

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದ ಸದಸ್ಯ ಪ್ರಲ್ಹಾದ ಜೋಶಿ ಅವರು ಕೇಂದ್ರದಲ್ಲಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.
ನಗರದ ನ್ಯೂ ಕಾಟನ್ ಮಾರ್ಕೆಟ್, ದುರ್ಗದಬೈಲ್ ಸೇರಿ ವಿವಿಧ ಕಡೆಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮ ಪಟ್ಟರು.
ಇಲ್ಲಿಯ ದುರ್ಗದಬೈಲ್ನಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಮೂರನೇ ಬಾರಿ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನರೇಂದ್ರ ಮೋದಿ ಹಾಗೂ ಎರಡನೇ ಬಾರಿ ಕೇಂದ್ರ ಸಚಿವರಾಗಿ ಪ್ರಮಾಣ ಸ್ವೀಕರಿಸಿದ ಪ್ರಲ್ಹಾದ ಜೋಶಿ ಅವರ ಪರ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು.
ಭಾರತಮಾತಾ ಕೀ ಜೈ, ದೇಶಕ್ಕೆ ಮೋದಿ, ಧಾರವಾಡಕ್ಕೆ ಜೋಶಿ ಘೋಷಣೆಗಳನ್ನು ಮೊಳಗಿಸಿದರು. ನರೇಂದ್ರ ಮೋದಿ ಹಾಗೂ ಪ್ರಲ್ಹಾದ ಜೋಶಿ ಅವರ ಭಾವಚಿತ್ರಗಳನ್ನು ಹಿಡಿದು ಜೈಕಾರ ಕೂಗಿದರು. ಪರಸ್ಪರ ಸಿಹಿ ತಿನ್ನಿಸಿ ಖುಷಿ ಹಂಚಿಕೊಂಡರು. ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಬಿಜೆಪಿ ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ವತಿಯಿಂದ ನಡೆದ ವಿಜಯೋತ್ಸವದಲ್ಲಿ ಪ್ರಭು ನವಲಗುಂದಮಠ, ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ, ಬಸವರಾಜ ಅಮ್ಮಿನಬಾವಿ, ರಂಗಾ ಬದ್ದಿ, ಸತೀಶ ಶೇಜವಾಡಕರ, ಅನೂಪ ಬಿಜವಾಡ, ವಿಜಯ ಗುಂಟ್ರಾಳ, ಪ್ರಕಾಶ ಬುರಬುರೆ, ರಾಜು ಜರತಾರರ, ಲಕ್ಷ್ಮೀಕಾಂತ ಘೋಡಕೆ, ಇತರರು ಇದ್ದರು.