

ಮಂಡ್ಯ: ಮಳವಳ್ಳಿಯಲ್ಲಿ ಭಾನುವಾರ ಕಾಂಗ್ರೆಸ್ ಪ್ರತಿಭಟನೆ ವೇಳೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರ ಬಗ್ಗೆ ಹಗುರವಾಗಿ ಮಾತನಾಡಿರುವ ಶಾಸಕ ಪಿ.ಎಂ.ನರೇಂದ್ರಸ್ವಾಮಿ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರಿಗೆ ದೂರು ಸಲ್ಲಿಸಿದರು.
ನಗರದ ಜಿಲ್ಲಾ ಪೊಲೀಸ್ ಭವನಕ್ಕೆ ತೆರಳಿದ ಕಾರ್ಯಕರ್ತರು, ಕೂಡಲೇ ನರೇಂದ್ರಸ್ವಾಮಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದರು. ಸದನದಲ್ಲಿ ಶಾಸಕರಿಗೆ ಕನ್ನಡ ವ್ಯಾಕರಣದ ಬಗ್ಗೆ ಪಾಠ ಮಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಕವಚನ, ಬಹುವಚನ, ಗುಣಸಂಧಿ, ಸವರ್ಣಧೀರ್ಘ ಸಂಧಿಯ ಬಗ್ಗೆ ಹಿತವಚನ ಬೋಧಿಸುತ್ತಾರೆ. ಆದರೆ ಸ್ವಪಕ್ಷದ ಶಾಸಕ ನರೇಂದ್ರಸ್ವಾಮಿಗೆ ಮೊದಲು ವ್ಯಾಕರಣದ ಪಾಠ ಹೇಳಿಕೊಡಬೇಕು ಎಂದು ಟೀಕಿಸಿದರು.
ರಾಷ್ಟ್ರಪತಿಯಿಂದ ನೇಮಕವಾದ ರಾಜ್ಯಪಾಲರು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಂವಿಧಾನ ರಕ್ಷಣೆಯ ಹೊಣೆ ಹೊತ್ತಿದ್ದಾರೆ. ಅಂತಹ ಗೌರವಾನ್ವಿತ ಹುದ್ದೆಯಲ್ಲಿರುವವರ ಬಗ್ಗೆ ಏಕವಚನದಲ್ಲಿ ಮಾತನಾಡಿ ಸಂವಿಧಾನಕ್ಕೆ ಅಗೌರವ ತಂದಿದ್ದಾರೆ. ಜತೆಗೆ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಅವರ ಬಗ್ಗೆಯೂ ಕೀಳು ಮಟ್ಟದ ಭಾಷೆ ಬಳಿಸಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಹೊಸಹಳ್ಳಿ ಶಿವು, ಶಿವಲಿಂಗಯ್ಯ, ನಾಗಾನಂದ, ಶಿವಕುಮಾರ್, ಹನುಮಂತು, ಪ್ರಸನ್ನ, ಚಂದ್ರು ಇದ್ದರು.