ಪ್ರಧಾನಿ ನರೇಂದ್ರ ಮೋದಿ ಜನ್ಮದಿನ ಹಿನ್ನೆಲೆ: ಬಿಜೆಪಿಯಿಂದ 75 ಯೂನಿಟ್ ರಕ್ತಸಂಗ್ರಹ

BJP collects 75 units of blood Mandya
Published on

ಮಂಡ್ಯ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ 75 ಯೂನಿಟ್ ರಕ್ತಸಂಗ್ರಹ ಮಾಡಲಾಯಿತು. ಪಕ್ಷದ ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.

ಶಿಬಿರಕ್ಕೆ ಚಾಲನೆ ನೀಡಿದ ರಾಜ್ಯಸಭಾ ಸದಸ್ಯ ಲೆಹರ್‌ಸಿಂಗ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕಾಗಿ ಹಗಲಿರುಳು ದುಡಿಯುತ್ತಿದ್ದಾರೆ. ಅವರ ಜನ್ಮದಿನದಂದು ದೇಶದ ಯುವ ಸಮೂಹ ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡುವ ಮೂಲಕ ಮತ್ತಷ್ಟು ಹುರುಪು ತುಂಬುವ ಕೆಲಸ ಮಾಡುತ್ತಿದ್ದಾರೆ. ಅ.2ರವರೆಗೆ ಸೇವಾ ಪಾಕ್ಷಿಕವಾಗಿ ಆಚರಿಸಲಾಗುತ್ತಿದೆ ಎಂದರು.

ವೈದ್ಯಕೀಯ ಪ್ರಕೋಷ್ಠ ರಾಜ್ಯ ಸಹ ಸಂಚಾಲಕ ಡಾ.ಸದಾನಂದ್ ಮಾತನಾಡಿ, ಮೋದಿ ಅವರ ಅಧಿಕಾರಾವಧಿಯಲ್ಲಿ ವಿಶ್ವವೇ ತಿರುಗಿ ನೋಡುವಷ್ಟರ ಮಟ್ಟಿಗೆ ಭಾರತದಲ್ಲಿ ಅಭಿವೃದ್ಧಿಯ ಪರ್ವ ನಡೆಯುತ್ತಿದೆ. ಹಲವಾರು ಮಹತ್ತರವಾದ ಮಾನವೀಯ ಯೋಜನೆಯನ್ನು ಜಾರಿಗೊಳಿಸುತ್ತಿದ್ದಾರೆ. ಬಡವರ, ತುಳಿತಕ್ಕೊಳಗಾದ ಮತ್ತು ವಂಚಿತ ವರ್ಗಗಳ ಸಬಲೀಕರಣ, ರೈತರ ಕಲ್ಯಾಣ ಪ್ರಧಾನಿಯವರ ಆದ್ಯತೆಯಾಗಿದೆ. ಸೆ.24ರವರೆಗೆ ಶಾಲೆ ಮತ್ತು ಆಸ್ಪತ್ರೆ ಆವರಣದಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಗುತ್ತದೆ. ಅಂಗವಿಕಲರಿಗೆ ಉಚಿತವಾಗಿ ಸಲಕರಣೆ ವಿತರಣೆ, ಕ್ರೀಡಾಪಟುಗಳನ್ನು ಗೌರವಿಸುವುದು, ಆಯುಷ್ಮಾನ್ ಭಾರತ್ ಯೋಜನೆಯ ಪ್ರಾರಂಭದ ದಿನವಾದ ಸೆ.23ರಂದು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 60 ವರ್ಷ ಮೇಲ್ಪಟ್ಟ ವೃದ್ಧ ಮಹಿಳೆಯರಿಗೆ ಆರೋಗ್ಯ ಉಚಿತ ತಪಾಸಣೆ ಶಿಬಿರಗಳ ಆಯೋಜನೆ ಮಾಡಲಾಗುವುದು ಎಂದರು.

ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ವಿಶ್ವದ ನಾಯಕರಲ್ಲಿ ಅಗ್ರಗಣ್ಯರಾಗಿದ್ದಾರೆ. ಭಾರತದ ಎಲ್ಲ ಕ್ಷೇತ್ರಗಳಲ್ಲೂ ಉತ್ತಮ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ರಸ್ತೆಗಳು, ಜನರ ಜೀವನಮಟ್ಟ ಸುಧಾರಣೆ ಸೇರಿದಂತೆ ಹತ್ತು ಹಲವು ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ನಾವು ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ಮುಖಂಡರಾದ ಫಣೀಶ್, ಧನಂಜಯ, ವಿವೇಕ್, ನಿತ್ಯಾನಂದ, ವಸಂತ್‌ಕುಮಾರ್, ಕೆಂಪಬೋರಯ್ಯ, ಆನಂದ್, ಕೃಷ್ಣ ಅಂಕಪ್ಪ, ಗೊರವಾಲೆ ಶಿವಣ್ಣ, ಚಂದ್ರು, ಶಿವಲಿಂಗಯ್ಯ, ಪ್ರಸನ್ನಕುಮಾರ್, ನವೀನ್, ಮಂಜುನಾಥ್, ಮಹೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net