ಕಾಂಗ್ರೆಸ್ ಶಾಸಕ ರವಿಕುಮಾರ್ ವಿರುದ್ಧ ದೂರು: ಆಧಾರ ರಹಿತ ಆರೋಪಕ್ಕೆ ಬಿಜೆಪಿ ಆಕ್ರೋಶ

Bjp Complaint Mandya
Published on

ಮಂಡ್ಯ: ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಮಧ್ಯವರ್ತಿಗಳು ಕಾಂಗ್ರೆಸ್ ಶಾಸಕರಿಗೆ 100 ಕೋಟಿ ರೂ ಆಫರ್ ನೀಡುತ್ತಾರೆಂದು ಶಾಸಕ ರವಿಕುಮಾರ್ ಗಣಿಗ ಆಧಾರ ರಹಿತವಾದ ಆರೋಪ ಮಾಡಿದ್ದಾರೆ. ಆದ್ದರಿಂದ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಬಿಜೆಪಿ ವತಿಯಿಂದ ಮಂಡ್ಯ ಪಶ್ಚಿಮ ಠಾಣೆಯಲ್ಲಿ ಸೋಮವಾರ ದೂರು ದಾಖಲಿಸಲಾಗಿದೆ.

ಶಾಸಕ ರವಿಕುಮಾರ್ ಗಣಿಗ ಅವರು ಬಿಜೆಪಿ ಕೇಂದ್ರ ನಾಯಕ ಬಿ.ಎಲ್.ಸಂತೋಷ್, ಕೇಂದ್ರ ಸಚಿವರಾದ ಪಹ್ಲಾದ್ ಜೋಷಿ, ಶೋಭಾ ಕರಂದ್ಲಾಜೆ, ಎಚ್.ಡಿ.ಕುಮಾರಸ್ವಾಮಿ ರಾಜ್ಯಕಾಂಗ್ರೆಸ್ ಸರ್ಕಾರ ಪತನಗೊಳಿಸಲು ಆಪರೇಷನ್ ಕಮಲ ಮಾಡಲು ಪ್ರಯತ್ನ ಪಡುತ್ತಿದ್ದಾರೆಂದು ಹೇಳಿಕೆ ನೀಡಿದ್ದಾರೆ. ಮಾತ್ರವಲ್ಲದೆ ಮಧ್ಯವರ್ತಿಗಳು ಕಾಂಗ್ರೆಸ್ ಶಾಸಕರಿಗೆ ಕರೆ ಮಾಡಿ 100 ಕೋಟಿ ರೂ ರೆಡಿ ಇದೇ ಬನ್ನಿ ಎಂದು ಹೇಳುತ್ತಿದ್ದಾರೆಂದು ಆಧಾರ ರಹಿತ ಮಾಹಿತಿ ನೀಡಿದ್ದಾರೆ. ಇದು ಸುಳ್ಳು ಹೇಳಿಕೆಯಾಗಿದ್ದು, ಇದರಿಂದಾಗಿ ಬಿಜೆಪಿ ಪಕ್ಷದ ವರ್ಚಸ್ಸಿಗೆ ತೀವ್ರ ಧಕ್ಕೆಯಾಗುವ ಸಂಭವವಿರುತ್ತದೆ. ಜತೆಗೆ ಜನಮಾನಸದಲ್ಲಿ ಪಕ್ಷ ಹಾಗೂ ನಾಯಕರ ವಿರುದ್ಧ ಕೆಟ್ಟ ಅಭಿಪ್ರಾಯ ಮೂಡುವ ಸಾಧ್ಯತೆ ಇರುತ್ತದೆ. ಪಕ್ಷದ ವಿಶ್ವಾಸಾರ್ಹತೆಗೆ ಧಕ್ಕೆ ತರುವಂತಹ ಕುಟಿಲ ಪ್ರಯತ್ನವಾಗಿರುತ್ತದೆ. ಆದ್ದರಿಂದ ಶಾಸಕ ರವಿಕುಮಾರ್ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಲಾಗಿದೆ.

ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಉಪಾಧ್ಯಕ್ಷ ಶ್ರೀಧರ್, ವಿವೇಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net