ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿದ್ದಕ್ಕೆ ಆಕ್ರೋಶ, ರಾಹುಲ್‌ಗಾಂಧಿ ವಿರುದ್ಧ ಬಿಜೆಪಿ ದೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಕುರಿತು ವ್ಯಂಗ್ಯ

BJP complaint against Rahul Gandhi mandya
Published on

ಮಂಡ್ಯ: ಸಂಸದ ಪ್ರಜ್ವಲ್ ರೇವಣ್ಣ ಅವರನ್ನ ಪ್ರಧಾನಮಂತ್ರಿ ನರೇಂದ್ರಮೋದಿ ಸಮರ್ಥಿಸಿಕೊಂಡಿದ್ದಾರೆಂದು ಆರೋಪಿಸಿರುವ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ವಿರುದ್ಧ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ದೂರು ಸಲ್ಲಿಸಿದ್ದಾರೆ.

ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ನೇತೃತ್ವದಲ್ಲಿ ನಗರದ ಡಿಸಿ ಕಚೇರಿಗೆ ತೆರಳಿದ ಕಾರ್ಯಕರ್ತರು ದೂರು ಸಲ್ಲಿಸಿ ರಾಹುಲ್‌ಗಾಂಧಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು. ಪ್ರಜ್ವಲ್ ರೇವಣ್ಣ ಮೇಲೆ ಆರೋಪವಿದೆ. ಇದಕ್ಕೆ ಸಂಬಂಧ ಪಟ್ಟಂತೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ನೇಮಕ ಮಾಡಿದೆ. ಆರೋಪ ಸತ್ಯವೋ ಇಲ್ಲ ಮಿತ್ಯವೋ ಎನ್ನುವುದು ಸಾಬೀತಾಗಬೇಕಿದೆ. ವಿಡಿಯೋಗಳು ಅಸಲಿಯೋ, ನಕಲಿಯೋ ಎನ್ನುವುದು ತನಿಖೆಯಾಗಬೇಕಿದೆ. ಆದರೆ ಇದಕ್ಕೂ ಮುನ್ನವೇ ರಾಹುಲ್‌ಗಾಂಧಿ ಪ್ರಜ್ವಲ್‌ನನ್ನು ರೇಪಿಸ್ಟ್ ಎಂದು ಆದೇಶ ನೀಡಿದ್ದಾರೆಂದು ಆರೋಪಿಸಿದರು.

ಇನ್ನು ಈ ವಿಚಾರವನ್ನು ಕಾಂಗ್ರೆಸ್ ರಾಜಕೀಯಗೊಳಿಸುತ್ತಿದೆ. ಮಾತ್ರವಲ್ಲದೆ ಕೆಲ ಕಾಂಗ್ರೆಸ್ ಕಾರ್ಯಕರ್ತರು ಹೊಸ ವಿಡಿಯೋ ಗಳು ಬಂದಿವೆ, ನಿಮ್ಮ ವಾಟ್ಸ್‌ಅಪ್ ನಂಬರ್ ಕಳುಹಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇದಲ್ಲದೆ ಪ್ರಜ್ವಲ್ ರೇವಣ್ಣ ಹಿಂದೆ ಸಂಸದರಾಗಿ ಆಯ್ಕೆಯಾಗಿದ್ದು ಕಾಂಗ್ರೆಸ್ ಜತೆ ಮೈತ್ರಿಯಿದ್ದಾಗಲೇ ಎನ್ನುವುದನ್ನು ಮರೆತು ಒಂದು ಕೈಯಲ್ಲಿ ಚೊಂಬು, ಇನ್ನೊಂದು ಕೈಯಲ್ಲಿ ಪೆನ್‌ಡ್ರೈವ್ ಹಿಡಿದು ಹೇಳಿಕೆ ಕೊಡುತ್ತಿದ್ದಾರೆ. ಒಂದು ವೇಳೆ ಸಂತ್ರಸ್ತ ಮಹಿಳೆಯರು ಆತ್ಮಹತ್ಯೆಗೆ ಶರಣಾದರೆ ಯಾರು ಹೊಣೆ?. ಹೆಣ್ಣು ಮಕ್ಕಳ ವಿಚಾರದಲ್ಲಿ ಗೌಪ್ಯತೆ ಕಾಪಾಡಬೇಕಾದ ಸರ್ಕಾರ ಮಾಡುತ್ತಿರುವುದಾದರೂ ಏನು?. ರಾಜ್ಯ ಪೊಲೀಸರು ಸಮರ್ಥರಿದ್ದಾರೆ. ಈಗಾಗಲೇ ಲುಕ್‌ಔಟ್ ನೋಟೀಸ್ ಕೂಡ ನೀಡಿದ್ದಾರೆ. ಇದು ಅವರ ಕರ್ತವ್ಯ. ಹೀಗಿರುವಾಗ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಪ್ರಜ್ವಲ್‌ನ ಪಾಸ್‌ಪೋರ್ಟ್ ವಜಾಗೊಳಿಸಿ ಎಂದು ಹೇಳುವುದೇನಿತ್ತು ಎಂದು ಪ್ರಶ್ನಿಸಿದರು.

ಆದ್ದರಿಂದ ಈ ರೀತಿಯ ಸೂಕ್ಷ್ಮ ವಿಚಾರದಲ್ಲಿ ತಾವೇ ನ್ಯಾಯಾಧೀಶರಂತೆ ಹೇಳಿಕೆ ನೀಡುವುದಕ್ಕೆ ಕಡಿವಾಣ ಹಾಕಬೇಕು. ರೇಪಿಸ್ಟ್ ಎಂದು ಹೇಳಿಕೆ ನೀಡಿರುವ ರಾಹುಲ್ಗಾಂಧಿ ಮೇಲೆ ಸ್ವಯಂ ಪ್ರೇರಿತ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಇದಲ್ಲದೆ ಸಂವಿಧಾನದ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಡೀಪ್‌ಫೇಕ್ ವಿಡಿಯೋಗಳನ್ನೂ ಹರಿಬಿಡುತಿದ್ದು, ಈ ಬಗ್ಗೆಯೂ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಮುಖಂಡರಾದ ಹೊಸಹಳ್ಳಿ ಶಿವು, ಮಾದರಾಜೇ ಅರಸು, ಸಾತನೂರು ಯೋಗೇಶ್, ಜ್ಯೋತಿ ಕೃಷ್ಣೇಗೌಡ, ನಿತ್ಯಾನಂದ, ಸಾಗರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net