ಕಲ್ಯಾಣ ಬ್ಯಾನರ್ಜಿ, ರಾಹುಲ ಗಾಂಧಿ ವಿರುದ್ಧ ಬಿಜೆಪಿ ದೂರು

h23-bjp
Published on

ಹುಬ್ಬಳ್ಳಿ: ಭಾರತದ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರಿಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಸಂಸದರಾದ ಕಲ್ಯಾಣ ಬ್ಯಾನರ್ಜಿ ಹಾಗೂ ರಾಹುಲ ಗಾಂಧಿ ವಿರುದ್ಧ ಇಲ್ಲಿಯ ಉಪನಗರ ಠಾಣೆಯಲ್ಲಿ ಬಿಜೆಪಿ ಮಹಾನಗರ ಜಿಲ್ಲಾ ಘಟಕದಿಂದ ಶನಿವಾರ ದೂರು ನೀಡಲಾಯಿತು.
ದೆಹಲಿ ಸಂಸತ್ ಆವರಣದಲ್ಲಿ ವಿರೋಧ ಪಕ್ಷಗಳು ನಡೆಸಿದ ಪ್ರತಿಭಟನೆ ವೇಳೆ ಟಿಎಂಸಿ ಸಂಸದ ಕಲ್ಯಾಣ ಬ್ಯಾನರ್ಜಿ ಅವರು ಉಪರಾಷ್ಟ್ರಪತಿ ಧನ್ಕರ್ ಅವರನ್ನು ಅಣಕ ಮಾಡಿ ಅಪಮಾನಗೊಳಿಸಿದ್ದಾರೆ. ಇದಕ್ಕೆ ಸಂಸದ ರಾಹುಲ ಗಾಂಧಿ ಸಮ್ಮತಿ ಕೊಟ್ಟಿದ್ದಾರೆ. ಇವರು ಸಂವಿಧಾನ ಬಾಹಿರವಾಗಿ ರಾಜಕೀಯ ದುರುದ್ದೇಶದಿಂದ ಪ್ರತಿಭಟನೆ ನಡೆಸಿ ಶಾಂತಿ ಭಂಗಗೊಳಿಸಿದ್ದಾರೆ. ಅಲ್ಲದೇ ಉಪ ರಾಷ್ಟ್ರಪತಿ ಹುದ್ದೆಯ ಘನತೆಗೆ ಧಕ್ಕೆ ತಂದಿದ್ದಾರೆ. ಅವರು ಕೃಷಿ ಮೂಲದ ವಿಷಯ ಅಣಕಿಸಿರುವುದು ಭಾರತದ ರೈತರಿಗೆ ಮಾಡಿದ ಅಪಮಾನ. ಪ್ರತಿಭಟನೆ ವೇಳೆ ರಾಹುಲ ಗಾಂಧಿ ಅವರು ವಿಡಿಯೋ ಚಿತ್ರಣ ಮಾಡಿ ಕೃತ್ಯಕ್ಕೆ ಕುಮ್ಮಕ್ಕು ನೀಡಿದ್ದಾರೆ. ಅಣಕು ಕೃತ್ಯ ನೋಡಿ ಸಂಭ್ರಮಿಸಿದ ಎಲ್ಲ ಸಂಸದರು ಭಾರತದ ದಂಡ ಸಂಹಿತೆಯಡಿ ದಂಡಿಸಲ್ಪಡುವ ಅಪರಾಧಗಳಿಗೆ ಅರ್ಹರು. ಹಾಗಾಗಿ ಭಾರತೀಯ ದಂಡ ಸಂಹಿತೆ ಕಲಂ 120(ಎ), 120(ಬಿ), 124, 143, 146, 268, 269, 319, 320, 499, 500 ಅಡಿ ದೂರು ದಾಖಲಿಸಿಕೊಳ್ಳುವಂತೆ ಘಟಕದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಪೊಲೀಸ್ ಇನ್‌ಸ್ಪೆಕ್ಟರ್ ಎಂ.ಎಸ್. ಹೂಗಾರ ಅವರು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಮಹಾನಗರ ಜಿಲ್ಲಾಧ್ಯಕ್ಷ ಸಂಜಯ ಕಪಟಕರ, ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ, ವಕ್ತಾರ ರವಿ ನಾಯಕ, ಪ್ರಭು ನವಲಗುಂದಮಠ, ವಕೀಲರಾದ ಗೋಪಾಲ ಪಾಟೀಲ, ಲಕ್ಷ್ಮಣ ಕುಲಕರ್ಣಿ, ಕೆ.ಎಂ. ಲೋಕೇಶ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net