ಪುರಸಭೆ ಅನರ್ಹತೆ ಆದೇಶ ಸ್ವಾಗತಿಸಿ ಬಿಜೆಪಿ ವಿಜಯೋತ್ಸವ

04-FEB-GPT-3
ಗುಂಡ್ಲುಪೇಟೆ ಬಿಜೆಪಿ ಪುರಸಭೆ ಸದಸ್ಯರು ಕಾಂಗ್ರೆಸ್‌ಗೆ ಹೋಗಿದ್ದ ಬಿಜಿಪಿಯ ಐವರು ಸದಸ್ಯರ ಅನರ್ಹತೆಗೊಳಿಸಿದ ಜಿಲ್ಲಾಧಿಕಾರಿ ಕ್ರಮ ಬೆಂಬಲಿಸಿ ವಿಜಯೋತ್ಸವ ಆಚರಿಸಿದರು. ಪಿ.ಗಿರೀಶ್, ನಾಗೇಶ್, ಕುಮಾರ್, ಮಲ್ಲೇಶ್ ಇದ್ದರು.
Published on

ಗುಂಡ್ಲುಪೇಟೆ: ಪಕ್ಷದ ವಿಪ್ ಉಲ್ಲಂಘಿಸಿ ಕಾಂಗ್ರೆಸ್‌ಗೆ ಹೋಗಿದ್ದ ಬಿಜಿಪಿಯ ಐವರು ಸದಸ್ಯರ ಅನರ್ಹತೆಗೊಳಿಸಿ ಜಿಲ್ಲಾಧಿಕಾರಿ ಆದೇಶ ಮಾಡಿರುವುದನ್ನು ಸ್ವಾಗತಿಸಿ ಬಿಜೆಪಿ ಪುರಸಭೆ ಸದಸ್ಯರು ಮಂಗಳವಾರ ಪಟ್ಟಣದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

ಹಳೇ ಬಸ್ ನಿಲ್ದಾಣದಿಂದ ಪುರಸಭೆವರೆಗೆ ಮೆರವಣಿಗೆ ಸಾಗಿದ ಸದಸ್ಯರು ಹಾಗೂ ಮುಖಂಡರು ಪಟಾಕಿ ಸಿಡಿಸಿ ಪಕ್ಷಾಂತರಿಗಳಿಗೆ ತಕ್ಕ ಶಿಕ್ಷೆಯಾಗಿರುವ ಬಗ್ಗೆ ಸಂಭ್ರಮಿಸಿದರು.

ಈ ವೇಳೆ ಪುರಸಭೆ ಮಾಜಿ ಅಧ್ಯಕ್ಷ ಪಿ.ಗಿರೀಶ್ ಮಾತನಾಡಿ, ಹಿಂದೆ ಬಿಜೆಪಿ ಸರ್ಕಾರ ಅದಿಕಾರದಲ್ಲಿದ್ದಾಗ ಮಾಜಿ ಶಾಸಕರ ಹಿಂದೆ ಮುಂದೆ ಸುತ್ತಾಡುತ್ತ ಎಲ್ಲ ಸವಲತ್ತುಗಳನ್ನು ಪಡೆದುಕೊಂಡಿದ್ದ ಐವರು ಸದಸ್ಯರನ್ನು ಸೆಳೆಯುವ ಮೂಲಕ ಕಾಂಗ್ರೆಸ್ ವಾಮಮಾರ್ಗದಿಂದ ಅಧಿಕಾರ ಹಿಡಿದಿತ್ತು. ಪಕ್ಷಾಂತರಿಗಳ ಸದಸ್ಯತ್ವ ರದ್ದುಗೊಳಿಸುವುದಾಗಿ ತಾವು ಅಂದು ಮಾಡಿದ್ದ ಶಪಥ ಈಗ ಈಡೇರಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ, ಶಾಸಕರು ಹಾಗೂ ಸಂಸದರು ನಮ್ಮ ಪಕ್ಷದವರೇ ಆಗಿರುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದು ಎದೆಯುಬ್ಬಿಸಿ ಓಡಾಡುತ್ತಿದ್ದವರು ಆದೇಶ ಬಂದ ನಂತರ ಕಾಣೆಯಾಗಿದ್ದಾರೆ. ಪಕ್ಷಾಂತರ ನಿಷೇಧ ಕಾಯ್ದೆ ಪ್ರಕಾರ ಜಿಲ್ಲಾಧಿಕಾರಿ ಪಕ್ಷಾಂತರಿ ಸದಸ್ಯರನ್ನು ಅನರ್ಹಗೊಳಿಸಿ ದಿಟ್ಟ ನಿರ್ದಾರ ಕೈಗೊಂಡಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅನರ್ಹತೆಗೆ ಒಳಗಾದವರು ಮುಂದಿನ ದಿನಗಳಲ್ಲಿ ನ್ಯಾಯಾಲಯದ ಮೆಟ್ಟಿಲೇರಿದರೂ ತಾವು ಅದನ್ನು ಸಮರ್ಥವಾಗಿ ಎದುರಿಸುತ್ತೇವೆ ಎಂದರು.

ಸದಸ್ಯರಾದ ನಾಗೇಶ್, ಕುಮಾರ್, ಮಹದೇವಮ್ಮ, ದೀಪಿಕಾ, ಪಟ್ಟಾಭಿ, ಬಿಜೆಪಿ ಮಾಜಿ ಮಂಡಲಾಧ್ಯಕ್ಷ ಎನ್. ಮಲ್ಲೇಶ್, ಮುಖಂಡರಾದ ವೆಂಕಟೇಶ್, ಸುರೇಶ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net