ಮುಡಾ ಹಗರಣದ ವಿರುದ್ಧ ಹೋರಾಟಕ್ಕೆ ಸಜ್ಜಾಗಿ: ಬಿಜೆಪಿ ನಗರಾಧ್ಯಕ್ಷ ವಸಂತ್‌ಕುಮಾರ್ ಕರೆ

BJP city executive meeting Mandya
Published on

ಮಂಡ್ಯ: ಮೈಸೂರಿನ ಮುಡಾದಲ್ಲಿ ನಡೆದಿರುವ ಹಗರಣ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್‌ನಿಂದ ಹಮ್ಮಿಕೊಂಡಿರುವ ಹೋರಾಟಕ್ಕೆ ಕಾರ್ಯಕರ್ತರು ಸಜ್ಜಾಗಬೇಕು ಎಂದು ಬಿಜೆಪಿ ನಗರಾಧ್ಯಕ್ಷ ವಸಂತ್‌ಕುಮಾರ್ ಕರೆ ನೀಡಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಗರ ಮೋರ್ಚಾದಿಂದ ಆಯೋಜಿಸಿದ್ದ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆ.3ರಿಂದ ಬೆಂಗಳೂರಿನಿಂದ ಪಾದಯಾತ್ರೆ ನಡೆಯಲಿದೆ. ಮಂಡ್ಯ ನಗರದಲ್ಲಿ ಅದ್ಧೂರಿಯಾಗಿ ಸ್ವಾಗತಿಸಬೇಕು ಎಂದರು.

ಮುಂದಿನ ಸ್ಥಳೀಯ ನಗರಸಭೆ ಮತ್ತು ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸುವುದೇ ಬಿಜೆಪಿಯ ಧ್ಯೇಯವಾಗಿದೆ. ಈ ಹಿನ್ನೆಲೆಯಲ್ಲಿ ಈಗಿನಿಂದಲೇ ಬೂತ್‌ಮಟ್ಟದಲ್ಲಿ ಸೇವಾಕಾರ್ಯ ಸಾಗಲಿ, ಆಕಾಂಕ್ಷಿತ ಅಭ್ಯರ್ಥಿಗಳು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ಗೆಲುವಿಗೆ ಶ್ರಮಪಡಿಸಲಿ ಕಾರ್ಯಕರ್ತರು ಸಾಥ್ ನೀಡಲಿ. ಕೇಂದ್ರ ಮತ್ತು ರಾಜ್ಯ ಸಮಿತಿ ಸೂಚಿಸುವ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದು ವರದಿ ಸಲ್ಲಿಸಬೇಕು, ಸಂಘಟನೆಯನ್ನು ಮತ್ತಷ್ಟು ವಿಸ್ತಾರಗೊಳಿಸಲು ಶ್ರಮಿಸೋಣ ಎಂದು ಕೋರಿದರು.

ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಿದೆ. ಸಾಕಷ್ಟು ನಿಗಮ-ಮಂಡಳಿಗಳಲ್ಲಿ ನಡೆದಿರುವ ಕೋಟ್ಯಂತರ ರೂ ದುರುಪಯೋಗ ಮತ್ತು ಸಮುದಾಯಕ್ಕೆ ನಿಗಧಿಗೊಳಿಸಿರುವ ಹಣವನ್ನು ಅನ್ಯಕಾರ್ಯಗಳಿಗೆ ಬಳಿಸಿಕೊಳ್ಳುತ್ತಿರುವುದನ್ನು ಜನರಿಗೆ ತಿಳಿಸಿಬೇಕಿದೆ ಎಂದು ಹೇಳಿದರು.

ಮಾಜಿ ನಗರಾಧ್ಯಕ್ಷ ಎಚ್.ಆರ್.ಅರವಿಂದ್, ಸ್ಥಳೀಯ ಚುನಾವಣೆಯಲ್ಲಿ ಎಲ್ಲಿ ಬಿಜೆಪಿ ಗೆಲ್ಲುತ್ತದೋ ಅಂತಹ ವಾರ್ಡ್ ಮತ್ತು ಕ್ಷೇತ್ರಗಳನ್ನು ಗುರುತಿಸಿ ಗೆಲ್ಲಿಸಿಕೊಳ್ಳಲು ಶ್ರಮ ಹಾಕಬೇಕು. ಈ ಚುನಾವಣೆ ಕಾರ್ಯಕರ್ತರ ಹಬ್ಬದಂತೆ ನೋಡಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯೆ ಸುಜಾತಾಕೃಷ್ಣ, ಜಿಲ್ಲಾ ಕಾರ್ಯದರ್ಶಿ ವಿವೇಕ್, ಪದಾಧಿಕಾರಿಗಳಾದ ಚಾಮರಾಜು, ಬಿ.ಕೃಷ್ಣ, ಹನುಮಂತು, ನೃಪತುಂಗ, ಶಂಕರ್, ಕ್ರಾಂತಿ ಮಂಜು, ಪ್ರಸನ್ನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net