

ಮಂಗಳೂರು: ಮಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಮಾಡಿರುವುದನ್ನು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಖಂಡಿಸಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಪೆಟ್ರೋಲ್ ಬೆಲೆ ಪ್ರತಿ ಲೀ.ಗೆ 3 ರೂ. ಹಾಗೂ ಡೀಸೆಲ್ ಬೆಲೆ ಪ್ರತಿ ಲೀ.ಗೆ 3.50 ರೂ. ಏಕಾಏಕಿ ಹೆಚ್ಚಿಸಿ ವಾಹನ ಸವಾರರಿಗೆ ಶಾಕ್ ನೀಡಿದೆ. ಲೋಕಸಭೆ ಚುನಾವಣೆಯಲ್ಲಿ ಜನತೆ ಬಿಜೆಪಿಗೆ ಹೆಚ್ಚಿನ ಮತದಾನ ಮಾಡಿರುವ ಹಿನ್ನೆಲೆಯಲ್ಲಿ ಸೇಡು ತೀರಿಸಿಕೊಳ್ಳಲು ಜನವಿರೋಧಿ ಕಾಂಗ್ರೆಸ್ ಸರ್ಕಾರ ಹೊರಟಿದೆ. ಅವೈಜ್ಞಾನಿಕ ಗ್ಯಾರಂಟಿಗಳಿಂದ ರಾಜ್ಯದ ಬೊಕ್ಕಸವನ್ನು ಖಾಲಿ ಮಾಡಿರುವ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಸಾಮಾನ್ಯ ಜನತೆಯ ಮೇಲೆ ತೆರಿಗೆ ಭಾರ ಹೊರಿಸಿ ಖಜಾನೆ ತುಂಬಿಸಲು ಹೊರಟಿದೆ. ಪೆಟ್ರೋಲ್, ಡೀಸೆಲ್ ಮೇಲೆ ಸೆಸ್ ವಿಧಿಸಿದ ಜನ ವಿರೋಧಿ, ಬಡವರ ವಿರೋಧಿ ಸರ್ಕಾರ ಇದಾಗಿದೆ. ಉಚಿತ ಉಚಿತ ಉಚಿತ ಎಂದು ರಾಜ್ಯದ ಜನರ ಮುಂಗೈಗೆ ತುಪ್ಪ ಹಚ್ಚುತ್ತಾ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಕಳೆದ ಒಂದು ವರ್ಷದ ಅವಧಿಯಲ್ಲಿ ಎರಡಕ್ಕೂ ಹೆಚ್ಚು ಬಾರಿ ಪೆಟ್ರೋಲ್ ಮೇಲಿನ ಸೆಸ್ ಜಾಸ್ತಿ ಮಾಡಿದೆ. ‘ತಾನು ಬಡವರ ಪರ’ ಎಂದು ಬೊಬ್ಬೆ ಹೊಡೆಯುವ ಮುಖ್ಯಮಂತ್ರಿ ಅವರೇ ಇದು ನಿಮ್ಮ ಬಡವರ ಪರ ನೀತಿಯೇ? ಎಂದು ದ.ಕ. ಜಿಲ್ಲಾ ಬಿ.ಜೆ.ಪಿ. ಆಕ್ರೋಶ ವ್ಯಕ್ತಪಡಿಸಿದೆ.
ರಾಜ್ಯದ ಜನರ ಮೇಲೆ ಪದೇ ಪದೇ ಬೆಲೆ ಏರಿಕೆಯ ಬರೆ ಹಾಕುವುದೇ ಕಾಂಗ್ರೆಸ್ ಸರ್ಕಾರದ ಅಸಲಿ ಕರ್ನಾಟಕ ಮಾಡೆಲ್. ಸಿಎಂ ಸಿದ್ದರಾಮಯ್ಯ ಅವರೇ ಹೇಳುವಂತೆ ಪೆಟ್ರೋಲಿಯಂ ಕಚ್ಚಾ ತೈಲದ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಮೇಲಾಗಿ ನೀವೇ ಹೇಳಿದಂತೆ ಕರ್ನಾಟಕ ಸರಕಾರ ದಿವಾಳಿ ಆಗಿಲ್ಲ, ಸರ್ಕಾರದ ಬೊಕ್ಕಸ ತುಂಬಿ ತುಳುಕುತ್ತಿದೆ. ಅಂದ ಮೇಲೆ ದಿಢೀರ್ ಬೆಲೆ ಏರಿಕೆ ಯಾಕಾಗಿ? ಇದರ ಪರಿಣಾಮ ಉಳಿದಂತೆ ದಿನಬಳಕೆ ಸಾಮಗ್ರಿಗಳ ಬೆಲೆಯೂ ಏರುತ್ತವೆ ಅನ್ನುವ ಪರಿಜ್ಞಾನವೂ ಇಲ್ಲವೇ..?
ನಿಮಗೆ ನಿಜಕ್ಕೂ ಬಡವರ ಮೇಲೆ ಕಾಳಜಿ ಇದ್ದರೆ, ಕೂಡಲೇ ಬೆಲೆ ಏರಿಕೆ ಆದೇಶವನ್ನು ಹಿಂಪಡೆಯಿರಿ, ಇಲ್ಲವಾದಲ್ಲಿ ಜಿಲ್ಲೆ, ರಾಜ್ಯಾದ್ಯಂತ ಬಿಜೆಪಿಯ ಉಗ್ರ ಪ್ರತಿಭಟನೆ ಎದುರಿಸಲು ಸಿದ್ದರಾಗಿ ಎಂದು ದ.ಕ. ಜಿಲ್ಲಾ ಬಿ.ಜೆ.ಪಿ. ವಕ್ತಾರ ಅರುಣ್ ಜಿ. ಶೇಟ್ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.