ನಾನೂ ಶಾಸಕ ! ನಮ್ಮದೇ ಸರ್ಕಾರ, ಗೆದ್ದು- ಸೋತವರ ನಡುವೆ ಜಂಗಿ ಕುಸ್ತಿ

20230622_173010
Published on

ಶಿವಾನಂದ ಹಿರೇಮಠ ಗದಗ
"ನಾನೂ ಈ ಕ್ಷೇತ್ರದ ಶಾಸಕ. ಆದರೆ, ನಮ್ಮದೇ ಸರ್ಕಾರ'...., ಶಿರಹಟ್ಟಿ ಮತ್ತು ನರಗುಂದ ಕ್ಷೇತ್ರದಲ್ಲಿ ಇಂತಹ ಮಾತು, ಭಿನ್ನಾಭಿಪ್ರಾಯಗಳು ಆಗಾಗ ಬೆಳಕಿಗೆ ಬರುತ್ತಿವೆ. ಸೋತ ಗೆದ್ದವರ ನಡುವೆ, ಕಾರ್ಯಕರ್ತರ ನಡುವೆ ಆಗಾಗ ವಾಕ್ಸಮರಗಳು ನಡೆಯುತ್ತಲೇ ಇದೆ. ಅದರಲ್ಲೂ ಶಿರಹಟ್ಟಿ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಚಂದ್ರು ಲಮಾಣಿ ಮತ್ತು ಪರಾಜಿತ ಅಭ್ಯರ್ಥಿ ಸುಜಾತಾ ದೊಡ್ಡಮನಿ ನಡುವೆ ವೈಷಮ್ಯ ಹೇಳತೀರದರು. ಆಡಳಿತ ವ್ಯವಸ್ಥೆಯಲ್ಲಿ ಬೆಂಬಲಿರಿಗೆ ಬೆಂಬಲಿಗರಿಗೆ ಪ್ರಾಶಸ್ತ್ಯ ನೀಡುವ ವಿಷಯದಲ್ಲಿ ಇಬ್ಬರ ನಡುವೆ ವಾಕ್ಸಮರ, ಭಿನ್ನಾಭಿಪ್ರಾಯಗಳು ಬೀದಿಗೆ ಬಂದು ರಂಪಾಟ ನಡೆಯತ್ತಿವೆ.

ಚಂದ್ರು ಆರೋಪ ಏನು?
ಆಡಳಿತದಲ್ಲಿ ಸುಜಾತಾ ದೊಡ್ಡಮನಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಚಂದ್ರು ಲಮಾಣಿ ಜಿಲ್ಲಾಧಿಕಾರಿಗೆ ಇತ್ತಿಚೆಗೆ ದೂರನ್ನು ನೀಡಿದ್ದು, ಈಗ ಚರ್ಚೆಗೆ ಗ್ರಾಸವಾಗಿದೆ.  ಶಿರಹಟ್ಟಿ ಕ್ಷೇತ್ರದ ಪರಾಜಿತ ಕಾಂಗ್ರೆಸ್​ ಅಭ್ಯರ್ಥಿ ಸುಜಾತಾ ದೊಡ್ಡಮನಿ ಅಧಿಕಾರಿಗಳ ಜತೆ ರಹಸ್ಯ ಸಭೆ ಮಾಡುತ್ತಾರೆ. ತಮ್ಮ ಬೆಂಬಲಿಗರಿಗೆ ಪ್ರಾಶಸ ನೀಡಬೇಕೆಂದು ಸುಜಾತಾ ಅಧಿಕಾರಿಗಳಿಗೆ ಆಗ್ರಹಿಸುತ್ತಿದ್ದಾರೆ ಮತ್ತು ನಿರ್ದೇಶನ ನೀಡುತ್ತಾರೆ ಎಂಬ ಇತ್ಯಾದಿ ಆರೋಪಗಳನ್ನು ಬಿಜೆಪಿ ಶಾಸಕ ಚಂದ್ರು ಲಮಾಣಿ ಮಾಡಿದ್ದಾರೆ. ದೂರನ್ನು ದಾಖಲಿಸುವುದರ ಜತೆಗೆ ಆಪ್ತರ ಬಳಿ ಹಲವು ಬಾರಿ ನೋವನ್ನು ತೋಡಿಕೊಂಡಿದ್ದಾರೆ. ಸಂವಿಧಾನಿಕ ಮಾನ್ಯತೆ ಇಲ್ಲದ ಪರಾಜಿತ ಅಭ್ಯಥಿರ್ಗೆ ಕ್ಷೇತ್ರದ ಅಧಿಕಾರಿಗಳು "ಸಲಾಮ್​' ಹೊಡೆಯುತ್ತಿರುವುದು ಕೂಡ ಎಲ್ಲರಿಗೂ ಆಶ್ಚರ್ಯ ತಂದಿದೆ. ಸುಜಾತಾ ದೊಡ್ಡಮನಿ ಅಧಿಕಾರಿಗಳಿಗೆ ಹಲವು ವಿಷಯಗಳಲ್ಲಿ ಆದೇಶ ನೀಡುತ್ತಿದ್ದಾರೆ ಎಂದು ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಹಲವಡೆ ಆಕ್ಷೇಪಿಸಿದ್ದಾರೆ.


ಸಿ.ಸಿ. ಪಾಟೀಲ ಏನು ಹೇಳುತ್ತಾರೆ?
ಶಿರಹಟ್ಟಿ ಕ್ಷೇತ್ರದಲ್ಲಿ ಅಷ್ಟೇ ಅಲ್ಲದೇ ಇಂತಹ ಟನೆಗಳು ನರಗುಂದ ಕ್ಷೇತ್ರದಲ್ಲೂ ಜರುಗುತ್ತಿವೆ ಎಂದು ಮಾಜಿ ಸಚಿವ, ಶಾಸಕ ಸಿ.ಸಿ. ಪಾಟೀಲ ಆಕ್ಷೇಪಿಸಿದ್ದಾರೆ. ಸರ್ಕಾರ ನಮ್ಮದೇ ಎಂದು ಕಾಂಗ್ರೆಸ್​ ಬೆಂಬಲಿಗರು ಅಧಿಕಾರಿಗಳನ್ನು ಭಯ ಬೀಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ನಾನೂ ಸಚಿವನಾಗಿ ಕೆಲಸ ಮಾಡಿದ್ದೇನೆ. ಸಚಿವಾಲಯಗಳಲ್ಲೂ ನನ್ನ ಸಂಪರ್ಕ ಇದೆ. ನನ್ನ ಕ್ಷೇತ್ರದಲ್ಲಿ ಹಸ್ತಕ್ಷೇಪಕ್ಕೆ ಆಸ್ಪದ ಸಾಧ್ಯವಿಲ್ಲ. ಸಮಸ್ಯೆ ಹೇಳುವ, ಕೆಲಸ ಮಾಡಿಕೊಡಿ ಎಂದು ಕೇಳುವ ಹಕ್ಕು ಸಾಮಾನ್ಯರನ್ನು ಒಳಗೊಂಡಂತೆ ಮಾಜಿ ಶಸಕರಿಗೂ ಇದೆ. ಆದರೆ, ಆಡಳಿತ ವ್ಯವಸ್ಥೆಯಲ್ಲಿ ನುಸುಳಿ ಅಧಿಕಾರ ಚಲಾಯಿಸುವ ಮಾನ್ಯತೆ ಇಲ್ಲ ಎಂದು ಸಿ.ಸಿ. ಪಾಟೀಲ ಗುಡುಗಿದ್ದಾರೆ.  

ಬಾಕ್ಸ್​:
ನಾನೇನೂ ಏಕಾಏಕಿ ರಾಜಕಾರಣಿ ಆಗಿಲ್ಲ -ಸುಜಾತಾ ದೊಡ್ಡಮನಿ:
ಶಾಸಕ ಚಂದ್ರು ಲಮಾಣಿ ಮಾಡಿರುವ ಆರೋಪವನ್ನು ತಳ್ಳಿ ಹಾಕಿರುವ ಸುಜಾತಾ ದೊಡ್ಡಮನಿ, ಪ್ರವಾಸಿ ಮಂದಿರದ ಕೊಠಡಿ ಪಡೆಯುವ ವಿಷಯದಲ್ಲಿ ಚಂದ್ರು ಲಮಾಣಿ ಗುರುವಾರ ನನ್ನ ಜತೆ ಜಗಳವಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಚಂದ್ರು ಅವರದ್ದು ಹಿಟ್ಲರ್​ ರಾಜಕಾರಣ, ಇದು ನನ್ನ ಕೊಠಡಿ, ನಿವ್ಯಾಕೆ ಬಳಸುತ್ತೀರಿ ಎಂದು ನಿಂಧಿಸಿದ್ದಾರೆ. ರಾಜ್ಯದಲ್ಲಿ ನಮ್ಮ ಸರ್ಕಾರ ಇದೆ. ನಮ್ಮ ಕಾರ್ಯಕರ್ತರ ಕೆಲಸ ಮಾಡಿಕೊಡಿ ಎಂದು ಅಧಿಕಾರಿಗಳಿಗೆ ಹೇಳುವುದು ಅಪರಾಧವೇ?. ಕ್ಷೇತ್ರದಲ್ಲಿ ಕಾಂಗ್ರೆಸ್​ ಕಾರ್ಯಕರ್ತರೂ ಇದ್ದಾರೆ. ಅವರ ಕೆಲಗಳು ಆಗಬೇಕಿದೆ. ಕಾನೂನು ಅಡಿಯಲ್ಲಿ ಏನು ಸಾಧ್ಯವೋ ಅಂತಹ ಕೆಲಸ ಮಾಡಿಕೊಡಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿದ್ದು ತಪ್ಪಲ್ಲ ಎಂದಿರುವ ಸುಜಾತಾ ದೊಡ್ಡಮನಿ ರಾತ್ರೋ ರಾತ್ರಿ, ಏಕಾ ಏಕಿ ರಾಜಕಾರಣಿಯಾಗಿ ಹೊರ ಹೊಮ್ಮಿಲ್ಲ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net