

ಮೊಳಕಾಲ್ಮೂರು: ರಾಜಕೀಯ ಕ್ಷೇತ್ರಕ್ಕೆ ಎಂದೂ ಕಳಂಕ ತರದೆ ದೇಶದ ಉನ್ನತಿಗೆ ಹಲವು ಪ್ರಗತಿಪರ ಯೋಜನೆಗಳನ್ನ ಜಾರಿಗೆ ತಂದ ಮುತ್ಸದ್ಧಿ ರಾಜಕಾರಣಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅವಿರತ ಸೇವೆ ಎಂದಿಗೂ ಮರೆಯಲಾಗದು ಎಂದು ಬಿಜೆಪಿ ಮಂಡಲ ಅಧ್ಯಕ್ಷ ಡಾ.ಪಿ.ಎಂ.ಮಂಜುನಾಥ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ದಿವಂಗತ ಮಾಜಿ ಪ್ರಧಾನಿ ಅಟಲ್ಜಿ ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಚಿಕ್ಕ ವಯಸ್ಸಿನಲ್ಲೇ ಶಿಸ್ತು, ಸಹನೆ, ಸಂಯಮದಿಂದ ದೇಶದ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದ ಅವರು ರಾಜಕೀಯ ಕ್ಷೇತ್ರದಲ್ಲಿ ಜನ ಸೇವೆಯಲ್ಲಿ ತೊಡಗಿಸಿಕೊಂಡು ಜನಮನ್ನಣೆ ಪಡೆದರು ಎಂದರು.
ಸುವರ್ಣ ಚತುಷ್ಪಥ ರಸ್ತೆ, ಗ್ರಾಮ ಸಡಕ್ ಯೋಜನೆ, ಸರ್ವಶಿಕ್ಷಣ ಅಭಿಯಾನ ಹಾಗೂ ಪೋಖ್ರಾನ್ ಅಣು ಪರೀಕ್ಷೆಗಳನ್ನ ನಡೆಸಿ ಭಾರತದ ಶಕ್ತಿಯ ವಿಕಾಸವನ್ನು ವಿಶ್ವಮಟ್ಟಕ್ಕೆ ಪರಿಚಯಿಸಿದರು ಎಂದು ತಿಳಿಸಿದರು.
ಪಪಂ ಮಾಜಿ ಅಧ್ಯಕ್ಷ ಟಿ.ರವಿಕುಮಾರ ಮಾತನಾಡಿ, ಗ್ರಾಮೀಣ ಜನರ ಸಬಲೀಕರಣಕ್ಕಾಗಿ ಹತ್ತು ಹಲವು ಕಲ್ಯಾಣ ಕಾರ್ಯಗಳನ್ನು ಜಾರಿಗೆ ತರುವ ಮೂಲಕ ಕಟ್ಟ ಕಡೆಯ ಸಾಮಾನ್ಯ ವ್ಯಕ್ತಿಗೂ ಸಾಮಾಜಿಕ ನ್ಯಾಯವನ್ನು ಕೊಡಿಸಿದ ವಾಜಪೇಯಿ ಮೇರು ವ್ಯಕ್ತಿತ್ವದ ಸಜ್ಜನ ರಾಜಕಾರಣಿಯಾಗಿದ್ದರು ಎಂದರು.
ವೈಯಕ್ತಿಕ ಪ್ರತಿಷ್ಠೆ ಹಾಗೂ ಸ್ವ-ಹಿತಾಸಕ್ತಿಗಾಗಿ ಅಧಿಕಾರವನ್ನು ಎಂದಿಗೂ ಬಳಸಿಕೊಂಡವರಲ್ಲ. ದೇಶವೆ ನನ್ನ ಉಸಿರೆಂದು ಆದರ್ಶ ಗುಣಗಳನ್ನ ಮೈಗೂಡಿಸಿಕೊಂಡಿದ್ದರು. ಅವರ ಸ್ಮರಣೆ ಅತ್ಯಂತ ಆದರ್ಶ ಪ್ರಾಯವಾದದ್ದು ಎಂದು ಹೇಳಿದರು.
ಪಪಂ ಸದಸ್ಯರಾದ ಮಂಜುನಾಥ, ಪ್ರಭಾಕರ, ಸಿದ್ದಾರ್ಥ, ಸಿದ್ದಣ್ಣ, ಪೃಥ್ವಿರಾಜ್, ಅರ್ಜುನ, ರಾಮಾಂಜಿನೇಯ, ಭೀಮಣ್ಣ, ತಿಪ್ಪೇಸ್ವಾಮಿ, ಬಸವರಾಜ, ಕುಮಾರ ಇತರರಿದ್ದರು.