್ದಾರೆ. ಕೂಲಿ ಕಾರ್ವಿುಕರು ಹೊಸ ಬದುಕು ಕಟ್ಟಿಕೊಳ್ಳಲು ಹವಣಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಹಣ-ಹೆಂಡದಂಥ ಕ್ಷಣಿಕ ಆಮಿಷಕ್ಕೆ ಒಳಗಾಗುವುದಿಲ್ಲ. ಈ ಬಾರಿ ಅಂಥ ಆಮಿಷ ತೋರಿಸಿದರೆ ಅಂಥವರನ್ನು ಪ್ರಜ್ಞಾವಂತ ಮತದಾರರು ಖಂಡಿತ ನಿರಾಕರಿಸುತ್ತಾರೆ.

ಅಭಿವೃದ್ಧಿಗೆ ಜನರ ಮನ್ನಣೆ

| ಮುನಿರತ್ನ ಬಿಜೆಪಿ ಅಭ್ಯರ್ಥಿ

1. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳ ಮುಂದುವರಿಕೆ ಹಾಗೂ ಸರ್ಕಾರದ ಸವಲತ್ತು ದೊರಕಿಸುವುದರ ಜತೆಗೆ ಅಭಿವೃದ್ಧಿ ಕಾರ್ಯಗಳನ್ನು ಮತ್ತಷ್ಟು ಚುರುಕುಗೊಳಿಸಲು ಉಪ ಚುನಾವಣೆ ಅಗತ್ಯವಿತ್ತು.

2. ಕ್ಷೇತ್ರದ ಅಭಿವೃದ್ಧಿ ವಿಷಯವೇ ಮುಖ್ಯ. ಕಳೆದ ಅವಧಿಯಲ್ಲಿನ ನನ್ನ ಅಭಿವೃದ್ಧಿ ಕಾರ್ಯಗಳನ್ನು ಮತ್ತಷ್ಟು ಮುಂದುವರಿಸುವ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮತಭಿಕ್ಷೆ ಕೇಳುತ್ತೇನೆ.

3. ಕ್ಷೇತ್ರದಲ್ಲಿ ಎರಡು ಬಾರಿ ಮತದಾರರು ನನ್ನನ್ನು ಹರಸಿದ್ದಾರೆ. ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಅಭಿವೃದ್ಧಿ ವಿಷಯದಲ್ಲಿ ಎರಡೂ ಸರ್ಕಾರದ ನೆರವು ಸಿಗಲಿದೆ. ಇಲ್ಲಿನ ಗೆಲುವು ಮಂತ್ರಿ ಸ್ಥಾನ ಕಲ್ಪಿಸಲಿದ್ದು, ಕ್ಷೇತ್ರದ ಮತ್ತಷ್ಟು ಅಭಿವೃದ್ಧಿಗೆ ಅಧಿಕಾರ ಸಿಗಲಿದೆ.

4. ಚುನಾವಣೆಯಲ್ಲಿ ಎದುರಾಳಿ ಎಂಬ ಪ್ರಶ್ನೆಯೇ ಇಲ್ಲ. ಈ ಹಿಂದೆ 2 ಬಾರಿ ಮತದಾರರು ನನ್ನನ್ನು ಹರಸಿದ್ದಾರೆ. ಮುಂದಿನ ಅಧಿಕಾರವಧಿಗೂ ನನ್ನನ್ನು ಬೆಂಬಲಿಸಲಿದ್ದಾರೆ. ಅಭಿವೃದ್ಧಿ ಎದುರು ನೋಡುವ ಪ್ರಜ್ಞಾವಂತ ಮತದಾರರು ಬೇರೆ ಆಯ್ಕೆ ಬಗ್ಗೆ ಯೋಚಿಸುವುದಿಲ್ಲ ಎಂಬುದು ನನ್ನ ಅಭಿಮತ.

5. ರಾಷ್ಟ್ರೀಯ ಪಕ್ಷ ಬಿಜೆಪಿ ಬಗ್ಗೆ ದೇಶದಾದ್ಯಂತ ಅಲೆ ಇದೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಕಾರ್ಯಗಳು ಹಾಗೂ ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜನಪರ ಆಡಳಿತ ಮತದಾರರ ಮನಸ್ಸಿನಲ್ಲಿ ಅಚ್ಚೊತ್ತಿದೆ. ಇಂಥ ಸರ್ಕಾರವನ್ನೇ ಜನ ಎದುರು ನೋಡುತ್ತಿದ್ದಾರೆ. ಜನಪರ ಸರ್ಕಾರದ ಬಗ್ಗೆಯೇ ಸಹಜವಾಗಿ ಮತದಾರರ ಒಲವಿದೆ.

6. ಸರ್ವಾಂಗೀಣ ಪ್ರಗತಿಯೇ ಮೂಲಮಂತ್ರ. 9 ವಾರ್ಡ್​ಗಳ ವ್ಯಾಪ್ತಿ ಹೊಂದಿರುವ ಕ್ಷೇತ್ರದಲ್ಲಿ ಉಲ್ಲಾಳದಿಂದ ಸುಮನಹಳ್ಳಿ, ಅನ್ನಪೂರ್ಣೆಶ್ವರಿ ನಗರದಿಂದ ಹೊಸಕೆರೆಹಳ್ಳಿವರೆಗೆ ಮೆಟ್ರೋ ಯೋಜನೆ ಜಾರಿ ನನ್ನ ಕನಸಾಗಿದೆ. ಮಲ್ಲತ್ತಹಳ್ಳಿಕೆರೆ ಸಂಪೂರ್ಣ ಅಭಿವೃದ್ಧಿ ಸೇರಿ ಎಲ್ಲ ವಾರ್ಡ್​ಗಳಲ್ಲಿ ಸಕಲ ಮೂಲಸೌಕರ್ಯ ಕಲ್ಪಿಸುವುದು. ಅರ್ಧಕ್ಕೆ ನಿಂತ ಕಾಮಗಾರಿ ಪೂರ್ಣಗೊಳಿಸುವ ಗುರಿಯಿದೆ.

7. ಇದು ಸಾಧ್ಯವಿಲ್ಲದ ಮಾತು. ಪ್ರಜ್ಞಾವಂತ ಮತದಾರರನ್ನು ಹಣ ಹೆಂಡದಿಂದ ಅಳತೆ ಮಾಡಬಾರದು. ನಾನು ಮೂಲತಃ ಗುತ್ತಿಗೆದಾರ ಜತೆಗೆ ಸಿನಿಮಾ ನಿರ್ವಪಕ, ಸಮರ್ಪಕವಾಗಿ ಆದಾಯ ತೆರಿಗೆ ಪಾವತಿಸುತ್ತಾ ಬಂದಿದ್ದೇನೆ. ಪಾರದರ್ಶಕ ಚುನಾವಣೆಗಷ್ಟೆ ಮತದಾರರು ಒಲವು ತೋರಲಿದ್ದಾರೆ.

ಕುಮಾರಸ್ವಾಮಿ ಮತ್ತೆ ಸಿಎಂ ಆಗಬೇಕು

| ಕೃಷ್ಣಮೂರ್ತಿ ಜೆಡಿಎಸ್ ಅಭ್ಯರ್ಥಿ

1. ಮುಂಬರುವ ಚುನಾವಣೆಗಳಿಗೆ ಈ ಚುನಾವಣೆ ಫಲಿತಾಂಶ ಮಹತ್ವದ್ದು. ಈ ಚುನಾವಣೆ ಮೂಲಕ ರಾಜ್ಯ ಮತ್ತು ದೇಶಕ್ಕೆ ಸಂದೇಶ ಹೋಗಬೇಕು. ಪ್ರಾದೇಶಿಕ ಪಕ್ಷ ಎಷ್ಟು ಅವಶ್ಯ ಮತ್ತು ಅನಿವಾರ್ಯ ಎಂಬುದು ಸಾಬೀತಾಗಬೇಕು. ಹಾಗಾಗಿ ಈ ಚುನಾವಣೆ ನಮಗೆ ಬಹಳ ಮುಖ್ಯ. ಆರ್.ಆರ್. ನಗರದಲ್ಲಿ ಶಾಸಕ ಸ್ಥಾನ ಮಾರಿಕೊಂಡದ್ದಕ್ಕೇ ಚುನಾವಣೆ ಬಂದಿದೆ.

2. ದೇವೇಗೌಡರು ಮತ್ತು ಎಚ್.ಡಿ.ಕುಮಾರಸ್ವಾಮಿ ಬೆಂಗಳೂರು ಅಭಿವೃದ್ಧಿಗೆ ಕೊಟ್ಟ ಕೊಡುಗೆಗಳನ್ನು ಜನರ ಮುಂದಿಡುತ್ತೇವೆ. ರೈತರ 25 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ್ದನ್ನು ಮತದಾರರಿಗೆ ಮನವರಿಕೆ ಮಾಡಿಕೊಡುತ್ತೇವೆ. ಪ್ರಧಾನಿ ಮೋದಿಯವರೇ ನಕಲಿ ವೋಟರ್ ಐಡಿ ಸೃಷ್ಟಿಸಿ ರಾಜರಾಜೇಶ್ವರಿ ನಗರ ಗೆಲ್ಲಲಾಗಿದೆ ಎಂದಿದ್ದರು. 20 ಸಾವಿರ ನಕಲಿ ವೋಟು ಚಲಾವಣೆ ಆಗಿದೆ ಎಂದು ಯಡಿಯೂರಪ್ಪ ಹಿಂದೆ ಟ್ವೀಟ್ ಮಾಡಿದ್ದರು.

3. ಕ್ಷೇತ್ರದಲ್ಲಿ ನಡೆದಿರುವ ಹಗರಣಗಳನ್ನು ಮತದಾರರ ಮುಂದೆ ಬಿಚ್ಚಿಡುತ್ತೇವೆ. ಸಂಸದ ಡಿ.ಕೆ. ಸುರೇಶ್ ಅವರೇ ಕ್ಷೇತ್ರದಲ್ಲಿ 250 ಕೋಟಿ ರೂ. ಹಗರಣ ನಡೆದಿದೆ ಎಂದು ಹೇಳಿದ್ದಾರೆ. ಮತ ಮಾರಿಕೊಂಡು ಬಿಜೆಪಿಗೆ ಹೋಗಿರುವುದನ್ನು ಜನರಿಗೆ ತಿಳಿಸುತ್ತೇವೆ. ಎರಡೂ ಪಕ್ಷ ದೂರವಿಡಿ. ಪ್ರಾದೇಶಿಕ ಪಕ್ಷಕ್ಕೆ ಮತ ಕೊಡಿ.

4. ಚುನಾವಣೆಯಲ್ಲಿ ನನ್ನ ನೇರ ಎದುರಾಳಿ ಬಿಜೆಪಿ ಅಭ್ಯರ್ಥಿ ಮುನಿರತ್ನ. ಈ ಹಿಂದಿನ ಚುನಾವಣೆಯಲ್ಲಿ ನಾವು ಮುನಿರತ್ನ ಅವರಿಗೆ ಕಠಿಣ ಸವಾಲು ನೀಡಿದ್ದೆವು. ಈ ಬಾರಿಯೂ ನೀಡುತ್ತೇವೆ. ಬಡವರನ್ನು ವಂಚಿಸುವ, ದುರ್ಬಳಕೆ ಮಾಡಿಕೊಳ್ಳುವ ಕೆಲಸ ಮಾಡಿದ್ದಾರೆ. ಅವರನ್ನು ಸೋಲಿಸುವುದೇ ನಮ್ಮ ಗುರಿ.

5. ಜೆಡಿಎಸ್ ಬಗ್ಗೆ ಮತದಾರರ ಒಲವಿದೆ. ಕರೊನಾ ನಿರ್ವಹಣೆಯಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ. ಬಡ ಜನತೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗುತ್ತಿಲ್ಲ. ಶಾಸಕರು ಕರೊನಾ ಚಿಕಿತ್ಸೆಗೆ 8-10 ಲಕ್ಷ ರೂ. ಬಿಲ್ ಮಾಡುತ್ತಾರೆ. ಬಡ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕರೊನಾ ಪರಿಕರ ಖರೀದಿಯಲ್ಲಿ ಬಹು ದೊಡ್ಡ ಹಗರಣ ನಡೆದಿದೆ. ಸಿದ್ದರಾಮಯ್ಯ ಈ ವಿಷಯ ಪ್ರಸ್ತಾಪಿಸಿದರೇ ಹೊರತು ಹಗರಣ ವಿರುದ್ಧದ ಹೋರಾಟಕ್ಕೆ ರ್ತಾಕ ಅಂತ್ಯ ಕಾಣಿಸಲಿಲ್ಲ.

6. ನಮ್ಮ ಕ್ಷೇತ್ರದಲ್ಲಿ ಮೂಲಸೌಕರ್ಯಕ್ಕಿಂತ ಮುಖ್ಯವಾಗಿ ಮನುಷ್ಯನಿಗೆ ಆರೋಗ್ಯ ಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಸಿಗುವ ಗುಣಮಟ್ಟದ ಚಿಕಿತ್ಸೆಯನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ದೊರಕಿಸಿಕೊಡಲು ಪ್ರಯತ್ನಿಸುತ್ತೇನೆ. ದೆಹಲಿ ಮಾದರಿಯ ಶಾಲೆಗೆ ಒತ್ತು ನೀಡಿ ಬಡವರಿಗೆ ಶ್ರೇಷ್ಠ ದರ್ಜೆಯ ಶಿಕ್ಷಣ ದೊರೆಯುವಂತೆ ಖಂಡಿತವಾಗಿಯೂ ಮಾಡುತ್ತೇನೆ.

7. ಬಿಜೆಪಿ ಹಣಬಲದಿಂದ ಚುನಾವಣೆ ನಡೆಸುತ್ತಿದೆ. ನಾವು ಜನ ಬಲದಿಂದ ಹೋರಾಡುತ್ತೇವೆ. ನನಗೆ ಜನರ ಶ್ರೀರಕ್ಷೆ ಇದೆ. ಬಿಜೆಪಿ ಏನೋ ಕಮಾಲ್ ಮಾಡುತ್ತದೆ. ನಮ್ಮ ಕಷ್ಟಗಳು ತೀರುತ್ತವೆ ಎಂದುಕೊಂಡಿದ್ದ ಜನರು ಈಗ ಭ್ರಮನಿರಸನರಾಗಿದ್ದಾರೆ. 2023ಕ್ಕೆ ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿ ಆಗಬೇಕು ಎನ್ನುವ ಕನಸನ್ನು ಜನ ಕಾಣುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net