ಒಕ್ಕಲಿಗರ ಅವಹೇಳನ ಮಾಡಿದ ಕೆ.ಎಸ್.ಭಗವಾನ್ ವಿರುದ್ಧ ದೂರು ದಾಖಲಿಸಿ: ಮಂಡ್ಯದಲ್ಲಿ ಪೊಲೀಸರಿಗೆ ಮನವಿ ಸಲ್ಲಿಸಿದ ಬಿಜೆಪಿ

BJP complaint to police against KS Bhagwan mandya
Published on

ಮಂಡ್ಯ: ಒಕ್ಕಲಿಗ ಸಮುದಾಯ ಹಾಗೂ ಪುರಾಣ ಪುರುಷರಾದ ಶ್ರೀರಾಮ, ಸೀತಾಮಾತೆ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಪ್ರೊ.ಕೆ.ಎಸ್.ಭಗವಾನ್ ವಿರುದ್ಧ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವುದರ ಜತೆಗೆ ಇವರು ನಿರ್ವಹಣೆ ಮಾಡುತ್ತಿರುವ ಸಂಘ ಸಂಸ್ಥೆಗಳಿಗೆ ವಿದೇಶದಿಂದ ಬರುತ್ತಿರುವ ಹಣದ ಬಗ್ಗೆ ತನಿಖೆ ನಡೆಸುವಂತೆ ಬುಧವಾರ ಬಿಜೆಪಿಯಿಂದ ದೂರು ಸಲ್ಲಿಸಲಾಯಿತು.

ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ನೇತೃತ್ವದಲ್ಲಿ ನಗರದ ಪೊಲೀಸ್ ಭವನಕ್ಕೆ ತೆರಳಿದ ಕಾರ್ಯಕರ್ತರು ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ ಅವರಿಗೆ ದೂರು ಸಲ್ಲಿಸಿದರು. ಇತ್ತೀಚೆಗೆ ಮೈಸೂರಿನ ಟೌನ್‌ಹಾಲ್ ಬಳಿ ಮಹಿಷ ದಸರಾ ಕಾರ್ಯಕ್ರಮದಲ್ಲಿ ಕೆ.ಎಸ್.ಭಗವಾನ್, ಒಕ್ಕಲಿಗರು ಸಂಸ್ಕೃತಿ ಹೀನರು ಹಾಗೂ ಪ್ರಾಣಿಗಳು ಎಂಬ ಮಾತುಗಳನ್ನಾಡಿ ಸಾರ್ವತ್ರಿಕವಾಗಿ ಅಪಮಾನ ಮಾಡಿದ್ದಾರೆ. ಈ ಹಿಂದೆಯೂ ಹಿಂದು ಧರ್ಮ ಹಾಗೂ ಶ್ರೀರಾಮ, ಸೀತಾದೇವಿ, ಭಗವದ್ಗೀತೆ ಬಗ್ಗೆ ತೀರಾ ಹಗುರವಾದ ಮಾತನಾಡಿ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇಂತಹ ಹೇಳಿಕೆ ಹಿಂದೆ ಅಂತಾರಾಷ್ಟ್ರೀಯ ಹುನ್ನಾರದ ಅನುಮಾನವಿದೆ. ಕೆಲ ದಿನದ ಹಿಂದೆ ಡಿಸ್‌ಮ್ಯಾಂಟಲಿಂಗ್ ಆಫ್ ಗ್ಲೋಬಲ್ ಹಿಂದುತ್ವ ಎಂಬ ವೀಡಿಯೋ ಸಂವಾದವನ್ನು ವಿದೇಶಿ ವಿದ್ಯಾಲಯಗಳು ಏರ್ಪಡಿಸಿದ್ದು, ಇದಕ್ಕೆ ಭಾರತದಿಂದ ಸಹಸ್ರಾರು ಜನ ತಮ್ಮನ್ನು ತಾವು ಬುದ್ಧಿಜೀವಿಗಳೆಂದು ಕರೆದುಕೊಳ್ಳುವ ಪ್ರಾಧ್ಯಾಪಕರು, ಸಾಹಿತಿಗಳು, ಇತಿಹಾಸ ತಜ್ಞರು ಭಾಗವಹಿಸಿರುವ ಬಗ್ಗೆ ವಿದೇಶಿ ಮಾಧಮಗಳಲ್ಲಿ ವರದಿಯಾಗಿವೆ. ಪ್ರಮುಖವಾಗಿ ಭಗವಾನ್, ಪ್ರೊ.ಮಹೇಶ್‌ಚಂದ್ರಗುರು, ಜ್ಞಾನಪ್ರಕಾಶಸ್ವಾಮಿ ಭಾಗವಹಿಸಿದ್ದಾರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇವರು ಧರ್ಮ ಧರ್ಮಗಳ ಹಾಗೂ ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಇವರ ಕಾರ್ಯಕ್ಕೆ ವಿದೇಶದಿಂದ ಕೋಟ್ಯಂತರ ರೂ ಪಡೆದಿದ್ದಾರೆ ಎಂಬ ಅನುಮಾನಗಳಿವೆ. ಆದ್ದರಿಂದ ಸಮಗ್ರವಾದ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

ಬಿಜೆಪಿ ಕಾರ್ಯಕರ್ತರಾದ ಪ್ರಸನ್ನ, ಮನುಕುಮಾರ್ ಹೊಳಲು, ಶಿವಲಿಂಗಯ್ಯ, ಶಿವಕುಮಾರ್, ವಿನೋಭ, ರಾಜೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net