

ಆಲೂರು: ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸತತ ಮೂರನೇ ಬಾರಿಗೆ ಅಧಿಕಾರ ಹಿಡಿದ ಹಿನ್ನೆಲೆಯಲ್ಲಿ ತಾಲೂಕಿನ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಪಟ್ಟಣದ ಬಸ್ ನಿಲ್ದಾಣದ ಮುಂಭಾಗ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದ ಕಾರ್ಯಕರ್ತರು, ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು, ಅಭಿವೃದ್ಧಿ ಪರವಾದ ಆಡಳಿತ ಮೆಚ್ಚಿ ಹರಿಯಾಣ ಮತದಾರರು ಮತ್ತೊಮ್ಮೆ ಅಧಿಕಾರ ನೀಡಿದ್ದಾರೆ ಎಂದು ನರೇಂದ್ರ ಮೋದಿಗೆ ಜೈಕಾರ ಕೂಗಿ ಸಂತಸ ವ್ಯಕ್ತಪಡಿಸಿದರು.
ಬಿಜೆಪಿ ತಾಲೂಕು ಮಾಜಿ ಅಧ್ಯಕ್ಷ ನಾಗರಾಜ ಹುಲ್ಲಹಳ್ಳಿ ಮಾತನಾಡಿ, ಜಮ್ಮು-ಕಾಶ್ಮೀರದಲ್ಲೂ ಮತದಾರರು ಹಿಂದಿಗಿಂತ ಈಗ ಬಿಜೆಪಿಗೆ ಹೆಚ್ಚಿನ ಸ್ಥಾನ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ಎಲ್ಲೆಡೆ ಕಮಲ ಅರಳಲಿದೆ. ಇದೇ ರೀತಿ ಮುಂದೆ ನಡೆಯುವ ಮಹಾರಾಷ್ಟ್ರ ಚುನಾವಣೆಯಲ್ಲೂ ಬಿಜೆಪಿಯೇ ಜಯಭೇರಿ ಬಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ತಾಲೂಕು ಅಧ್ಯಕ್ಷೆ ಉಮಾ ರವಿಪ್ರಕಾಶ್, ಮಾಜಿ ಅಧ್ಯಕ್ಷ ಕದಾಳು ಲೋಕೇಶ್, ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಖಜಾಂಚಿ ಹೇಮಂತ್, ಕಸಬಾ ಅಧ್ಯಕ್ಷ ನಟರಾಜ್, ನಗರ ಅಧ್ಯಕ್ಷ ಲೋಹಿತ್, ಬಿಜೆಪಿ ಮುಖಂಡರಾದ ಹನುಮಂತೇಗೌಡ, ನವೀನ್, ಮಾವನೂರು ಮೋಹನ್, ಕಿರಣ್, ಗಣೇಶ್, ನಂಜುಂಡಪ್ಪ, ಹರೀಶ್, ನಿತಿನ್ ಇತರರು ಹಾಜರಿದ್ದರು.