ಬಿಜೆಪಿಗೆ ಅಂಬೇಡ್ಕರ್​ ಹೆಸರು ನುಂಗಲಾರದ ತುತ್ತು.!

123
Published on

ಕೋಲಾರ: ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್​ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರನ್ನು ಸಂಪುಟದಿಂದ ಉಚ್ಚಾಟಿಸಬೇಕು. ಸಚಿವೆ ಲಕ್ಷಿ$್ಮ ಹೆಬ್ಬಾಳ್ಕರ್​ ಅವರನ್ನು ನಿಂದಿಸಿರುವ ವಿಧಾನ ಪರಿಷತ್​ ಸದಸ್ಯ ಸಿ.ಟಿ.ರವಿ ಅವರನ್ನು ವಜಾ ಗೊಳಿಸಬೇಕೆಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್​ ಘಟಕದಿಂದ ಶನಿವಾರ ನಗರದ ಮೆಕ್ಕೆ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಜಿಲ್ಲಾ ಕಾಂಗ್ರೆಸ್​ ಕಾರ್ಯಾಧ್ಯಕ್ಷ ಊರಬಾಗಿಲು ಶ್ರೀನಿವಾಸ್​ ಮಾತನಾಡಿ, ದೇಶದಲ್ಲಿ ಸಂಘ ಪರಿವಾರದವರಿಗೆ ಹಾಗೂ ಬಿಜೆಪಿಗೆ ಅಂಬೇಡ್ಕರ್​ ಅವರ ಹೆಸರು ನುಂಗಲಾರದ ತುತ್ತಾಗಿದೆ. ಬಿಜೆಪಿ ಅಧಿಕಾರಕ್ಕೇರಲು ಮಾತ್ರ ಸಂವಿಧಾನ ಬೇಕು. ಆದರೆ, ಅವರ ಆಶಯ ವಿರೋಧಿಸಿಕೊಂಡು ಬಂದಿರುವ ಬಿಜೆಪಿ ನಾಯಕರಲ್ಲಿ ಅಂಬೇಡ್ಕರ್​ ಬಗ್ಗೆ ಮೊದಲಿಂದಲೂ ತಿರಸ್ಕಾರದ ಭಾವನೆ ಇದೆ ಎಂದು ಆರೋಪಿಸಿದರು.

ಕಳೆದ 10 ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರ ನಡೆಸಿಕೊಂಡು ಬಂದಿರುವ ಬಿಜೆಪಿಯು ನಿರಂತರವಾಗಿ ಸ್ವಾತಂತ್ರ$್ಯ ಹೋರಾಟಗಾರರನ್ನು ಸೇರಿ ಕಾಂಗ್ರೆಸ್​ ಹಿರಿಯ ನಾಯಕರ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ. ಅಂಬೇಡ್ಕರ್​ ಅಂತಹ ಮಹಾನ್​ ಚೇತನ ದೇಶಕ್ಕೆ ಸಂವಿಧಾನದಿಂದಲೇ ಅಧಿಕಾರ ಪಡೆದಿರುವುದನ್ನು ಮರೆತಿದ್ದಾರೆ. ಅಂಬೇಡ್ಕರ್​ ಒಬ್ಬ ವ್ಯಕ್ತಿಯಲ್ಲ ಅವರೊಬ್ಬರು ದೇಶದ ಶಕ್ತಿ ಎಂದರು.

ಜಿಲ್ಲಾ ವಿವಿಧ ಘಟಕಗಳ ಅಧ್ಯಕ್ಷರಾದ ಎಸ್ಸಿ ಘಟಕದ ಕೆ.ಜಯದೇವ್​, ಕಾರ್ಮಿಕ ಘಟಕದ ಹೊನ್ನೇನಹಳ್ಳಿ ಯಲ್ಲಪ್ಪ, ಎಸ್​ಟಿ ಘಟಕದ ನಾಗರಾಜ್​, ಪದವೀಧರ ಘಟಕದ ಸುಧೀರ್​, ಮೀನುಗಾರಿಕೆ ಘಟಕದ ರಂಗನಾಥ್​, ಮಹಿಳಾ ಘಟಕದ ರತ್ನಮ್ಮ, ಬೀದಿಬದಿ ವ್ಯಾಪಾರಸ್ಥ ಘಟಕದ ಮಂಜುನಾಥ್​, ಮುಖಂಡರಾದ ವೆಂಕಟಪತಿಯಪ್ಪ, ರಾಮಯ್ಯ, ನಾಗರಾಜಗೌಡ, ಸಂಜೀವಪ್ಪ, ಹರೀಶ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net