ಜನೌಷಧ ಕೇಂದ್ರ ಮುಚ್ಚುವ ಕ್ರಮಕ್ಕೆ ಖಂಡನೆ, ಬಿಜೆಪಿಯಿಂದ ಬೃಹತ್ ಪ್ರತಿಭಟನೆ

BJP JANOUSHADA PROTEST
ವಿಜಯಪುರ ಜಿಲ್ಲಾಸ್ಪತ್ರೆ ಆವರಣದಲ್ಲಿ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದರು. ಸಂಸದ ರಮೇಶ ಜಿಗಜಿಣಗಿ, ಎಸ್.ಕೆ. ಬೆಳ್ಳುಬ್ಬಿ, ಗುರುಲಿಂಗಪ್ಪ ಅಂಗಡಿ ಮತ್ತಿತರರಿದ್ದಾರೆ.
Published on

ವಿಜಯಪುರ: ಜನ ಸಾಮಾನ್ಯರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಜನೌಷಧ ಕೇಂದ್ರಗಳನ್ನು ಮುಚ್ಚಲು ಹೊರಟಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು. ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು. ಕಾಂಗ್ರೆಸ್ ಜನವಿರೋಧಿ ಸರ್ಕಾರ ಎಂದು ಟೀಕಿಸಿದರು. ಕಪ್ಪು ಬಟ್ಟೆ ಕಟ್ಟಿಕೊಂಡು ಸಾಂಕೇತಿಕವಾಗಿ ಧರಣಿ ನಡೆಸಿದರು.

ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆಗಳ ಆವರಣದಲ್ಲಿ ಜನೌಷಧ ಕೇಂದ್ರಗಳ ಸೇವೆಯನ್ನು ಸ್ಥಗಿತಗೊಳಿಸುವ ನಿರ್ಣಯ ಕೈಗೊಂಡ ರಾಜ್ಯ ಸರ್ಕಾರದ ನಿರ್ಧಾರ ಸರಿಯಲ್ಲ. ಇದರಿಂದ ಜನ ಸಾಮಾನ್ಯರಿಗೆ ತೀವ್ರವಾಗಿ ತೊಂದರೆಯಾಗಲಿದೆ. ಬಡ ರೋಗಿಗಳಿಗೆ ವರದಾನವಾಗಿರುವ ಈ ಜನೌಷಧ ಕೇಂದ್ರಗಳನ್ನು ಸ್ಥಗಿತಗೊಳಿಸುವ ನಿರ್ಧಾರ ಬಡವರ ವಿರೋಧಿಯಾಗಿದೆ ಎಂದರು.

ಸರ್ಕಾರಿ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಬರುವವರು ಬಡವರು ಮಾತ್ರ. ಬಡವರಿಗೆ ಅನುಕೂಲಕರವಾದ ಈ ಕೇಂದ್ರಗಳನ್ನು ವಿನಾಕಾರಣ ಸ್ಥಗಿತಗೊಳಿಸುವ ಅರ್ಥವೇನು? ಸಚಿವ ದಿನೇಶ ಗುಂಡೂರಾವ್, ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಅವರ ಪಕ್ಷದ ಮುಖಂಡರು ಶ್ರೀಮಂತರಿದ್ದಾರೆ. ಅವರು ಜಿಲ್ಲಾಸ್ಪತ್ರೆಗೆ ಹೋಗುವುದಿಲ್ಲ. ಬಡವರು ಮಾತ್ರ ಜಿಲ್ಲಾಸ್ಪತ್ರಗೆ ಹೋಗುತ್ತಾರೆ. ಹೀಗಾಗಿ ಬಡವರಿಗೆ ಈ ಔಷಧ ಮರೀಚಿಕೆಯಾಗಲಿದ್ದು, ತೀವ್ರ ತೊಂದರೆಯುಂಟಾಗಲಿದೆ. ಕೂಡಲೇ ರಾಜ್ಯ ಸರ್ಕಾರ ತನ್ನ ನಿರ್ಧಾರ ಹಿಂದಕ್ಕೆ ಪಡೆಯಬೇಕೆಂದರು.

ಖಾಸಗಿ ಮೆಡಿಕಲ್‌ಗಳಲ್ಲಿ 100 ರೂಪಾಯಿಗೆ ಸಿಗುವಂಥ ಔಷಧ ಜನೌಷಧ ಮಳಿಗೆಗಳಲ್ಲಿ 10 ರೂಪಾಯಿಗೆ ಉತ್ತಮ ಗುಣಮಟ್ಟದಲ್ಲಿ ಸಿಗುತ್ತದೆ. ಆದರೆ ರಾಜ್ಯ ಸರ್ಕಾರ ಹಾಗೂ ಆರೋಗ್ಯ ಸಚಿವರು ಮೆಡಿಕಲ್ ಮಾಫಿಯಾದವರ ಒತ್ತಡಕ್ಕೆ ಮಣಿದು ಹೀಗೆಲ್ಲ ಮಾಡುತ್ತಿದ್ದಾರೆಯೇ ಎಂದು ಜನಸಾಮಾನ್ಯರು ಮಾತನಾಡುತ್ತಿದ್ದಾರೆ. ಮಾತೆತ್ತಿದರೆ ಅಹಿಂದ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರೇ ನೀವೆ ಕುಳಿತುಕೊಂಡು ಜನೌಷಧ ತೆಗೆಸುವ ಮೂಲಕ ಬಡವರಿಗೆ ಅನ್ಯಾಯ ಮಾಡುತ್ತಿದ್ದೀರಿ. ಇದು ಸರಿಯಾದ ಕ್ರಮವಲ್ಲ, ತಕ್ಷಣ ಈ ಆದೇಶವನ್ನು ಹಿಂಪಡೆಯಬೇಕು ಎಂದು ಜಿಗಜಿಣಗಿ ಆಗ್ರಹಿಸಿದರು.

ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿ, ಸರ್ಕಾರಿ ಆಸ್ಪತ್ರೆಗೆ ಬರುವವರು ಬಡವರು, ಬಡವರ ಹೊಟ್ಟೆ ಮೇಲೆ ಕಲ್ಲು ಹಾಕುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಕೊಡುವ ಔಷಧಗಳು ಲಭ್ಯ ಇರುವುದಿಲ್ಲ. ಹೀಗಾಗಿ ರೋಗಿಗಳು ಹೊರಗಡೆ ಹೋಗಿ ಔಷಧ ತರಬೇಕಾಗುತ್ತದೆ. ಔಷಧ ಕೇಂದ್ರ ಸಿಗದೇ ಇದ್ದ ಪಕ್ಷದಲ್ಲಿ ರೋಗಿಗಳು ಅನಾವಶ್ಯಕವಾಗಿ ಹೆಚ್ಚಿನ ದರದ ಔಷಧವನ್ನು ಖರೀದಿ ಮಾಡುವ ಅನಿವಾರ್ಯತೆ ಎದುರಾಗಲಿದೆ. ಹೀಗಾಗಿ ಸರ್ಕಾರ ತನ್ನ ನಿರ್ಧಾರ ಹಿಂಪಡೆಯಬೇಕೆಂದರು.

ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಬೆಳಗಾವಿ ವಿಭಾಗದ ಪ್ರಭಾರಿ ಚಂದ್ರಶೇಖರ ಕವಟಗಿ, ಬೀಜ ಮತ್ತು ಸಾವಯವ ನಿಗಮದ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈರಣ್ಣ ರಾವೂರ, ಸಾಬು ಮಾಶ್ಯಾಳ, ಮಳುಗೌಡ ಪಾಟೀಲ, ಸುರೇಶ ಬಿರಾದಾರ, ಉಮೇಶ ಕೋಳಕೂರ, ಸಂಜಯ ಐಹೊಳ್ಳಿ, ಎಸ್.ಎ. ಪಾಟೀಲ, ವಿಜಯ ಜೋಶಿ, ರವಿಕಾಂತ ಬಗಲಿ, ಕಾಂತು ಶಿಂಧೆ, ರಾಜೇಶ ತವಸೆ, ಮಂಜುನಾಥ ಬಿಸೆ, ಪಾಪುಸಿಂಗ್ ರಜಪೂತ, ಚನ್ನು ಚಿನಗುಂಡಿ, ಸಿದ್ದು ಮಲ್ಲಿಕಾರ್ಜುನಮಠ, ಬಸವರಾಜ ಬೈಚಬಾಳ, ರಾಹಲ ಜಾಧವ, ಕಲ್ಮೇಶ ಹಿರೇಮಠ, ಸಂತೋಷ ನಿಂಬರಗಿ, ಸಂದೀಪ ಪಾಟೀಲ, ಸಂಪತ್ ಕೋಹಳ್ಳಿ, ಸುಮಂಗಲಾ ಕೋಟಿ, ಛಾಯಾ ಮಸಿ, ಭಾರತಿ ಭುಯ್ಯರ, ಭಾರತಿ ಶಿವಣಗಿ, ಸುಶ್ಮೀತಾ ವಡಕರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net