ಹರಿಯಾಣ ಚುನಾವಣೆಯಲ್ಲಿ ಗೆಲುವು: ನಗರದಲ್ಲಿ ಬಿಜೆಪಿ ಸಂಭ್ರಮಾಚರಣೆ

BJP celebration Mandya
Published on

ಮಂಡ್ಯ: ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕಾರ್ಯಕರ್ತರು ನಗರದಲ್ಲಿ ಸಂಭ್ರಮಾಚರಣೆ ನಡೆಸಿದರು.

ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು, ಪರಸ್ಪರ ಹಾಗೂ ಸಾರ್ವಜನಿಕರಿಗೆ ಸಿಹಿ ವಿತರಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಪಕ್ಷದ ನಾಯಕರಿಗೆ ಜೈಕಾರ ಕೂಗುವ ಮೂಲಕ ಸಂಭ್ರಮಿಸಿದರು.

ಮಾಜಿ ನಗರಾಧ್ಯಕ್ಷ ಎಚ್.ಆರ್.ಅರವಿಂದ್ ಮಾತನಾಡಿ, ಹರಿಯಾಣದಲ್ಲಿ ಬಿಜೆಪಿ ಗೆಲುವು ಹರ್ಷ ತಂದಿದೆ. ಅದೇ ರೀತಿ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಯನ್ನು ಜನರು ತಿರಸ್ಕರಿಸಿದ್ದಾರೆ. ಹರಿಯಾಣದಲ್ಲಿ ಬಿಜೆಪಿ ಧೂಳಿಪಟ ಆಗುತ್ತದೆ ಎಂದು ವಿಪಕ್ಷಗಳು ಬೊಬ್ಬೆ ಹಾಕುತ್ತಿದ್ದವು. ಆದರೆ ಬಿಜೆಪಿ ಸತತವಾಗಿ 3ನೇ ಬಾರಿಗೆ ಅಧಿಕಾರದತ್ತ ದಾಪುಗಾಲು ಇಟ್ಟಿದೆ. ಜನಾಶೀರ್ವಾದಿಂದ 3ನೇ ಬಾರಿ ಬಿಜೆಪಿ ಅಧಿಕಾರ ಲಭ್ಯವಾಗಿದೆ ಎನ್ನುವುದು ಸಂತೋಷದ ವಿಷಯವಾಗಿದೆ ಎಂದರು.

ಹರಿಯಾಣ ರಾಜ್ಯದಲ್ಲಿ ಒಟ್ಟು 90 ವಿಧಾನಸಾಭಾ ಕ್ಷೇತ್ರಗಳಲ್ಲಿ ಬಿಜೆಪಿ 47 ಕ್ಷೇತ್ರದಲ್ಲಿ ಗೆಲುವು ಸಾಧಿಸಿ ಬಹುಮತ ಪಡೆದಿದೆ. ಈ ಮೂಲಕ ಕಾಂಗ್ರೆಸ್ ಹೀನಾಯವಾಗಿ ಸೋಲೋಪ್ಪಿಕೊಂಡಿದೆ. ಜಮ್ಮು-ಕಾಶ್ಮೀರ ರಾಜ್ಯದಲ್ಲಿ ಬಿಜೆಪಿ ಗೆಲ್ಲಬೇಕಿತ್ತು. ರಾಜ್ಯದ ಅಭಿವೃದ್ದಿಗಾಗಿ 370ನೇ ಕಾಲಂ ತೆಗೆದು ಸಾಕಷ್ಟು ಯೋಜನೆ ಜಾರಿ ಮಾಡಲಾಗಿತ್ತು. ಅಲ್ಲಿನ ಭಾರತೀಯರ ಮಾನ-ಪ್ರಾಣ, ಉದ್ಯೋಗ ಕ್ಷೇತ್ರಕ್ಕೆ ಹೆಚ್ಚು ಮಹತ್ವ ನೀಡಲಾಗಿತ್ತು. ಆದರೆ 90 ವಿಧಾನಸಭಾ ಕ್ಷೇತ್ರಗಳಲ್ಲಿ 28 ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದೆ ಎಂದರು.

ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲೂ ಬಿಜೆಪಿ ಜಯ ಗಳಿಸಲಿದೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಅವರು ಮುಡಾ ಹಗರಣದಿಂದ ಪಾರಾಗಲು ಜನಗಣತಿ ಬಗ್ಗೆ ಮಾತನಾಡುತ್ತಿದ್ದಾರೆ. ತಮ್ಮ ತಪ್ಪುಗಳನ್ನು ಮುಚ್ಚಿಸಲು ಜನರ ಮನಸ್ಸನ್ನು ಬೇರೆ ಕಡೆಗೆ ತಿರುಗಿಸುತ್ತಿದ್ದಾರೆ. ಇಂತಹ ಗಿಮಿಕ್ ಬಿಟ್ಟು ಸಿಎಂ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಿ, ಮುಡಾ ಹಗರಣದ ತನಿಖೆ ಎದುರಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಮಾಧ್ಯಮ ವಕ್ತಾರ ಸಿ.ಟಿ.ಮಂಜುನಾಥ್, ವಕೀಲ ಕ್ರಾಂತಿ ಮಂಜು, ನಗರಸಭಾ ಮಾಜಿ ಸದಸ್ಯರಾದ ಪ್ರಸನ್ನ, ಚಂದ್ರ, ಸಿದ್ದರಾಜು, ಹೊಸಹಳ್ಳಿ ಶಿವು, ಶಿವಲಿಂಗು, ನಂದೀಶ್, ಆನಂದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net