

ಮಂಡ್ಯ: ಕಾವೇರಿ ಕಣಿವೆ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪಕ್ಷದ ಕಾರ್ಯಕರ್ತರು ಸೋಮವಾರ ನಗರದಲ್ಲಿ ಚಡ್ಡಿ ಚಳವಳಿ ನಡೆಸಿದರು.
ಜಿಲ್ಲಾ ಬಿಜೆಪಿ ಕಚೇರಿಯಿಂದ ರಾಜ್ಯಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಹಾಗೂ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ನೇತೃತ್ವದಲ್ಲಿ ಕಾರ್ಯಕರ್ತರು ರಾಸುಗಳ ಜತೆ ಚಡ್ಡಿ ಮೆರವಣಿಗೆ ಹೊರಟು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿಯ ಧರಣಿ ಸ್ಥಳಕ್ಕೆ ತೆರಳಿದ ಪ್ರತಿಭಟನಾಕಾರರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಿರುದ್ಧ ಕಿಡಿಕಾರಿದರು. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶ ನೀಡುವ ಮುನ್ನವೇ ರಾಜ್ಯ ಕಾಂಗ್ರೆಸ್ ಸರ್ಕಾರ, ಕಾವೇರಿಕಣಿವೆ ಜಲಾಶಯಗಳಿಂದ ತ.ನಾಡಿಗೆ ನೀರು ಬಿಡುಗಡೆ ಮಾಡುವ ದುಡುಕಿನ ನಿರ್ಧಾರ ಕೈಗೊಂಡಿದ್ದರಿಂದ ನಮ್ಮ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಾತ್ರವಲ್ಲದೆ ಜಲಾಶಯಗಳಲ್ಲಿ ನೀರು ಬರೆದಾಗುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ರಾಜ್ಯಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ಮುಖಂಡರಾದ ಇಂಡುವಾಳು ಸಚ್ಚಿದಾನಂದ, ಡಾ.ಇಂದ್ರೇಶ್, ಎಸ್.ಪಿ.ಸ್ವಾಮಿ, ಮುನಿರಾಜು, ಅಶೋಕ್ ಜಯರಾಂ, ಸಿ.ಟಿ.ಮಂಜುನಾಥ್, ಶಿವಕುಮಾರ್ ಆರಾಧ್ಯ, ಸಿದ್ದರಾಜುಗೌಡ, ನವನೀತ್‌ಗೌಡ ಇತರರಿದ್ದರು.