

ಶಿವಮೊಗ್ಗ: ರಾಜ್ಯದಲ್ಲಿ ಅನೇಕ ಧರ್ಮಾಧಾರಿತ ಹತ್ಯೆಗಳಾದವು. ಆದರೂ ಬಿಜೆಪಿ ಹೆಣದ ಮೇಲೆ ರಾಜಕೀಯ ಮಾಡುತ್ತಾ ಬಂದಿದೆ ಎಂದು ಮಾಜಿ ಸಚಿವ ರಮಾನಾಥ್ ರೈ ಕಿಡಿಕಾರಿದರು.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ ಹಿಂದುಳಿದ ವರ್ಗದವರ ಮಕ್ಕಳು ಮಾತ್ರ ಸಾಯುತ್ತಾರೆ, ಕೊಲೆ ಆರೋಪದಲ್ಲಿ ಜೈಲಿಗೂ ಹೋಗುತ್ತಾರೆ. ಇಲ್ಲಿ ಪ್ರಚೋದನಕಾರಿ ಭಾಷಣ ಮಾಡುವವರೇ
ಬೇರೆ ಇದ್ದು ಮೊದಲು ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಅಧೀನದ ಸಂಘಟನೆಗಳು ಮತ್ತು ಪಿಎಫ್‌ಐ ಸಂಘಟನೆ ಧರ್ಮಾಧಾರಿತ ಹತ್ಯೆಗಳಿಗೆ ಕಾರಣವಾಗಿವೆ. ಆದರೆ ಕಾಂಗ್ರೆಸ್‌ನ ಒಬ್ಬ ಕಾರ್ಯಕರ್ತನೂ ಈ ಹತ್ಯೆಗಳಲ್ಲಿ ಭಾಗಿಯಾಗಿಲ್ಲ. ಕಾಂಗ್ರೆಸ್‌ನಲ್ಲಿ ಎಲ್ಲ ಜಾತಿ ಧರ್ಮೀಯರಿದ್ದಾರೆ. ಎಫ್‌ಐಆರ್‌ನಲ್ಲಿ ಒಬ್ಬನೇ ಒಬ್ಬ ಕಾಂಗ್ರೆಸ್ ನಾಯಕನ ಹೆಸರಿಲ್ಲ. ಬಿಜೆಪಿ ಹಾಗೂ ಎಸ್‌ಡಿಪಿಐ ಕಾರ್ಯಕರ್ತರ ವಿರುದ್ಧ ಕೊಲೆ ಆರೋಪಗಳಿದ್ದು ಬಿಜೆಪಿ ಪ್ರೇರಿತ ಸಂಘಟನೆ ಕೃತ್ಯಗಳು ಮಾಹಿತಿ ಹಕ್ಕಿನಡಿ ಸಿಗುತ್ತವೆ ಎಂದರು.
ದಕ್ಷಿಣಕನ್ನಡದಲ್ಲಿ ಗುಪ್ತಚರ ಇಲಾಖೆ ವೈಫಲ್ಯ: ದಕ್ಷಿಣಕನ್ನಡ ಜಿಲ್ಲೆಯಲ್ಲಿ ವಾರದೊಳಗೆ ಮೂರು ಕೊಲೆಗಳಾದವು. ಇದು ಗುಪ್ತಚರ ಇಲಾಖೆ ವೈಫಲ್ಯವಾಗಿದೆ. ಹಾಗಾಗಿ ಮಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಮುಖ್ಯಮಂತ್ರಿ ಬಸವರಾಜ್
ಬೊಮ್ಮಾಯಿ ಅವರು ಸಂತ್ರಸ್ತರ ಮನೆಗೆ ಭೇಟಿ ನೀಡುವಲ್ಲೂ ತಾರತಮ್ಯ ಮಾಡಿದ್ದಾರೆ ಎಂದು ರಮಾನಾಥ್ ರೈ ದೂರಿದರು. ಟಿಪ್ಪುಸುಲ್ತಾನ್ ಜಯಂತಿ ಸಂದರ್ಭದಲ್ಲಿ ಯಾರಾದರೂ ಒಬ್ಬ ಸಾಯಲೇಬೇಕೆಂಬ ಸ್ಥಿತಿ ನಿರ್ಮಾಣವಾಗಿತ್ತು. ಅದೇ ವೇಳೆ ದಾರಿಯಲ್ಲೇ ಹರೀಶ್ ಪೂಜಾರಿ ಹತ್ಯೆ ಮಾಡಲಾಯಿತು. ಬಿಜೆಪಿ ಈ ಘಟನೆ ಬಗ್ಗೆ ಭರ್ಜರಿ ಪ್ರಚಾರ ಮಾಡಿತು. ಈ ಕೊಲೆಯನ್ನು ಕೋಮುಗಲಭೆ ಎಂದು ಹೇಳಿ ಅದನ್ನು ಕಾಂಗ್ರೆಸ್ ತಲೆಗೆ ಕಟ್ಟಲಾಯಿತು. ತನಿಖೆ ನಂತರ ಬಿಜೆಪಿ ಹುಡುಗರೇ ಮಾಡಿದ್ದು ಎಂದು ಖಾತ್ರಿಯಾಯಿತು. ಹಿಂದೂ ಸಂಘಟನೆಗಳ ಕಾರ್ಯಕರ್ತರೇ ಹತ್ಯೆ ಮಾಡಿದ್ದರು ಎಂದರು.
ಕೊಲೆ, ಸುಲಿಗೆ ನಂತರ ಜನರು ಮಂಗಳೂರಿನವರಿಗೆ ಗೌರವ ಕೊಡುತ್ತಿಲ್ಲ. ಕಾಂಗ್ರೆಸ್ ಸಾಮರಸ್ಯ ಸಮಾವೇಶ, ನಡಿಗೆ ಮಾಡಿದರೂ ಉಪಯೋಗವಾಗಿಲ್ಲ. ಪ್ರಚೋದನೆ ನಿಲ್ಲಿಸದ ಹೊರತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ನೆಲೆಸುವುದಿಲ್ಲ. ಮೂವರನ್ನು ಹತ್ಯೆ ಮಾಡಿದ ಸೂತ್ರಧಾರರನ್ನು ಮೊದಲು ಬಂಧಿಸಬೇಕು. ಸೂತ್ರಧಾರಿಗಳನ್ನು ಮತ್ತು ಪ್ರಚೋದನಾಕಾರಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.